ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗೆ ಅನುಮೋದನೆ ಮುನ್ನವೇ ಕಾಮಗಾರಿ!

‍ಪಶ್ಚಿಮ ಕಾರ್ಡ್‌ ರಸ್ತೆ ಮೇಲ್ಸೇತುವೆಗೆ ಒಂದೇ ಟೆಂಡರ್: ಮೂರು ಬಾರಿ ಪರಿಷ್ಕರಣೆ *ಬಿಬಿಎಂಪಿ ‍ಪ್ರಸ್ತಾವಕ್ಕೆ ಬೊಮ್ಮಾಯಿ ಒಪ್ಪಿಗೆ
Last Updated 7 ಡಿಸೆಂಬರ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚುವರಿ ಕಾಮಗಾರಿಗಳ ನೆಪದಲ್ಲಿ ಮೂಲ ಗುತ್ತಿಗೆ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ ವಹಿಸುವ ಪಶ್ಚಿಮ ಕಾರ್ಡ್ ರಸ್ತೆಯ ಕಾಮಗಾರಿಯ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಒಪ್ಪಿಗೆ ನೀಡಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡುವ ಮೊದಲೇ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದಾರೆ.

ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಮೊದಲಿಗೆ ಮೂರು ಗ್ರೇಡ್‌ ಸಪರೇಟರ್‌ಗಳ ನಿರ್ಮಾಣಕ್ಕೆ ₹89.86 ಕೋಟಿ ಮೊತ್ತದ ಪ್ಯಾಕೇಜ್‌ ರೂಪಿಸಿ ಅನುಮೋದನೆ ನೀಡಲಾಗಿತ್ತು. ಈಗ ಅದು ಐದು ಕಾಮಗಾರಿಗಳಾಗಿ ವಿಸ್ತರಣೆಗೊಂಡಿದೆ. ಯೋಜನೆ ಮೊತ್ತ ₹169.4 ಕೋಟಿಗೆ ಜಿಗಿದಿದೆ. ಹೊಸದಾಗಿ ಸೇರ್ಪಡೆಯಾದ ಕಾಮಗಾರಿಗಳನ್ನು ಟೆಂಡರ್‌ ನಡೆಸದೆ ಹೆಚ್ಚುವರಿ ಕಾಮಗಾರಿ ಎಂಬುದಾಗಿ ತೋರಿಸಲಾಗಿದೆ. ಈ ಮೂಲಕ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಆಶಯವನ್ನೇ ಗಾಳಿಗೆ ತೂರಲಾಗಿದೆ.

ಪಶ್ಚಿಮ ಕಾರ್ಡ್‌ ರಸ್ತೆಗೆ ರಾಜಾಜಿನಗರದಲ್ಲಿ – ಮಂಜುನಾಥನಗರ ಮುಖ್ಯರಸ್ತೆ ಕೂಡುವಲ್ಲಿ ದ್ವಿಪಥ ಸಂಚಾರದ ಮೇಲ್ಸೇತುವೆ, ಶಿವನಗರದ 8ನೇ ಮತ್ತು 1ನೇ ಮುಖ್ಯ ರಸ್ತೆಗಳು ಕೂಡುವಲ್ಲಿ ದ್ವಿಮುಖ ಸಂಚಾರದ ಇಂಟಿಗ್ರೇಟೆಡ್‌ ಅಂಡರ್‌ಪಾಸ್‌ ಮತ್ತು ಬಸವೇಶ್ವರ ನಗರದ ಮುಖ್ಯರಸ್ತೆ ಕೂಡುವಲ್ಲಿ ಏಕಮುಖ ಸಂಚಾರದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಪ್ಯಾಕೇಜ್‌ನ ಗುತ್ತಿಗೆಯನ್ನು ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ನೀಡಲಾಗಿದೆ.

ಬಸವೇಶ್ವರನಗರ ಜಂಕ್ಷನ್‌ನಲ್ಲಿ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸುವ 5ನೇ ಕಾಮಗಾರಿಗೆ ಅನುಮೋದನೆ ದೊರೆಯುವ ಮೊದಲೇ ಪಿಲ್ಲರ್ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರು ನಡೆಸುತ್ತಿದ್ದಾರೆ. ‘ಬಿಬಿಎಂಪಿಯ ಪ್ರಸ್ತಾವನೆಗೆ ಇದೀಗ ಮುಖ್ಯಮಂತ್ರಿ ಅವರಿಂದ ಅನುಮೋದನೆ ಸಿಕ್ಕಿದೆಯಷ್ಟೇ. ಯೋಜನೆ ಜಾರಿಗೆ ಸರ್ಕಾರದ ಅಧಿಕೃತ ಆದೇಶ ಆಗಿಲ್ಲ. ಅಲ್ಲದೇ, ಈ ಯೋಜನೆಗೆ ಹೆಚ್ಚುವರಿ ಹಣಕಾಸು ಮೀಸಲಿಟ್ಟಿಲ್ಲ. ಹೆಚ್ಚುವರಿ ಮೊತ್ತಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಬೇಕು. ಸಚಿವ ಸಂಪುಟದಲ್ಲೂ ಒಪ್ಪಿಗೆ ಪಡೆಯಬೇಕಿದೆ. ಅದಕ್ಕೂ ಮುನ್ನವೇ ಕಾಮಗಾರಿ ನಡೆಸಲು ಒಪ್ಪಿಗೆ ನೀಡಿದ್ದು ಯಾರು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಹಿಗ್ಗುತ್ತಾ ಸಾಗಿದ ಯೋಜನಾ ವೆಚ್ಚ: ಒಟ್ಟು ₹ 89.86 ಕೋಟಿ ವೆಚ್ಚದ ಆರಂಭಿಕ ಯೋಜನೆಗೆ 2015ರ ಫೆ. 11ರಂದು ಅನುಮೋದನೆ ನೀಡಲಾಗಿತ್ತು. ಈ ಪೈಕಿ ಮಂಜುನಾಥನಗರದ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ 2018ರ ಆ. 27ರಂದು ಲೋಕಾರ್ಪಣೆಗೊಂಡಿತು. ಈ ನಡುವೆ, ಶಿವನಗರ 8ನೇ ಮತ್ತು 1ನೇ ಮುಖ್ಯ ರಸ್ತೆ ಕೂಡುವಲ್ಲಿ ಇಂಟೆಗ್ರೇಟೆಡ್‌ ಅಂಡರ್‌ಪಾಸ್‌ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಆಗ ಅಂಡರ್‌ಪಾಸ್ ಬದಲಿಗೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ಪರಿಷ್ಕರಿಸಲಾಯಿತು. ಪ್ಯಾಕೇಜ್‌ನ ಮೊತ್ತ ₹ 89.86 ಕೋಟಿಯಿಂದ ₹ 112.07 ಕೋಟಿಗೆ ಹೆಚ್ಚಿಸಲಾಯಿತು. ಈ ಕಾಮಗಾರಿ ಮುಕ್ತಾಯಗೊಂಡು 2021ರ ಅ. 4ರಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿತು.

ಯಶವಂತಪುರ ಕಡೆಯಿಂದ ವಿಜಯನಗರ ತನಕ ಸಿಗ್ನಲ್ ರಹಿತ ರಸ್ತೆಯನ್ನಾಗಿ ಮಾಡಲು 72ನೇ ಅಡ್ಡರಸ್ತೆಗೆ ಮೇಲ್ಸೇತುವೆ ಅಗತ್ಯವಿದೆ ಎಂದು ಈಗಿನ ಸಚಿವ ವಿ.ಸೋಮಣ್ಣ ಅವರು 2018ರ ಆಗಸ್ಟ್ 6ರಂದು ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದರು.

ಅಲ್ಲದೇ ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೇ ಕಾಮಗಾರಿ ವಹಿಸುವಂತೆ ಕೋರಿದ್ದರು. ₹33.71 ಕೋಟಿ ಮೊತ್ತದ ಯೋಜನೆ ರೂಪಿಸಿ ಅದನ್ನೂ ಮೂಲ ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಲಾಯಿತು. ಆಗ ಯೋಜನೆ ಮೊತ್ತ ₹ 145.78 ಕೋಟಿಗೆ ಹೆಚ್ಚಿತು. ಟೆಂಡರ್ ನಡೆಸದೆ ಅದೇ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಯಿತು.

ಮತ್ತೊಮ್ಮೆ ಪರಿಷ್ಕರಣೆ: ಶಿವನಗರ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆಗೆ (2021ರ ಅ.4ರಂದು) ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿ.ಸೋಮಣ್ಣ ಮತ್ತು ಶಾಸಕ ಎಸ್.ಸುರೇಶ್‌ಕುಮಾರ್ ಅವರು ಮನವಿ ಸಲ್ಲಿಸಿ, ಬಸವೇಶ್ವರನಗರದ ಮುಖ್ಯರಸ್ತೆ ಕೂಡುವಲ್ಲಿಯೂ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸುವಂತೆ ಕೋರಿದ್ದರು.

‘ಬಸವೇಶ್ವರನಗರ ಜಂಕ್ಷನ್‌ನಲ್ಲಿ ₹23.62 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ಕೋರಿ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಈಗ ಅನುಮೋದನೆ ನೀಡಿದ್ದಾರೆ. ಈಗ ಪ್ಯಾಕೇಜ್‌ ಮೊತ್ತ ₹ 169.4 ಕೋಟಿಗೆ ಹೆಚ್ಚಳವಾಗುತ್ತಿದೆ’ ಎಂದು ಬಿಬಿಎಂಪಿ ಎಂಜಿನಿಯರ್‌ ಒಬ್ಬರು ತಿಳಿಸಿದರು.

‘ಭ್ರಷ್ಟಾಚಾರದ ಕೂಪ’

‘ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಈ ಕಾಮಗಾರಿಗೆ ಇಷ್ಟು ವರ್ಷ ಬೇಕೇ ಎಂಬುದು ಮೊದಲನೇ ಪ್ರಶ್ನೆ. ಕಾನೂನುಬಾಹಿರವಾಗಿ ಗುತ್ತಿಗೆ ಮೊತ್ತ ಹೆಚ್ಚಿಸಿಕೊಳ್ಳಲು ಈ ರೀತಿಯ ವಿಳಂಬ ಮಾಡಲಾಗುತ್ತಿದೆ. ಯೋಜನೆಯ ಮೊತ್ತ ಬಹುತೇಕ ದುಪ್ಪಟ್ಟಾಗಿದೆ. ಹೆಚ್ಚುವರಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯನ್ನೇ ನಡೆಸದಿರುವುದು ಕೆಟಿಪಿಪಿ ಕಾಯ್ದೆಯ ಉಲ್ಲಂಘನೆ. ಮೊದಲು ಯೋಜನೆ ರೂಪಿಸಿದವರು ಮತ್ತು ಈಗ ಹೆಚ್ಚುವರಿಯಾಗಿ ಕಾಮಗಾರಿಗಳ ಸೇರ್ಪಡೆ ಮಾಡಿದವರ ವಿರುದ್ಧ ಕಾನೂನು ಕ್ರಮ ಆಗಬೇಕು.

ಆದರ್ಶ ಅಯ್ಯರ್, ಜನಾಧಿಕಾರ ಸಂಘರ್ಷ ಪರಿಷತ್‌

‘ಅನುಮೋದನೆ ಸಿಗದಿದ್ದರೆ ಹಣ ಬಿಡುಗಡೆ ಇಲ್ಲ’

ಟೆಂಡರ್‌ ಕರೆಯದೆಯೇ ಹಿಂದಿನ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆಗಳು) ಲೋಕೇಶ್‌, ‘ಈಗ ಕಾಮಗಾರಿ ನಡೆಯುತ್ತಿರುವ ಮೇಲ್ಸೇತುವೆ ಹಾಗೂ ಹೊಸ ಮೇಲ್ಸೇತುವೆಗಳೆರಡನ್ನೂ ಜೋಡಿಸಬೇಕಿದೆ. ಹಾಗಾಗಿ ಅದೇ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗುತ್ತಿದೆ. ಇದಕ್ಕೆ ಕೆಟಿಪಿಪಿ ಕಾಯ್ದೆಯಲ್ಲೂ ಅವಕಾಶ ಇದೆ. ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದಾರೆ. ಸರ್ಕಾರವು ಅನುಮೋದನೆ ನೀಡದಿದ್ದರೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT