ಮಂಗಳವಾರ, ಮಾರ್ಚ್ 2, 2021
19 °C
ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಬಸ್ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ

ಬಸ್‌ ಟರ್ಮಿನಲ್‌ ಕಾಮಗಾರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ರಸ್ತೆ ಮತ್ತು ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಬಸ್ ನಿಲ್ದಾಣಕ್ಕೆ ಸ್ಥಳ ಗುರುತಿಸಲು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಎನ್‌. ಮಂಜುನಾಥ್ ಪ್ರಸಾದ್ ಹಾಗೂ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೈಯಪ್ಪನಹಳ್ಳಿಯಲ್ಲಿ ಹೊಸ ರೈಲ್ವೆ ಟರ್ಮಿನಲ್ ನಿರ್ಮಾಣ ಆಗಲಿದ್ದು, ಸಾರ್ವಜನಿಕರ ಓಡಾಟಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಬೈಯಪ್ಪನಹಳ್ಳಿ ರಸ್ತೆಯನ್ನು ಪರಿಶೀಲಿಸಲಾಯಿತು. ಬೈಯಪ್ಪನಹಳ್ಳಿ ರಸ್ತೆಯು ಬಾಣಸವಾಡಿ ಮತ್ತು ಹಳೇ ಮದ್ರಾಸ್‌ ರಸ್ತೆಗೆ ಸಂಪರ್ಕ ರಸ್ತೆಯಾಗಿದ್ದು, ಈಗಾಗಲೇ ರೈಲ್ವೆ ಇಲಾಖೆ ಮತ್ತು ಪಾಲಿಕೆಯ ಸಹಬಾಗಿತ್ವದಲ್ಲಿ ರೈಲ್ವೆ ಹಳಿ ಬಳಿ ಆರ್‌ಓಬಿ  ಕಾಮಗಾರಿ ಪ್ರಗತಿಯಲ್ಲಿದೆ. ಜೂನ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಯಿತು. ಆರ್‌ಓಬಿ ನಂತರ ಹಳೇ ಮದ್ರಾಸ್ ರಸ್ತೆ ಕಡೆಗೆರಸ್ತೆಯು ಕಿರಿದಾಗಿದ್ದು, 4 ಪಥದ ರಸ್ತೆ ನಿರ್ಮಾಣಕ್ಕೆ ವಿನ್ಯಾಸ ಮತ್ತು ಯೋಜನೆ ರೂಪಿಸಲು ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದೆ. ಈ ಜಂಕ್ಷನ್‌ನಲ್ಲಿ ನಿತ್ಯ ಸುಮಾರು 1,500 ಬಸ್‌ಗಳು ಸಂಚರಿಸುತ್ತಿದ್ದು, ರಸ್ತೆ ಮಾರ್ಗದಲ್ಲಿ ಬಸ್‌ಗಳು ನಿಲ್ಲುವುದರಿಂದ ಈ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಇದರಿಂದ ಮೆಟ್ರೊ ಕಾಮಗಾರಿಗೂ ಅಡಚಣೆಯಾಗುತ್ತಿದೆ. ಜಂಕ್ಷನ್ ಬಳಿ 1 ಎಕರೆ ಪಾಲಿಕೆಯ ಜಾಗವಿದ್ದು, ಅಲ್ಲಿ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಬಿಎಂಆರ್‌ಸಿಎಲ್ ವತಿಯಿಂದ ಬಸ್ ಟರ್ಮಿನಲ್ ಹಾಗೂ ರಸ್ತೆ ನಿರ್ಮಾಣ ಮಾಡಲು ಯೋಜಿಸಲಾಗಿದೆ. 

ಬಸ್ ಟರ್ಮಿನಲ್ ನಿರ್ಮಾಣ ಮಾಡಲು ಪಾಲಿಕೆ, ಬಿಎಂಟಿಸಿ, ಸಂಚಾರ ಪೊಲೀಸರು ಹಾಗೂ ಮೆಟ್ರೊ ನಿಗಮದ ಅಧಿಕಾರಿಗಳು ಸೇರಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಬೇಕು ಎಂದು ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸಕೋಟೆ ಮತ್ತು ಹೊರವರ್ತುಲ ರಸ್ತೆ ಕಡೆ ಸಂಚರಿಸುವ ಬಸ್‌ಗಳಿಗೆ ನಿಗಮದ ವತಿಯಿಂದ ಬಸ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ.  ವಾಹನಗಳ ಸುಗಮ ಸಂಚಾರಕ್ಕಾಗಿ ಹೊಸ ರಸ್ತೆ ನಿರ್ಮಾಣ ಸಹ ಮಾಡಲಾಗುತ್ತಿದ್ದು, ನೀಲನಕ್ಷೆ ಸಿದ್ದಪಡಿಸಲಾಗಿದೆ. ಬಸ್ ಟರ್ಮಿನಲ್ ಸ್ಥಾಪನೆಗೆ ಪಾಲಿಕೆ ಅಗತ್ಯ ಸ್ಥಳ ನೀಡಲಿದ್ದು, ಕಾಮಗಾರಿ ಪ್ರಾರಂಭಿಸಬಹುದು. ಕಾಮಗಾರಿ ನಡೆಯುವ ವೇಳೆ ಸುಗಮ ವಾಹನ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಿಕೊಂಡು ‌ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಅವರಿಗೆ ಸೂಚನೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು