ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎ ನಿವೇಶನ ಖರೀದಿಗೆ 27 ಸಂಸ್ಥೆಗಳ ಆಸಕ್ತಿ

ಮೂಲಸೌಕರ್ಯ ನಿವೇಶನ ಮಾರಾಟಕ್ಕೆ ಆಗಸ್ಟ್‌ನಲ್ಲಿ ಆಹ್ವಾನ ನೀಡಿದ್ದ ಬಿಡಿಎ
Last Updated 3 ಡಿಸೆಂಬರ್ 2020, 4:39 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಿವಿಧ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಿರುವ ನಾಗರಿಕ ಮೂಲಸೌಕರ್ಯ (ಸಿ.ಎ) ನಿವೇಶನಗಳನ್ನು ಖರೀದಿಸಲು 27 ಸಂಸ್ಥೆಗಳು ಮುಂದೆ ಬಂದಿವೆ.

ವಿವಿಧ ಬಡಾವಣೆಗಳಲ್ಲಿ ಇದುವರೆಗೆ ಒಟ್ಟು 1,257 ಸಿ.ಎ. ನಿವೇಶನಗಳನ್ನು ನಿರ್ದಿಷ್ಟ ಉದ್ದೇಶಗಳಿಗೆ ವಿವಿಧ ಸಂಸ್ಥೆಗಳಿಗೆ ಪ್ರಾಧಿಕಾರ ಗುತ್ತಿಗೆಗೆ ನೀಡಿದೆ.

ಸಿ.ಎ. ನಿವೇಶನಗಳನ್ನು ಸಂಸ್ಥೆಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗುತ್ತಿತ್ತು. ಈ ಅವಧಿ ಮುಗಿದ ಬಳಿಕ ಸಂಸ್ಥೆಗಳು ನಿಗದಿತ ಶುಲ್ಕ ಪಾವತಿಸಿ ಗುತ್ತಿಗೆ ನವೀಕರಿಸಬಹುದಾಗಿತ್ತು. ನಿವೇಶನದ ಸಂಪೂರ್ಣ ಮಾಲೀಕತ್ವವನ್ನು ಸಂಸ್ಥೆಗಳಿಗೆ ಬಿಟ್ಟುಕೊಡುವುದಕ್ಕೆ ಅವಕಾಶ ಇರಲಿಲ್ಲ. ನಿವೇಶನಕ್ಕೆ ನಿರ್ದಿಷ್ಟ ದರ ನಿಗದಿಪಡಿಸಿ, ಮಾಲೀಕತ್ವವನ್ನು ತಮಗೇ ಬಿಟ್ಟುಕೊಡುವಂತೆ ಅನೇಕ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.

ಈ ನಿವೇಶನಗಳ ಮಾಲೀಕತ್ವವನ್ನು ಆ ಸಂಸ್ಥೆಗಳಿಗೇ ಮಾರಾಟ ಮಾಡುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯು 1976ರ ಬಿಡಿಎ ಕಾಯ್ದೆಯ ಸೆಕ್ಷನ್‌ 69ರ ಅಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಬಿಡಿಎ ಕಾಯ್ದೆ (ಸಿ.ಎ ನಿವೇಶನ ಹಂಚಿಕೆ) ನಿಯಮಗಳಿಗೆ ತಿದ್ದುಪಡಿ ತಂದಿತ್ತು. ಹಿಂದಿನ ನಿಯಮಗಳಿಗೆ ‘10–ಎ’ ನಿಯಮವನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಸಿ.ಎ. ನಿವೇಶನಗಳ ಮಾರಾಟಕ್ಕೆ ಮಾನದಂಡಗಳನ್ನು ರೂಪಿಸಿತ್ತು. ಪರಿಷ್ಕೃತ ನಿಯಮಾವಳಿಯನ್ನು 2020ರ ಜುಲೈ 28ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಆಸಕ್ತ ಸಂಸ್ಥೆಗಳಿಂದ ಪ್ರಾಧಿಕಾರವು ಆಗಸ್ಟ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು.

ಸಿ.ಎ. ನಿವೇಶನವನ್ನು ಬಳಸುತ್ತಿರುವ ಸಂಸ್ಥೆಗಳು ಬಿಡಿಎ ನಿಗದಿಪಡಿಸಿದಷ್ಟು ಮೌಲ್ಯ ಪಾವತಿಸಿ ಅದನ್ನು ಖರೀದಿಸಲು ಹೊಸ ನಿಯಮ ಅವಕಾಶ ಕಲ್ಪಿಸಿದೆ. ಬಿಡಿಎ ನಿಯಮ 7ರ ಉಪವಿಧಿ 2ರ ಅಡಿ ಸ್ಥಾಪಿಸಿರುವ ಸಿ.ಎ ನಿವೇಶನ ಹಂಚಿಕೆ ಸಮಿತಿಯು ನಿವೇಶನದ ಮೌಲ್ಯವನ್ನು ಅಂತಿಮಗೊಳಿಸಲಿದೆ.ನಿವೇಶನದ ಮೌಲ್ಯವು ಅದರ ಈಗಿನ ಮಾರ್ಗಸೂಚಿ ದರಕ್ಕಿಂತ ಕಡಿಮೆ ಇರುವಂತಿಲ್ಲ.

‘ಗುತ್ತಿಗೆ ಅವಧಿ ಪೂರ್ಣಗೊಂಡಿರದೇ ಇರುವ ನಿವೇಶನಗಳನ್ನು ಸಂಸ್ಥೆಯು ಖರೀದಿಸುವುದಾರರೆ ಆ ಸಂಸ್ಥೆ ಈಗಾಗಲೇ ಬಿಡಿಎಗೆ ಪಾವತಿಸಿರುವ ಶುಲ್ಕವನ್ನು ಪ್ರೋ–ರೇಟಾ ಆಧಾರದಲ್ಲಿ ಲೆಕ್ಕ ಹಾಕಿ ನಿವೇಶನದ ಒಟ್ಟು ಮೌಲ್ಯದಲ್ಲಿ ಆ ಮೊತ್ತವನ್ನು ಕಡಿತಗೊಳಿಸುತ್ತೇವೆ. ಬಾಕಿ ಮೊತ್ತವನ್ನು ಸಂಸ್ಥೆಯು ಮೂರು ಕಂತುಗಳಲ್ಲಿ ಪಾವತಿಸಬಹುದು. ಮೊದಲ ಕಂತನ್ನು ಬಿಡಿಎ ಬೇಡಿಕೆ ನೋಟಿಸ್‌ ಸಲ್ಲಿಸಿದ 72 ಗಂಟೆಗಳ ಒಳಗೆ ಪಾವತಿಸಬೇಕು. ಎರಡನೇ ಕಂತನ್ನು 45 ದಿನಗಳ ಒಳಗೆ ಹಾಗೂ ಅಂತಿಮ ಕಂತನ್ನು 120 ದಿನಗಳ ಒಳಗೆ ಪಾವತಿ ಮಾಡಬೇಕು. ಬಿಡಿಎ ಜೊತೆಗೆ ಕ್ರಯಪತ್ರವನ್ನು ಮಾಡಿಕೊಂಡ ದಿನದಿಂದ ಸಂಸ್ಥೆಯು ನಿವೇಶನದ ಪೂರ್ಣ ಮಾಲೀಕತ್ವವನ್ನು ಪಡೆಯಲಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮೂಲಸೌಕರ್ಯ ನಿವೇಶನವನ್ನು ಖರೀದಿಸುವುದು ಅವುಗಳನ್ನು ಗುತ್ತಿಗೆಗೆ ಪಡೆದ ಸಂಸ್ಥೆಗಳ ಆಯ್ಕೆಗೆ ಬಿಟ್ಟದ್ದು. ಹಾಗಾಗಿ ಇವುಗಳ ಮಾರಾಟದಿಂದ ಇಂತಿಷ್ಟೇ ವರಮಾನ ಬರಲಿದೆ ಎಂಬುದನ್ನು ಈಗಲೇ ಅಂದಾಜು ಮಾಡಲಿಕ್ಕಾಗದು. ಈಗಾಗಲೇ 27 ನಿವೇಶನಗಳ ಖರೀದಿಗೆ ಸಂಸ್ಥೆಗಳು ಮುಂದೆ ಬಂದಿವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಿ.ಎ. ನಿವೇಶನಗಳನ್ನು ಗುತ್ತಿಗೆಗೆ ಪಡೆದವರು ಶುಲ್ಕ ಬಾಕಿ ಇರಿಸಿಕೊಂಡಿದ್ದರೆ, ಅದನ್ನು ಚುಕ್ತಾ ಮಾಡಿದ ಬಳಿಕವಷ್ಟೇ ಅವರಿಗೆ ಆ ನಿವೇಶನ ಖರೀದಿಸುವ ಅವಕಾಶ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಿ.ಎ. ನಿವೇಶನ ಮಾರಾಟ– ಷರತ್ತುಗಳೇನು?

ಸಂಸ್ಥೆಯು ಮೂಲಸೌಕರ್ಯ ನಿವೇಶನವನ್ನು ವಿಭಜಿಸುವಂತಿಲ್ಲ.

ನಿವೇಶನಕ್ಕೆ ಹಾಗೂ ಕಟ್ಟಡಕ್ಕೆ ತೆರಿಗೆ, ಶುಲ್ಕ ಹಾಗೂ ಸೆಸ್‌ ಕಟ್ಟುವ ಹೊಣೆಯು ಖರೀದಿಸುವ ಸಂಸ್ಥೆಯದ್ದು.

ಕ್ರಯಪತ್ರ ಮಾಡಿಕೊಂಡ 10 ವರ್ಷಗಳ ಬಳಿಕ ಸಿ.ಎ ನಿವೇಶನವನ್ನು ಸಂಸ್ಥೆಯು ಮಾರಾಟ ಮಾಡಬಹುದು.

ಮಾರಾಟ ಮಾಡುವ ಮುನ್ನ ಬಿಡಿಎ ಗಮನಕ್ಕೆ ತರುವುದು ಕಡ್ಡಾಯ

ಮೂಲಸೌಕರ್ಯ ನಿವೇಶನವನ್ನು ಯಾವ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿತ್ತೋ ಅದಕ್ಕೆ ಮಾತ್ರ ಬಳಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT