ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಬಸ್‌ ಇಲ್ಲದೇ ಸ್ವಂತ ವಾಹನಗಳಲ್ಲೇ ಜನರ ಓಡಾಟ!

ಮುಷ್ಕರ ಮುಂದುವರಿಕೆ * ಹೆಚ್ಚಿದ ಜನದಟ್ಟಣೆ * ಖಾಸಗಿ–ಸರ್ಕಾರಿ ಬಸ್‌ ಪೈಪೋಟಿ
Last Updated 11 ಏಪ್ರಿಲ್ 2021, 15:37 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಐದನೇ ದಿನವೂ ಮುಂದುವರಿದಿದ್ದು, ಸಾರ್ವಜನಿಕರು ಭಾನುವಾರ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಂತೆ ಕಂಡುಬಂದರು. ಸ್ವಂತ ವಾಹನ ಇದ್ದವರು ಬೈಕ್, ಕಾರುಗಳಲ್ಲಿ ತಮ್ಮ ಊರಿಗೆ ತೆರಳುವುದು ಸಾಮಾನ್ಯವಾಗಿತ್ತು.

ಸರ್ಕಾರಿ ಬಸ್‌ಗಳ ಸಂಖ್ಯೆ ಕಡಿಮೆಯಿದ್ದರೆ, ಖಾಸಗಿ ಬಸ್‌ಗಳಲ್ಲಿ ದೂರದ ಊರಿಗೆ ನೇರ ಬಸ್‌ ಸೌಲಭ್ಯ ಇರಲಿಲ್ಲ. ಅಲ್ಲದೆ, ಮೆಜೆಸ್ಟಿಕ್ ತಲುಪಲು ಆಟೊ, ಟ್ಯಾಕ್ಸಿಯವರಿಗೆ ಹೆಚ್ಚು ಹಣ ನೀಡುವ ಬದಲು ಸ್ವಂತ ವಾಹನದಲ್ಲಿ ನೇರವಾಗಿ ಊರಿಗೆ ಹೋಗುವುದೇ ಉತ್ತಮ ಎಂದು ನಿರ್ಧಾರ ಮಾಡಿದವರಂತೆ ಜನ ಊರಿನತ್ತ ಮುಖ ಮಾಡಿದ್ದರು.

‘ತುಮಕೂರಿನಿಂದ ಮತ್ತೆ 15 ಕಿ.ಮೀ. ದೂರದಲ್ಲಿರುವ ಹಳ್ಳಿಗೆ ಹೋಗಬೇಕು. ಎರಡು ಕಡೆ ಬಸ್‌ಗಳಿಗೆ ಮತ್ತು ಆಟೊಗೆ ದುಡ್ಡು ಕೊಡುವ ಬದಲು ಬೈಕ್‌ನಲ್ಲಿಯೇ ಕುಟುಂಬ ಸಮೇತ ಊರಿಗೆ ಹೋಗುತ್ತಿದ್ದೇವೆ’ ಎಂದು ಬೈಕ್ ಸವಾರ ರಮೇಶ್‌ ಹೇಳಿದರು.

‘ಚಿತ್ರದುರ್ಗಕ್ಕೆ ಹೋಗಬೇಕು. ಬಸ್‌ಗಳು ಇಲ್ಲದೆ ಸಮಸ್ಯೆಯಾಗಿದೆ. ಖಾಸಗಿ ಬಸ್ ಟಿಕೆಟ್‌, ಆಟೊ ಪ್ರಯಾಣ ದರ ಎಲ್ಲ ಲೆಕ್ಕ ಹಾಕಿದರೆ, ಸ್ವಂತ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಹೋಗುವುದೇ ಉತ್ತಮ ಎನಿಸಿತು’ ಎಂದು ಕಾರಿನಲ್ಲಿ ಕುಟುಂಬ ಸಮೇತ ಹೊರಟಿದ್ದ ಕಿರಣ್‌ ಹೇಳಿದರು.

‘ಬೈಕ್‌ನಲ್ಲಿ ಹೋದರೆ ಟೋಲ್‌ ಕೂಡ ಕಟ್ಟಬೇಕಾಗಿಲ್ಲ. ಪರಿಸ್ಥಿತಿ ನೋಡಿದರೆ ಮತ್ತೆ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಸ್ವಂತ ವಾಹನದಲ್ಲಿಯೇ ಊರಿಗೆ ಹೋಗುವುದು ಒಳ್ಳೆಯದು ಎಂದು ನಿರ್ಧರಿಸಿದೆವು’ ಎಂದು ಹೇಳಿದರು ಬಸವರಾಜ್.

ದಟ್ಟಣೆ:

ನಗರದಲ್ಲಿ ಭಾನುವಾರ ಬಿಎಂಟಿಸಿಯ ಸುಮಾರು 300ಕ್ಕೂ ಹೆಚ್ಚು ಬಸ್‌ಗಳು ರಸ್ತೆಗಿಳಿದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದುದರಿಂದ ಸಮರ್ಪಕ ಸೇವೆ ನೀಡಲು ಸಾಧ್ಯವಾಗಲಿಲ್ಲ. ನಗರದ ವಿವಿಧೆಡೆಯಿಂದ ಮೆಜೆಸ್ಟಿಕ್‌ಗೆ ಬರಲು ಟ್ಯಾಕ್ಸಿ, ಆಟೊಗಳನ್ನೇ ಜನ ಅವಲಂಬಿಸಬೇಕಾಯಿತು.

ಬಿಎಂಟಿಸಿ ಬಸ್‌ ನಿಲ್ದಾಣವಲ್ಲದೆ, ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಬಸ್‌ಗಳು ಇದ್ದುದರಿಂದ ದಟ್ಟಣೆ ಉಂಟಾಯಿತು. ಹೊರ ಊರಿಗೆ ತೆರಳಬೇಕಾದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರಲಿಲ್ಲ. ಅಂದರೆ, ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಇರುತ್ತಿದ್ದಷ್ಟು ಪ್ರಯಾಣಿಕರು ಭಾನುವಾರ ಕಂಡು ಬರಲಿಲ್ಲ.

‘ಸ್ವಂತ ವಾಹನವಿದ್ದವರು ಹೋಗುತ್ತಾರೆ. ಆದರೆ, ಬೈಕ್‌ ಕೂಡ ಇಲ್ಲದ ನಮ್ಮಂಥವರು ಖಾಸಗಿ ಬಸ್‌ಗಳಿಗೆ ಹೆಚ್ಚು ದುಡ್ಡು ಕೊಟ್ಟು ಪ್ರಯಾಣಿಸಲೇಬೇಕಾಗಿದೆ’ ಎಂದು ಅಂಬಿಕಾ ಎಂಬುವರು ಅಳಲು ತೋಡಿಕೊಂಡರು.

ಇಂದು ಪ್ರತಿಭಟನೆ:

ಮುಷ್ಕರವನ್ನು ತೀವ್ರಗೊಳಿಸಲು ನಿರ್ಧರಿಸಿರುವ ನೌಕರರು, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ತಟ್ಟೆ, ಲೋಟ ಬಡಿದುಕೊಂಡು ಧರಣಿ ನಡೆಸಲಿದ್ದಾರೆ.

ಖಾಸಗಿ ಚಾಲಕನಿಂದ ಅಪಘಾತ

ಬಿಎಂಟಿಸಿಯು ತನ್ನ ಬಸ್‌ಗಳನ್ನು ಖಾಸಗಿ ಚಾಲಕರಿಗೆ ಓಡಿಸಲು ಅನುಮತಿ ನೀಡಿತ್ತು. ಅತ್ತಿಬೆಲೆಯಿಂದ ಸರ್ಜಾಪುರದ ಕಡೆಗೆ ಹೊರಟಿದ್ದ ಬಸ್‌ ಭಾನುವಾರ ಮಧ್ಯಾಹ್ನ ಮರವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೆ ಈಡಾಯಿತು. ಬಸ್‌ನಲ್ಲಿದ್ದ ಅನೇಕರಿಗೆ ಗಾಯಗಳಾದವು. ಪ್ರಯಾಣಿಕರು ಚಾಲಕ ಮತ್ತು ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಅನುಭವ ಇಲ್ಲದವರಿಗೆಲ್ಲ ಬಸ್‌ ಓಡಿಸಲು ಬಿಎಂಟಿಸಿ ಅನುಮತಿ ನೀಡುತ್ತಿದೆ. ಸರ್ಕಾರ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿದೆ’ ಎಂದು ಸ್ಥಳೀಯರು ದೂರಿದರು.

ಮತ್ತೆ 122 ನೌಕರರು ವಜಾ

ತರಬೇತಿ ನಿರತ ಮತ್ತು ಪ್ರೊಬೇಷನರಿ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಬಿಎಂಟಿಸಿ ಮುಂದುವರಿಸಿದೆ.

ಐದು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಬೆಂಬಲಿಸಿ ನೇಮಕಾತಿ ನಿಯಮ ಉಲ್ಲಂಘಿಸಿದ ಆರೋಪದಡಿ ಮತ್ತೆ 60 ತರಬೇತಿ ನೌಕರರು ಮತ್ತು 62 ಪ್ರೊಬೇಷನರಿ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಜಾಗೊಳಿಸಲಾಗಿದೆ. ಆ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ನಿಗಮದ 456 ಮಂದಿ ನೌಕರರನ್ನು ವಜಾಗೊಳಿಸಿದಂತಾಗಿದೆ.

ಬಿಎಂಟಿಸಿಯು ಏ.7 ಮತ್ತು 8ರಂದು ನಿಗಮದ 1,484 ಮಂದಿ ತರಬೇತಿ ನಿರತ ನೌಕರರು ಹಾಗೂ 1,293 ಮಂದಿ ಪ್ರೊಬೇಷನರಿ ನೌಕರರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT