ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ ತೆರವು: ತೆರವಾಗಿದ್ದ ಕಲ್ಯಾಣ ಮಂಟಪಕ್ಕೂ ನುಗ್ಗಿತು ನೀರು

ರಾಜಕಾಲುವೆ ಒತ್ತುವರಿ ತೆರವು: ಅನುಮಾನ ವ್ಯಕ್ತಪಡಿಸಿದ ಮಹಾಲೇಖಪಾಲರು
Last Updated 20 ಸೆಪ್ಟೆಂಬರ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದಲ್ಲಿ ಪ್ರಾಥಮಿಕ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಪದ್ಮಾವತಿ ಮತ್ತು ಮೀನಾಕ್ಷಿ ಕಲ್ಯಾಣ ಮಂಟಪಗಳನ್ನು 2016ರ ಆ. 18ರಂದೇ ತೆರವುಗೊಳಿಸಲಾಗಿದೆ ಎನ್ನುತ್ತದೆ ಬಿಬಿಎಂಪಿಯು ಲೆಕ್ಕಪರಿಶೋಧನೆಗೆ ನೀಡಿದ ಮಾಹಿತಿ. ಆದರೆ, 2020ರ ಅ.20 ರಂದು ಈ ಕಲ್ಯಾಣ ಮಂಟಪದ ಭೋಜನಶಾಲೆಗೆ ನೀರು ನುಗ್ಗಿದೆ!

ನಗರದಲ್ಲಿ ಮಳೆನೀರು ನಿರ್ವಹಣೆ ಕುರಿತ ವರದಿಯಲ್ಲಿ ಮಹಾಲೇಖಪಾಲರುರಾಜಕಾಲುವೆ ಒತ್ತುವರಿ ತೆರವು ಸಂಬಂಧ ಬಿಬಿಎಂಪಿ ನೀಡಿರುವ ಅಧಿಕೃತ ಮಾಹಿತಿಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಪುಷ್ಟೀಕರಿಸಲು, ತೆರವುಗೊಂಡ ಕಲ್ಯಾಣ ಮಂಟಪಕ್ಕೆ ಮತ್ತೆ ನೀರು ನುಗ್ಗಿದ ಪ್ರಕರಣದ ಉದಾಹರಣೆಯನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಜರಾಜೇಶ್ವರಿ ನಗರದ ಪ್ರಾಥಮಿಕ ರಾಜಕಾಲುವೆಯ (ಆರ್‌ಎನ್ 193) ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು. ಆದರೆ, 2018ರ ಜೂನ್‌ 11ರಂದು ಜಂಟಿ ಭೌತಿಕ ತಪಾಸಣೆ ನಡೆಸಿದಾಗ ರಾಜಕಾಲುವೆಯ ಎರಡು ಬದಿಗಳಲ್ಲಿ ಕಲ್ಯಾಣ ಮಂಟಪಗಳು ಹಾಗೆಯೇ ಇದ್ದವು. ಈ ಎರಡೂ ಕಟ್ಟಡಗಳೂ ರಾಜಕಾಲುವೆ ಮೇಲೆಯೇ ಕಾಂಕ್ರೀಟ್‌ ವೇದಿಕೆಯಿಂದ ಸಂಪರ್ಕ ಹೊಂದಿರುವುದು ಕಂಡು ಬಂತು ಎಂದು ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿದೆ. ಈ ಕುರಿತ ಛಾಯಾಚಿತ್ರಗಳನ್ನೂ ವರದಿಯಲ್ಲಿ ಪ್ರಕಟಿಸಲಾಗಿದೆ.

ಬಿಬಿಎಂಪಿಯು ಮೊದಲು ರಾಜಕಾಲುವೆಗಳು 1,988 ಒತ್ತುವರಿಯಾಗಿರುವ ಪಟ್ಟಿಯನ್ನು ನೀಡಿತು. ಲೆಕ್ಕಪರಿಶೋಧನೆ ಸಮಯದಲ್ಲಿ 70 ರಾಜಕಾಲುವೆಗಳನ್ನು ಜಂಟಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ 23 ಗಮನಾರ್ಹ ಒತ್ತುವರಿಗಳು ಗಮನಕ್ಕೆ ಬಂದಿವೆ. ಆದರೆ, ಇವುಗಳಲ್ಲಿ 16 ಒತ್ತುವರಿ ಪ್ರಕರಣಗಳು ಬಿಬಿಎಂಪಿ ಒದಗಿಸಿದ ಒತ್ತುವರಿ ಪಟ್ಟಿಯಲ್ಲಿ ಇರಲೇ ಇಲ್ಲ. ಹಾಗಾಗಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಬಳಿ ಇರುವ ಒತ್ತುವರಿ ಕುರಿತ ಪರಿಪೂರ್ಣತೆ ಮತ್ತು ವಿಶ್ವಾಸಾರ್ಹತೆಯೇ ಅನುಮಾನಾಸ್ಪದ ಎಂದು ಮಹಾಲೇಖಪಾಲರ ವರದಿ ಅಭಿಪ್ರಾಯಪಟ್ಟಿದೆ.

2020ರ ಡಿಸೆಂಬರ್‌ನಲ್ಲಿ ನೀಡಲಾದ ಮಾಹಿತಿ ಪರಿಷ್ಕೃತ ಪ್ರಕಾರ, ಬಿಬಿಎಂಪಿಯು 2,626 ಒತ್ತುವರಿಗಳನ್ನು ಗುರುತಿಸಿತ್ತು. ಅವುಗಳಲ್ಲಿ 2016–17ನೇ ಸಾಲಿನಲ್ಲಿ 428 ಒತ್ತುವರಿಗಳನ್ನು, 2018–19ರ ನಂತರ 1,484 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. 714 ಒತ್ತುವರಿಗಳ ತೆರವು ಬಾಕಿ ಇವೆ. ಇವುಗಳಲ್ಲಿ 52 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಆದರೆ, ಇನ್ನುಳಿದ ಒತ್ತುವರಿಗಳನ್ನು ತೆರವುಗೊಳಿಸಲು ಏಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಕಾರಣಗಳನ್ನೇ ಬಿಬಿಎಂಪಿ ನೀಡಿಲ್ಲ ಎಂದು ವರದಿಯಲ್ಲಿ ಮಹಾಲೇಖಪಾಲರು ತಿಳಿಸಿದ್ದಾರೆ.

ಅನೇಕ ಕಡೆ ಕಟ್ಟಡಗಳ ಕೆಲವು ಭಾಗಗಳನ್ನು ಮಾತ್ರ ಕೆಡವಲಾಗಿದೆ. ಆ ಬಳಿಕ ರಾಜಕಾಲುವೆಯ ಸ್ಥಿತಿ ಸುಧಾರಣೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲದ ಕಾರಣ ತೆರವು ಕಾರ್ಯವೇ ಅಪೂರ್ಣ. ಹಾಗಾಗಿ, 1,912 ಕಡೆ ಒತ್ತುವರಿ ತೆರವುಗೊಳಿಸಲಾಗಿದೆ ಎಂಬ ಬಿಬಿಎಂಪಿಯ ಹೇಳಿಕೆಯನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜಕಾಲುವೆಗಳಲ್ಲಿ ಯಾವುದೇ ಕಟ್ಟಡ, ಗೋಡೆ, ಬೇಲಿ ಅಥವಾ ಇತರ ರಚನೆಗಳನ್ನು ನಿರ್ಮಿಸುವುದನ್ನು 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 234 ನಿಷೇಧಿಸುತ್ತದೆ. ಅಂತಹ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಮತ್ತು ತಪ್ಪಿತಸ್ಥರಿಂದ ಅವರ ವೆಚ್ಚವನ್ನು ವಸೂಲಿ ಮಾಡಲು ಬಿಬಿಎಂಪಿ ಆಯುಕ್ತರಿಗೆ ಅಧಿಕಾರ ನೀಡುತ್ತದೆ. ಚರಂಡಿಗಳನ್ನು ಖಚಿತವಾಗಿ ಗುರುತಿಸಬೇಕು ಮತ್ತು ಗಡಿಗಳನ್ನು ನಿಗದಿಪಡಿಸಬೇಕು ಎಂಬುದನ್ನು ರಾಷ್ಟ್ರೀಯ ವಿಕೋಪ ನಿರ್ವಹಣೆ ಮಾರ್ಗಸೂಚಿಯಲ್ಲೂ ಸ್ಪಷ್ಟಪಡಿಸಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಕುರಿತು ಹೈಕೋರ್ಟ್‌ ಕೂಡಾ ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಆದರೂ ಈ ಕುರಿತು ಬಿಬಿಎಂಪಿ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ವರದಿಯಲ್ಲಿ ಅಸಮಾಧಾನವ್ಯಕ್ತಪಡಿಸಲಾಗಿದೆ.

ರಾಜಕಾಲುವೆ: ನಿಯತಕಾಲಿಕ ತಪಾಸಣೆಗೆ ಶಿಫಾರಸು
ಜಂಟಿ ತಪಾಸಣೆಯ ಸಮಯದಲ್ಲಿ ಚರಂಡಿಗಳು ಮತ್ತು ರಾಜಕಾಲುವೆಗಳೆರಡರಲ್ಲೂ ತೀವ್ರ ಅಡೆತಡೆಗಳು ಹಾಗೆಯೇ ಇದ್ದವು. ಕ್ಷೇತ್ರದ ಎಂಜಿನಿಯರ್‌ಗಳು ತಪಾಸಣೆಯನ್ನು ಕೈಗೊಂಡಿರಲಿಲ್ಲ. ಎಂಜಿನಿಯರ್‌ಗಳ ವರದಿಯ ಆಧಾರದಲ್ಲೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಟೀಕೆಮಹಾಲೇಖಪಾಲರ ವರದಿಯಲ್ಲಿ ವ್ಯಕ್ತವಾಗಿದೆ.

ರಾಜಕಾಲುವೆಗಳ ಆಕಾರ ಮತ್ತು ಇಳಿಜಾರನ್ನು ಮೂಲವಿನ್ಯಾಸದ ರೀತಿಯಲ್ಲೇ ಉಳಿಸಿಕೊಳ್ಳುವುದು ಅವಶ್ಯಕ. ರಾಜಕಾಲುವೆಗಳ ಆಕಾರವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳುವ ಬಗ್ಗೆ ವಿಶೇಷವಾಗಿ ಮಳೆಗಾಲದಲ್ಲಿ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಈ ಸಲುವಾಗಿ ಮೂರು ರೀತಿಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

* ನಿಯತಕಾಲಿಕ ತಪಾಸಣೆ ಮತ್ತು ನಿರ್ವಹಣೆ
*ನಿರಂತರ ವ್ಯವಸ್ಥಿತ ನಿರ್ವಹಣೆ
*ಸುಧಾರಣೆಗಾಗಿ ವಿಶೇಷ ನಿರ್ವಹಣೆ/ ದುರಸ್ತಿ ಕಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT