ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆಗೆ ಮನವಿ

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ 6,316 ಮರಗಳ ಹನನ
Last Updated 24 ಜೂನ್ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ 6,316 ಮರಗಳನ್ನು ಕಡಿಯುವುದಕ್ಕೆ ಅವಕಾಶ ಕೊಡಬಾರದು. ಅಲ್ಲದೆ, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿಯನ್ನು ಇನ್ನೂ 20 ದಿನಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿ ‘ನಮ್ಮ ಬೆಂಗಳೂರು ಫೌಂಡೇಷನ್‌’ (ಎನ್‌ಬಿಎಫ್‌) ಸದಸ್ಯರುಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಸಂಜಯ್ ಮೋಹನ್‌ ಅವರಿಗೆ ಮನವಿ ಸಲ್ಲಿಸಿದರು.

‘ಕೋವಿಡ್ ಇರುವುದರಿಂದ ಇನ್ನೂ 3 ತಿಂಗಳು ಈ ಕುರಿತು ಯಾವುದೇ ಕ್ರಮಕ್ಕೂ ಮುಂದಾಗಬಾರದು. ವಿಚಾರಣೆ ನಡೆಸುವ ವೇಳೆ, ಆಕ್ಷೇಪಣೆ ಸಲ್ಲಿಸಲು 20 ದಿನಗಳಿಗೂ ಹೆಚ್ಚು ದಿನ ಕಾಲಾವಕಾಶ ಕೊಡಬೇಕು’ ಎಂದು ಎನ್‌ಬಿಎಫ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌ ಕೋರಿದರು.

‘ಕೆರೆ ಅಭಿವೃದ್ಧಿಪಡಿಸುವುದನ್ನು ನಾವು ವಿರೋಧಿಸುವುದಿಲ್ಲ. ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ. ಕಾಮಗಾರಿಯಿಂದ ಇಲ್ಲಿನ ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಲಿ’ ಎಂದು ಕೋರಿ ಮನವಿ ಪತ್ರ ಸಲ್ಲಿಸಿದರು.

‘ಕೆರೆ ಅಭಿವೃದ್ಧಿಗಾಗಿ ಮರ ಕಡಿಯುವ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ (aranya.gov.in) ಹಂಚಿಕೊಂಡಿರುವ ಮಾಹಿತಿಯಲ್ಲಿ ಇಲ್ಲಿನ ಜೀವವೈವಿಧ್ಯದ ಬಗ್ಗೆ ಉಲ್ಲೇಖವೇ ಇಲ್ಲ. ಇಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಪರಿಸರ ವ್ಯವಸ್ಥೆ ದಶಕಗಳಿಂದ ಅಂತರ್ಜಲ ವೃದ್ಧಿಗೂ ಕೊಡುಗೆ ನೀಡುತ್ತಿದೆ. ಈ ಅಂಶಗಳನ್ನೂ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಈ ಕೆರೆಯಂಗಳದ ಮರಗಳನ್ನು ಉಳಿಸಿಕೊಳ್ಳಲು ಹಮ್ಮಿಕೊಂಡಿರುವ ಆನ್‌ಲೈನ್‌ ಅಭಿಯಾನಕ್ಕೆ (https://act.jhatkaa.org/campaigns/no-axing-of-trees-hebbal-nagwara-valleಯ) ಭಾರಿ ಬೆಂಬಲ ವ್ಯಕ್ತವಾಗಿದೆ. 8 ಸಾವಿರಕ್ಕೂ ಅಧಿಕ ಮಂದಿ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT