ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ತಂಗುದಾಣ: ಕಾಮಗಾರಿಗೆ ಗ್ರಹಣ

2,212 ತಂಗುದಾಣಗಳಲ್ಲಿ ಕೇವಲ 890 ಪೂರ್ಣ * ಹೆಚ್ಚು ವರಮಾನ ಬರುವಲ್ಲಿ ಮಾತ್ರ ತಂಗುದಾಣ ನಿರ್ಮಿಸುತ್ತಿರುವ ಗುತ್ತಿಗೆ ಕಂಪನಿಗಳು
Last Updated 18 ಅಕ್ಟೋಬರ್ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮುಖ್ಯರಸ್ತೆ ಹಾಗೂ ಉಪಮುಖ್ಯ ರಸ್ತೆಗಳ ಪಕ್ಕದಲ್ಲಿ ಅಗತ್ಯ ಇರುವ ಕಡೆ ಪರಿಸರಸ್ನೇಹಿ ಬಸ್‌ ಪ್ರಯಾಣಿಕರ ತಂಗುದಾಣಗಳನ್ನು ಸ್ಥಾಪಿಸುವ ಕಾಮಗಾರಿಗೆ ಗ್ರಹಣ ಹಿಡಿದಿದೆ.

2,212 ಕಡೆಗಳಲ್ಲಿ ತಂಗುದಾಣ ನಿರ್ಮಿಸಬೇಕಾದ ಕಡೆ ಗುತ್ತಿಗೆದಾರರು 890 ಅನ್ನು ಮಾತ್ರ ಇದುವರೆಗೆ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ತಂಗುದಾಣಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಕಾಮಗಾರಿ ಗುತ್ತಿಗೆ ನೀಡಿ ನಾಲ್ಕು ವರ್ಷಗಳೇ ಕಳೆದರೂ ಬಹುತೇಕ ಕಡೆ ತಂಗುದಾಣ ನಿರ್ಮಾಣವಾಗಿಯೇ ಇಲ್ಲ. ಗುತ್ತಿಗೆದಾರರು ತಮಗೆ ಜಾಹೀರಾತಿನಿಂದ ಹೆಚ್ಚು ವರಮಾನ ಬರುವ ಕಡೆ ಮಾತ್ರ ತಂಗುದಾಣ ನಿರ್ಮಿಸಿದ್ದಾರೆ. ಇನ್ನುಳಿದ ಕಡೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ತಂಗುದಾಣ ನಿರ್ಮಿಸದ ಗುತ್ತಿಗೆದಾರರ ವಿರುದ್ಧ ಬಿಬಿಎಂಪಿಯೂ ಯಾವುದೇ ಕ್ರಮ ಕೈಗೊಂಡಿಲ್ಲ.

ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ತಂಗುದಾಣಗಳ ನಿರ್ಮಾಣ ಮಾಡುತ್ತಿದೆ. ಗುತ್ತಿಗೆ ಸಂಸ್ಥೆಯೇ ತಂಗುದಾಣಗಳ ವಿನ್ಯಾಸ ರೂಪಿಸಿ, ನಿರ್ಮಿಸಿ 20 ವರ್ಷಗಳ ಕಾಲ ಅವುಗಳ ನಿರ್ವಹಣೆ ಮಾಡಿ ಬಳಿಕ ಬಿಬಿಎಂಪಿಗೆ ಹಸ್ತಾಂತರಿಸಬೇಕು (ಡಿಬಿಒಟಿ ಮಾದರಿ). ಬಿಬಿಎಂಪಿಯು ಸೂಚಿಸಿದ ಸ್ಥಳಗಳಲ್ಲಿ ತಂಗುದಾಣ ನಿರ್ಮಿಸಬೇಕು. ಈ ತಂಗುದಾಣಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಗುತ್ತಿಗೆ ಕಂಪನಿಯು ಪ್ರತಿ ನಿಲ್ದಾಣಕ್ಕೆ ವಾರ್ಷಿಕ ₹ 44,100ರಿಂದ ₹ 50,100ರವರೆಗೆ ಶುಲ್ಕ ಹಾಗೂ ಜಾಹೀರಾತು ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು.

ತಂಗುದಾಣಗಳನ್ನು ನಿರ್ಮಿಸುವ ನಾಲ್ಕು ಪ್ಯಾಕೇಜ್‌ಗಳನ್ನು ರೂಪಿಸಿ ಬಿಬಿಎಂಪಿಯ ಸಂಚಾರ ಎಂಜಿನಿಯರಿಂಗ್‌ ಕೋಶವು (ಟಿಇಸಿ) 2016ರಲ್ಲಿ ಟೆಂಡರ್‌ ಕರೆದಿತ್ತು. ಟೈಮ್ಸ್‌ ಇನ್ನೋವೇಟಿವ್‌ ಮೀಡಿಯಾ ಲಿಮಿಟೆಡ್‌ ಕಂಪನಿಗೆ ಎರಡು ಪ್ಯಾಕೇಜ್‌ಗಳ ಗುತ್ತಿಗೆ (1,100 ತಂಗುದಾಣಗಳ ನಿರ್ಮಾಣಕ್ಕೆ) ನೀಡಲಾಗಿದೆ. ಸೈನ್‌ ಪೋಸ್ಟ್‌ ಇಂಡಿಯಾ ಸಂಸ್ಥೆಗೆ 550 ತಂಗುದಾಣಗಳ ನಿರ್ಮಾಣದ ಗುತ್ತಿಗೆ ವಹಿಸಲಾಗಿದೆ. ಈ ಮೂರೂ ಪ್ಯಾಕೇಜ್‌ಗಳ ಗುತ್ತಿಗೆಯನ್ನು 2016ರ ಸೆಪ್ಟೆಂಬರ್‌ನಲ್ಲಿ ನೀಡಲಾಗಿದೆ. ಬೆನಕ ಆಟೋಮೇಷನ್‌ ಸಂಸ್ಥೆಯ ಅನ್ಮೋಲ್‌ ಶ್ರೀನಿವಾಸ್‌ ಅವರಿಗೆ 562 ತಂಗುದಾಣ ನಿರ್ಮಾಣದ ಗುತ್ತಿಗೆಯನ್ನು 2020ರ ಜುಲೈನಲ್ಲಿ ನೀಡಲಾಗಿದೆ.

‘ತಂಗುದಾಣ ನಿರ್ಮಾಣ ಪೂರ್ಣವಾಗಿ ಅವುಗಳಲ್ಲಿ ಜಾಹೀರಾತು ಅಳವಡಿಸಿದ ದಿನದಿಂದ ಗುತ್ತಿಗೆದಾರರು ವಾರ್ಷಿಕ ಶುಲ್ಕ ಹಾಗೂ ಜಾಹೀರಾತು ತೆರಿಗೆ ಕಟ್ಟಬೇಕು. ಈ ಕಾರಣಕ್ಕಾಗಿ ಅವರು ತಂಗುದಾಣಗಳ ನಿರ್ಮಾಣವನ್ನು ಮುಂದೂಡುತ್ತಿದ್ದಾರೆ. ಜಾಹೀರಾತಿಗೆ ಬೇಡಿಕೆ ಇಲ್ಲದ ಕಡೆ ತಂಗುದಾಣ ನಿರ್ಮಿಸುವ ಗೋಜಿಗೇ ಹೋಗಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಜಾಹೀರಾತು– ವಾರ್ಷಿಕ ಶುಲ್ಕ ತೀರಾ ಕಡಿಮೆ’

‘ಪ್ರಯಾಣಿಕರ ತಂಗುದಾಣದಲ್ಲಿ ಅಳವಡಿಸುವ ಜಾಹೀರಾತಿಗೆ ನಿಗದಿಪಡಿಸಿರುವ ವಾರ್ಷಿಕ ಶುಲ್ಕ ತೀರಾ ಕಡಿಮೆಯಾಗಿದೆ. ನಗರದಲ್ಲಿ ಈಗ ಹೊರಾಂಗಣದಲ್ಲಿ ವಾಣಿಜ್ಯ ಜಾಹೀರಾತು ಅಳವಡಿಕೆಗೆ ನಿರ್ಬಂಧವಿದೆ. ಹಾಗಾಗಿ ತಂಗುದಾಣಗಳಲ್ಲಿನ ಜಾಹೀರಾತಿಗೆ ಭಾರಿ ಬೇಡಿಕೆ ಇದೆ. ಆದರೆ, ವರ್ಷಕ್ಕೆ ಕನಿಷ್ಠ ₹ 45 ಸಾವಿರದಿಂದ ಗರಿಷ್ಠ 51,000 ವಾರ್ಷಿಕ ಶುಲ್ಕ ನಿಗದಿಪಡಿಸಲಾಗಿದೆ. ಇದು ಕ್ಷುಲ್ಲಕ ಮೊತ್ತ. ಈ ದರವನ್ನು ನಿಗದಿಪಡಿಸುವ ಮುನ್ನ ಟಿಇಸಿ ಅಧಿಕಾರಿಗಳು ಜಾಹೀರಾತು ವಿಭಾಗದಿಂದ ಸಲಹೆ ಪಡೆದಬೇಕಿತ್ತು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಂಗುದಾಣಗಳ ವಿಶೇಷಗಳೇನು?

* ಈ ತಂಗುದಾಣಗಳ ವಿನ್ಯಾಸ ನಗರದ ಸೌಂದರ್ಯ ಹೆಚ್ಚಿಸುವಂತಿರಬೇಕು. ಮನಬಂದಂತೆ ವಿನ್ಯಾಸ ರೂಪಿಸಲು ಅವಕಾಶ ಇಲ್ಲ. ಇದು ನಗರದ ಅನನ್ಯತೆಗೆ ಪೂರಕವಾಗಿರಬೇಕು.

* ಬಿಎಂಟಿಸಿಯು ನಗರದಲ್ಲಿ ಚತುರ ಸಾರಿಗೆ ವ್ಯವಸ್ಥೆ ಅಳವಡಿಸುವ ಉದ್ದೇಶ ಹೊಂದಿದೆ. ಈ ತಂಗುದಾಣಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು.

* ತಂಗುದಾಣದ ನಿರ್ಮಾಣಕ್ಕೆ ಕಲೆರಹಿತ ಉಕ್ಕನ್ನು ಮಾತ್ರ ಬಳಸಬೇಕು.

* ಟೆಂಡರ್‌ ಷರತ್ತುಗಳ ಪ್ರಕಾರ ತಂಗುದಾಣಗಳ ಬಳಿ ಸ್ಥಳಾವಕಾಶ ಇರುವಲ್ಲಿ ಶೌಚಾಲಯಗಳನ್ನೂ ನಿರ್ಮಿಸಬೇಕು.

ಬಸ್‌ ಪ್ರಯಾಣಿಕರ ತಂಗುದಾಣ ಗುತ್ತಿಗೆ ವಿವರ

ಸಂಸ್ಥೆ; ವಾರ್ಷಿಕ ಶುಲ್ಕ (₹ಗಳಲ್ಲಿ); ಕಾರ್ಯಾದೇಶ ನೀಡಿದ ದಿನ; ನಿರ್ಮಿಸಬೇಕಾದ ತಂಗುದಾಣಗಳು; ಪೂರ್ಣಗೊಂಡಿರುವುದು;

ಅನ್‌ಮೋಲ್‌ ಶ್ರೀನಿವಾಸ್‌; 50,100; 2020 ಜು.28; 562; 0

ಸೈನ್‌ಪೋಸ್ಟ್‌ ಇಂಡಿಯಾ; 45,000; 2016 ಸೆ.16; 550; 338

ಟೈಮ್ಸ್‌ ಇನ್ನೋವೇಟಿವ್‌ ಮೀಡಿಯಾ; 44,100; 2016 ಸೆ.16; 550; 240

ಟೈಮ್ಸ್‌ ಇನ್ನೋವೇಟಿವ್‌ ಮೀಡಿಯಾ; 45,000; 2016 ಸೆ.16; 550; 312

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT