ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ: ಕಂದಾಯ ವಿಭಾಗಕ್ಕೆ ಬೇಡ- ಮನವಿ

Published : 26 ಆಗಸ್ಟ್ 2024, 16:29 IST
Last Updated : 26 ಆಗಸ್ಟ್ 2024, 16:29 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಆರೋಗ್ಯಕ್ಕೆ ಸಂಬಂಧಿಸಿರದ (ನಾನ್‌ ಹೆಲ್ತ್‌) ಉದ್ದಿಮೆ ಪರವಾನಗಿ’ ನೀಡುವ ಜವಾಬ್ದಾರಿಯನ್ನು ಕಂದಾಯ ವಿಭಾಗಕ್ಕೆ ವಹಿಸಬಾರದು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.‌

‘ಪಾಲಿಕೆಯ ಸಾರ್ವಜನಿಕ ಆರೋಗ್ಯ ವಿಭಾಗ ಉದ್ದಿಮೆ ಪರವಾನಗಿ ನೀಡುತ್ತಿದೆ. ಆದರೆ, ‘ಆರೋಗ್ಯಕ್ಕೆ ಸಂಬಂಧಿಸಿರದ ಉದ್ದಿಮೆಗಳ ಪರವಾನಗಿ’ ನೀಡುವ ಪ್ರಕ್ರಿಯೆಯನ್ನು ಕಂದಾಯ ವಿಭಾಗಕ್ಕೆ ವಹಿಸಲು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಪ್ರಸ್ತಾವ ಸಲ್ಲಿಸಿದ್ದಾರೆ. ಇದನ್ನು ಕೈ ಬಿಡಬೇಕು’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಒತ್ತಾಯಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಪತ್ರ ಬರೆದಿರುವ ಅಮೃತ್‌ರಾಜ್‌, ‘ಎಲ್ಲ ಉದ್ದಿಮೆಗಳಲ್ಲೂ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದು ಆರೋಗ್ಯ, ನೈರ್ಮಲ್ಯ ವಿಭಾಗಕ್ಕೆ ಸಂಬಂಧಿಸಿರುತ್ತದೆ. ಅಗ್ನಿ ಸುರಕ್ಷತಾ ಉಪಕರಣಗಳ ಬಳಕೆ  ಜೊತೆಗೆ ಗಾಳಿ–ಬೆಳಕು ವ್ಯವಸ್ಥೆ, ಕಾರ್ಮಿಕರ ಆರೋಗ್ಯದ ವಿಷಯವೂ ಇರುತ್ತದೆ. ಇದೆಲ್ಲದರ ಪರಿಶೀಲನೆಗೆ ಆರೋಗ್ಯ ಪರಿವೀಕ್ಷಕರು ತರಬೇತಿ ಪಡೆದಿರುತ್ತಾರೆ. ಅವರೇ ಪರವಾನಗಿ ಪ್ರಕ್ರಿಯೆ ನಡೆಸಬೇಕು’ ಎಂದು ಹೇಳಿದ್ದಾರೆ.

‘ಕಂದಾಯ ವಿಭಾಗದಲ್ಲಿ ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರು ಉದ್ದಿಮೆಗಳಿಗೆ ಪರವಾನಗಿ ನೀಡುವ ತರಬೇತಿ ಪಡೆದಿಲ್ಲ. ಜೊತೆಗೆ, ಕಂದಾಯ ವಿಭಾಗದ ಸಿಬ್ಬಂದಿಗೆ ತೆರಿಗೆ ಸಂಗ್ರಹ, ಖಾತಾ ವರ್ಗಾವಣೆ, ಖಾತಾ ವಿಭಜನೆ ಸೇರಿದಂತೆ, ಆಸ್ತಿ, ಜಾಹೀರಾತು ವಿಭಾಗದ ಕೆಲಸಗಳ ನಿರ್ವಹಣೆ ಇರುತ್ತದೆ. ಇದೀಗ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕೂಡ ಆರಂಭವಾಗಿದ್ದು, ಅದನ್ನೂ ಕಂದಾಯ ವಿಭಾಗದ ಸಿಬ್ಬಂದಿಯೇ ನಿರ್ವಹಿಸಬೇಕಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT