ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಪಾದಚಾರಿಗಳಿಗೆ ಗುದ್ದಿದ ಕಾರು, ಸಿನಿಮಾ ಸಹಾಯಕ ನಿರ್ದೇಶಕ ಬಂಧನ

ಅಡುಗೆ ಕೆಲಸಗಾರ ಸಾವು: ಸಿನಿಮಾ ಸಹಾಯಕ ನಿರ್ದೇಶಕ ಬಂಧನ
Last Updated 20 ಮೇ 2022, 16:42 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಮನೆಗೆ ಹೊರಟಿದ್ದ ಸಹಾಯಕ ನಿರ್ದೇಶಕನೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಅಪಘಾತವನ್ನುಂಟು ಮಾಡಿದ್ದು, ಪಾದಚಾರಿ ರುದ್ರಪ್ಪ (28) ಎಂಬುವರು ಮೃತಪಟ್ಟಿದ್ದಾರೆ. ಮೂವರು ಪಾದಚಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

‘ಕತ್ರಿಗುಪ್ಪೆ ಹಾಗೂ ಇಟ್ಟಮಡು ಜಂಕ್ಷನ್ ನಡುವಿನ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 7.20ರ ಸುಮಾರಿಗೆ ಸರಣಿ ಅಪಘಾತ ಸಂಭವಿಸಿದೆ. ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದ ಆರೋಪದಡಿ ಸಿನಿಮಾ ಸಹಾಯಕ ನಿರ್ದೇಶಕ ಮುಖೇಶ್ (27) ಎಂಬಾತನನ್ನು ಬಂಧಿಸಲಾಗಿದೆ’ ಎಂದು ಬನಶಂಕರಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಬಳಿ ಮುಖೇಶ್ ಕೆಲಸ ಮಾಡುತ್ತಿದ್ದ. ಇಬ್ಬರೂ ಸೇರಿ ಗುರುವಾರ ರಾತ್ರಿಯಿಡೀ ಸಿನಿಮಾವೊಂದರ ಶೂಟಿಂಗ್ ಮಾಡಿದ್ದರು. ಶೂಟಿಂಗ್ ಮುಗಿಸಿ ಇಬ್ಬರೂ ಮನೆಗೆ ಕಾರಿನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದೂ ತಿಳಿಸಿದರು.

‘ಶ್ರೀನಿವಾಸ್ ಅವರ ಕಾರನ್ನು (ಕೆಎ 51 ಎಂಕೆ 5416) ಮುಖೇಶ್ ಚಲಾಯಿಸುತ್ತಿದ್ದ. ಇಟ್ಟಮಡು ಜಂಕ್ಷನ್ ಸಮೀಪದಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಿ, ರಸ್ತೆ ಪಕ್ಕದಲ್ಲಿ ಹೊರಟಿದ್ದ ಪಾದಚಾರಿಗಳಿಗೆ ಗುದ್ದಿಸಿದ್ದ. ನಾಲ್ವರು ಪಾದಚಾರಿಗಳು ಹಾರಿ ದೂರಕ್ಕೆ ಹೋಗಿ ಬಿದ್ದಿದ್ದರು. ಅದೇ ಕಾರು, ಎರಡು ಬೈಕ್‌ ಹಾಗೂ ಇನ್ನೊಂದು ಕಾರಿಗೂ ಡಿಕ್ಕಿ ಹೊಡೆದಿತ್ತು. ಜಖಂಗೊಂಡ ಕಾರು, ವಿದ್ಯುತ್ ಕಂಬಕ್ಕೂ ಗುದ್ದಿತ್ತು’ ಎಂದೂ ಹೇಳಿದರು.

‘ಘಟನೆಯಲ್ಲಿ ತೀವ್ರ ಗಾಯಗೊಂಡು ರುದ್ರಪ್ಪ ಮೃತಪಟ್ಟಿದ್ದಾರೆ. ಪಾದಚಾರಿಗಳಾದ ಶಿವರಾಮ್ (23), ಸಚಿನ್ (21) ಹಾಗೂ ಶೈಲೇಂದ್ರ (21) ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದೂ ತಿಳಿಸಿದರು.

ಕೆಲಸಕ್ಕೆ ಹೊರಟಿದ್ದರು: ‘ಶಿವರಾಮ್ ಹಾಗೂ ಸಚಿನ್ ಸಹ ಕ್ಯಾಟರಿಂಗ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯ ರುದ್ರಪ್ಪ ಜೊತೆ ಸೇರಿ ಕೆಲಸಕ್ಕೆ ಹೊರಟಿದ್ದರು. ಗಾಯಾಳು ಸಚಿನ್, ಬಿಎಸ್ಸಿ ವಿದ್ಯಾರ್ಥಿ. ಹೊಸಕೆರೆಹಳ್ಳಿಯ ದ್ವಾರಕನಗರದಲ್ಲಿ ನೆಲೆಸಿದ್ದ ಅವರು, ವಾಯುವಿಹಾರ ಮಾಡುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

‘ಅಪಘಾತದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಶ್ರೀನಿವಾಸ್ ತಿಮ್ಮಯ್ಯ ಸಹ ಇದ್ದರು. ಅವರಿಂದಲೂ ಹೇಳಿಕೆ ಪಡೆಯಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT