ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ: ಮತ್ತೆ 118 ನೌಕರರು ವಜಾ, ನಾಲ್ಕನೇ ದಿನವೂ ಮುಷ್ಕರ ಮುಂದುವರಿಕೆ

Last Updated 10 ಏಪ್ರಿಲ್ 2021, 22:45 IST
ಅಕ್ಷರ ಗಾತ್ರ

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸತತ ನಾಲ್ಕನೇ ದಿನವೂ ಮುಂದುವರಿಯಿತು. ಇತ್ತ, ಕರ್ತವ್ಯಕ್ಕೆ ಹಾಜರಾಗದಿರುವ ತರಬೇತಿ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಕಾರ್ಯವನ್ನೂ ಬಿಎಂಟಿಸಿ ಮುಂದುವರಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಬಹುತೇಕ ನೌಕರರು ಶನಿವಾರವೂ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಏ.7 ಮತ್ತು 8ರಂದು ಹೊರಡಿಸಿದ ಆದೇಶದಂತೆ ತರಬೇತಿ ಮತ್ತು ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 118 ನೌಕರರನ್ನು ಬಿಎಂಟಿಸಿ ವಜಾ ಮಾಡಿದೆ.

ಇವರಲ್ಲಿ 60 ಮಂದಿ ತರಬೇತಿ ನೌಕರರಾಗಿದ್ದರೆ, 58 ಜನ ಪ್ರೊಬೇಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರವೂ 120 ನೌಕರರನ್ನು ವಜಾಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿತ್ತು.

1,850 ಜನರಿಗೆ ನೋಟಿಸ್‌: ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 55 ವರ್ಷ ಮೇಲ್ಪಟ್ಟ 1,850 ನೌಕರರಿಗೆ ನೋಟಿಸ್‌ ನೀಡಲಾಗಿದ್ದು, ವೈದ್ಯಕೀಯ ದೈಹಿಕ ಕ್ಷಮತೆ ಪ್ರಮಾಣಪತ್ರ ಒದಗಿಸುವಂತೆ ಸೂಚಿಸಿದೆ. ಏ.12ರ ಸಂಜೆಯ ವೇಳೆಗೆ, ಜಿಲ್ಲಾ ವೈದ್ಯಾಧಿಕಾರಿಯಿಂದ ಸಹಿ ಹಾಕಿಸಿಕೊಂಡು ಈ ಪ್ರಮಾಣಪತ್ರ ನೀಡಬೇಕು ಎಂದು ಸಂಸ್ಥೆ ಸೂಚಿಸಿತ್ತು.

‘ಶನಿವಾರ, ಭಾನುವಾರ ರಜೆ ಇದೆ. ಒಂದೇ ದಿನದಲ್ಲಿ ಡಿಎಚ್‌ಒ ಕಡೆಯಿಂದ ಪ್ರಮಾಣಪತ್ರ ಪಡೆಯುವುದು ಕಷ್ಟವಾಗುತ್ತದೆ. ಕೆಲಸದಿಂದ ತೆಗೆಯಬೇಕು ಎಂಬ ದುರುದ್ದೇಶದಿಂದಲೇ ಬಿಎಂಟಿಸಿ ಇಂತಹ ಆದೇಶ ಮಾಡಿದೆ’ ಎಂದು ನೌಕರರೊಬ್ಬರು ದೂರಿದರು.

ನಂತರ, ಆದೇಶದಲ್ಲಿ ಮಾರ್ಪಾಡು ಮಾಡಿದ ಬಿಎಂಟಿಸಿ, ವೈದ್ಯಾಧಿಕಾರಿಯಿಂದ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆಯುವಲ್ಲಿ ತೊಂದರೆ ಉಂಟಾದಲ್ಲಿ, ಸಂಸ್ಥೆಯ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ಹಾಜರಾಗಿ ಪ್ರಮಾಣಪತ್ರ ಪಡೆದು ಸಲ್ಲಿಸಬಹುದು ಎಂದು ಹೇಳಿದೆ.

ವೈದ್ಯಕೀಯ ಪ್ರಮಾಣಪತ್ರ ಹಾಜರು ಪಡಿಸಲು ಸಾಧ್ಯವಾಗದಿದ್ದರೆ, ಅಂತಹ ನೌಕರರು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಖುದ್ದಾಗಿ ಲಿಖಿತ ರೂಪದಲ್ಲಿ ಸಮಜಾಯಿಷಿ ನೀಡಬೇಕು ಎಂದೂ ಸೂಚಿಸಿದೆ. ಇದಕ್ಕೆ ತಪ್ಪಿದರೆ ಅಂತಹ ನೌಕರರು ಸೇವೆಯಿಂದ ನಿವೃತ್ತಿಗೊಳ್ಳಲು ಒಪ್ಪಿದ್ದಾರೆ ಎಂದು ಪರಿಗಣಿಸಲಾಗುವುದು ಎಂದೂ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಅಮಾನವೀಯ: ‘ತರಬೇತಿ ನೌಕರರನ್ನು ವಜಾಗೊಳಿಸುವ ಮತ್ತು ಹಿರಿಯ ನೌಕರರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಬಿಎಂಟಿಸಿಯು ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ನ್ಯಾಯ ಕೇಳಿದರೆ ವಜಾ ಶಿಕ್ಷೆ ನೀಡುತ್ತಿದೆ’ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಂಟಿಸಿಯ 200ಕ್ಕೂ ಹೆಚ್ಚು ಬಸ್‌ಗಳು ಶನಿವಾರ ಕಾರ್ಯಾಚರಣೆ ನಡೆಸಿದವು.

ಮೆಜೆಸ್ಟಿಕ್ ತಲುಪಲು ಹರಸಾಹಸ
ವಾರಾಂತ್ಯವಾಗಿದ್ದರಿಂದ ಮತ್ತು ಸರಣಿ ರಜೆ ಇರುವುದರಿಂದ ಸ್ವಂತ ಊರಿಗೆ ತೆರಳಲು ಸಾವಿರಾರು ಜನ ಕೆಂಪೇಗೌಡ ಬಸ್‌ ನಿಲ್ದಾಣದತ್ತ (ಮೆಜಿಸ್ಟಿಕ್‌) ಧಾವಿಸಿದರು. ಆದರೆ, ಬಿಎಂಟಿಸಿ ಬಸ್‌ ಅಥವಾ ಖಾಸಗಿ ಬಸ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸಬೇಕಾಯಿತು.

‘ಓಲಾ, ಉಬರ್ ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ. ಆಟೊದವರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಮುಷ್ಕರ ಅಂತ್ಯಗೊಳಿಸಲು ಸರ್ಕಾರ ಆದಷ್ಟು ಬೇಗ ಯಾವುದಾದರೂ ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಸಾಮಾನ್ಯ ಜನ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಪ್ರಯಾಣಿಕ ರಮೇಶ್‌ ಎಂಬುವರು ಹೇಳಿದರು.

‘ಮೆಟ್ರೊ ರೈಲಿನ ಮೂಲಕ ಮೆಜೆಸ್ಟಿಕ್‌ ತಲುಪಬೇಕು ಎಂದರೆ ಮೆಟ್ರೊ ಸ್ಮಾರ್ಟ್‌ಕಾರ್ಡ್‌ಗೆ ₹50, ಠೇವಣಿಗೆ ₹50 ಮತ್ತು ಟಿಕೆಟ್‌ ದರಕ್ಕೆ ಕನಿಷ್ಠ ₹50 ಬೇಕಾಗುತ್ತದೆ. ಬಿಎಂಟಿಸಿ ಬಸ್‌ ಇಲ್ಲದೇ ಇರುವುದರಿಂದ ಅನಗತ್ಯವಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ’ ಎಂದು ಕೆಂಗೇರಿಯ ಮಹಾಂತೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT