ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲವರಿಗೆ ಸಿಗದ ಸಚಿವಗಿರಿ: ಆಕ್ರೋಶ

ಬಿಜೆಪಿ ವರಿಷ್ಠರ ವಿರುದ್ಧ ಹರಿ ಹಾಯ್ದ ಹಲವು ಶಾಸಕರ ಬೆಂಬಲಿಗರು
Last Updated 5 ಆಗಸ್ಟ್ 2021, 20:21 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ವಂಚಿತರಾಗಿರುವ ಶಾಸಕರು ಮತ್ತು ಅವರ ಬೆಂಬಲಿಗರ ಅಸಮಾಧಾನವೂ ಹೊರಬಿದ್ದಿದೆ. ಕೆಲವು ಶಾಸಕರು ನೇರವಾಗಿ ಸಿಟ್ಟು ಹೊರ ಹಾಕಿದ್ದರೆ, ಹಲವು ಶಾಸಕರ ಬೆಂಬಲಿಗರು ಬಿಜೆಪಿ ವರಿಷ್ಠರ ವಿರುದ್ಧ ಹರಿ ಹಾಯ್ದಿದ್ದಾರೆ.

ಹಾವೇರಿ ಶಾಸಕ ನೆಹರೂ ಓಲೇಕಾರ್‌ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧವೇ ಆರೋಪ ಮಾಡಿದ್ದಾರೆ. ತಮಗೆ ಸಚಿವ ಸ್ಥಾನ ಕೈತಪ್ಪಲು ಮುಖ್ಯಮಂತ್ರಿಯೇ ಕಾರಣ ಎಂದು ದೂರಿದ್ದಾರೆ. ಓಲೇಕಾರ್‌ ಬೆಂಬಲಿಗರು ಉರುಳು ಸೇವೆಯ ಮೂಲಕ ತಮ್ಮ ಕೋಪ ಪ್ರದರ್ಶಿಸಿದ್ದಾರೆ.

ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಸಂಪುಟ ಸೇರುವ ಖಚಿತ ವಿಶ್ವಾಸದಲ್ಲಿದ್ದರು. ಕೊನೆಯ ಹಂತದಲ್ಲಿ ಅವಕಾಶ ಕೈತಪ್ಪಿದ್ದರಿಂದ ಸಿಟ್ಟಿಗೆದ್ದಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ನೇರವಾಗಿಯೇ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರದುರ್ಗ ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ‘ಬಿಜೆಪಿ ಎಲ್ಲ ಚುನಾವಣೆಗಳಲ್ಲೂ ಗೊಲ್ಲ ಸಮುದಾಯವನ್ನು ಬಳಸಿ
ಕೊಂಡಿದ್ದು, ಸಂಪುಟ ವಿಸ್ತರಣೆಯಲ್ಲಿ ಮೋಸ ಮಾಡಿದೆ. ಇದನ್ನು ಖಂಡಿಸಿ ವಿಧಾ
ನಸೌಧಕ್ಕೆ ಮುತ್ತಿಗೆ ಹಾಕುವ ಕುರಿತು ಯೋಚಿಸುತ್ತಿದ್ದೇವೆ’ ಎಂದಿದ್ದಾರೆ.

ಸುರಪುರ ಶಾಸಕ ರಾಜು ಗೌಡ, ತೇರದಾಳ ಶಾಸಕ ಸಿದ್ದು ಸವದಿ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಸೇರಿದಂತೆ ಕೆಲವರು ನೇರವಾಗಿಯೇ ಅತೃಪ್ತಿ ಹೊರಹಾಕಿದ್ದಾರೆ. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದಾರೆ.

ಟ್ವಿಟರ್‌ನಲ್ಲಿ ವ್ಯಂಗ್ಯ: ತಮಗೆ ಸಂಪುಟ ದಲ್ಲಿ ಅವಕಾಶ ದೊರಯದೇ ಇರುವ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಎಸ್‌.ಎ. ರಾಮದಾಸ್‌, ‘ಪಕ್ಷ ಕಟ್ಟಿ ಬೆಳೆಸಿ, ಅರ್ಹತೆ ಹೊಂದಿ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ನೂತನ ಸಚಿವರಿಗೆ ಅಭಿನಂದನೆಗಳು’ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಸ್ವಾಮೀಜಿ ಅಸಮಾಧಾನ: ಭೋವಿ ಸಮುದಾಯದ ಯಾರಿಗೂ ಸಂಪುಟದಲ್ಲಿ ಅವಕಾಶ ನೀಡದೇ ಇರುವುದಕ್ಕೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿ ಮೇಲ್ವರ್ಗದ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ತಮ್ಮ ಕ್ಷೇತ್ರದ ಶಾಸಕರು ಸಚಿವರಾಗುತ್ತಾರೆ ಎಂಬ ಆಸೆಯಿಂದ ರಾಜ್ಯದ ವಿವಿಧೆಡೆಯಿಂದ ಜನರು ರಾಜಭವನದತ್ತ ಬಂದಿದ್ದರು. ಆದರೆ, ತಮ್ಮ ನಾಯಕರಿಗೆ ಸಂಪುಟದಲ್ಲಿ ಅವಕಾಶ ದೊರಕಿಲ್ಲ ಎಂಬುದು ತಿಳಿಯುತ್ತಿದ್ದಂತೆಯೇ ಗುಂಪುಗೂಡಿ ಅಸಮಾಧಾನ ಹೊರಹಾಕುವ ಪ್ರಯತ್ನವನ್ನೂ ಕೆಲವರು ಮಾಡಿದರು.

‘ಪಕ್ಷದ ನಿರ್ಧಾರದಿಂದ ಆಘಾತ

‘ಗೊಲ್ಲ ಸಮುದಾಯದ ಏಕೈಕೆ ಪ್ರತಿನಿಧಿಯಾದ ನಾನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಲಿಲ್ಲ, ಭ್ರಷ್ಟಾಚಾರದ ಆರೋಪ ಸುತ್ತಿಕೊಂಡಿರಲಿಲ್ಲ. ಆದರೆ, ಪಕ್ಷದ ಇಂದಿನ ನಿರ್ಧಾರ ಘಾಸಿ ಉಂಟು ಮಾಡಿದೆ’ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿದೆ. ಒಂದೇ ಮನೆಯಲ್ಲಿ ಎರಡು, ಮೂರು ಅಧಿಕಾರ ನೀಡಲಾಗಿದೆ. ಯಾವುದೇ ಆರೋಪ ಇಲ್ಲದ ಮತ್ತೊಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಿದ್ದರೆ ಬೇಸರವಾಗುತ್ತಿರಲಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಶಿರಾ ಉಪಚುನಾವಣೆ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಗೊಲ್ಲ ಸಮುದಾಯದ ಮತಗಳು ಸಂಪೂರ್ಣವಾಗಿ ಪಕ್ಷದ ಅಭ್ಯರ್ಥಿಗಳಿಗೆ ಬೀಳುವಂತೆ ಶ್ರಮಿಸಿದ್ದೆ. ಆದರೆ ಪಕ್ಷ ಎಲ್ಲವನ್ನು ಮರೆತು ಜಾಣ ಕುರುಡನಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ’ ಎಂದಿದ್ದಾರೆ.

‘ಮಂತ್ರಿ ಸ್ಥಾನಕ್ಕೆ ಭಿಕ್ಷೆ ಬೇಡುವುದಿಲ್ಲ’

ಭಿಕ್ಷೆ ಬೇಡಿ ಮಂತ್ರಿ ಸ್ಥಾನ ಪಡೆಯುವಂತ ಪರಿಸ್ಥಿತಿ ನನಗೆ ಬಂದಿಲ್ಲ. ಬಕೆಟ್ ಹಿಡಿದು ಸಚಿವ ಆಗುವ ಅವಶ್ಯಕತೆ ಇಲ್ಲ. ಸಚಿವರ ಪಟ್ಟಿಯಲ್ಲಿ ಹೆಸರು ಪದೇ ಪದೇ ಕೈತಪ್ಪುತ್ತಿದೆ. ಪಕ್ಷ ತಾಯಿ ಇದ್ದಂತೆ, ತಾಯಿಗೆ ದ್ರೋಹ ಮಾಡುವ ಪ್ರಶ್ನೆ ಇಲ್ಲ.

ಮಾತನಾಡದೆ ಇರುವುದೇ ನನ್ನ ವೈಫಲ್ಯ ಇರಬಹುದು. ಯಡಿಯೂರಪ್ಪ ಅವರು ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಕಣ್ಣೀರು ಹಾಕಿದರು. ಅವರ ಕಣ್ಣಲ್ಲಿ ನೀರು ತರಿಸಿದ ಕೊರಗು ಸದಾ ನನ್ನನ್ನು ಕಾಡುತ್ತದೆ.

– ರಾಜುಗೌಡ, ಸುರಪುರ ಶಾಸಕ

–––

ಪಕ್ಷಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಸಚಿವ ಸ್ಥಾನ ಕೊಡುವುದಾಗಿ ಹೇಳಿ ಮುಖ್ಯಮಂತ್ರಿ ಮೋಸ ಮಾಡಿದ್ದಾರೆ. ಪಟ್ಟಿ ಸಿದ್ಧಪಡಿಸಿದ ಮುಖ್ಯಮಂತ್ರಿಯೇ ನಮ್ಮ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ನಮ್ಮ ವಿನಂತಿ ಕಡೆಗಣಿಸಿದ್ದಾರೆ. ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ.

–ನೆಹರು ಓಲೇಕಾರ್, ಹಾವೇರಿ ಶಾಸಕ

––––

ನಮ್ಮಂತವರು ಲೆಕ್ಕಕ್ಕೇ ಇಲ್ಲ. ನಮಗಿಂತ ಕಿರಿಯರಿಗೆ, ನಾನೇ ಪಕ್ಷಕ್ಕೆ ಕರೆತಂದವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ನಮ್ಮಲ್ಲಿ ಕೊರತೆ ಏನಿದೆ ಎಂಬುದನ್ನು ಹೈಕಮಾಂಡ್‌ ಬಳಿಯೇ ಕೇಳಬೇಕು. ಮೌನವಾಗಿ, ಪಕ್ಷಕ್ಕೆ ನಿಷ್ಠರಾಗಿ ಇದ್ದವರಿಗೆ ಅವಕಾಶ ಸಿಗಲ್ಲ. ಪಕ್ಷಕ್ಕೆ ದ್ರೋಹ ಮಾಡುವವರಿಗೆ, ಬೆನ್ನಿಗೆ ಚೂರಿ ಹಾಕುವವರಿಗೇ ಅವಕಾಶ ನೀಡಲಾಗುತ್ತಿದೆ. ನಮ್ಮ ನಸೀಬು ಚೆನ್ನಾಗಿಲ್ಲ, ದೇವರೇನು ಮಾಡುತ್ತಾನೆ. ಲಾಬಿ ಮಾಡುವುದಿಲ್ಲ, ‍ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ. ಪಕ್ಷವೇ ಉಚ್ಚಾಟನೆ ಮಾಡಿದರೂ ಬಿಜೆಪಿಗೇ ಮತ ಹಾಕುತ್ತೇನೆ.

–ಸಿದ್ದು ಸವದಿ, ತೇರದಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT