ಬುಧವಾರ, ಮೇ 27, 2020
27 °C

ಸಿ.ಎಂ ಹೆಸರಿನಲ್ಲಿ ಎಸಿಪಿಗೆ ಧಮ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಷೇಧಾಜ್ಞೆ ಉಲ್ಲಂಘಿಸಿ ಕಾರಿನಲ್ಲಿ ಹೊರಟಿದ್ದ ತಮ್ಮನ್ನು ತಡೆದು ನಿಲ್ಲಿಸಿದರೆಂಬ ಕಾರಣಕ್ಕೆ ಗ್ರಾನೈಟ್ ವ್ಯಾಪಾರಿಗಳಿಬ್ಬರು ಮುಖ್ಯಮಂತ್ರಿ ಹೆಸರು ಹೇಳಿಕೊಂಡು ದೇವನಹಳ್ಳಿ ಉಪವಿಭಾಗದ ಎಸಿಪಿ ಹಾಗೂ ಸಿಬ್ಬಂದಿಗೆ ಧಮ್ಕಿ ಹಾಕಿದ್ದು, ಈಸಂಬಂಧ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೇವನಹಳ್ಳಿಯ ರಾಣಿ ಕ್ರಾಸ್‌ನಲ್ಲಿರುವ ತಪಾಸಣಾ ಠಾಣೆಯಲ್ಲಿ ಏ.2ರಂದು ಈ ಘಟನೆ ನಡೆದಿದೆ. ಕರ್ತವ್ಯನಿರತ ಎಎಸ್‌ಐ ನಾಗರಾಜ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಆರೋಪಿಗಳಾದ ವಿದ್ಯಾರಣ್ಯಪುರ ಬಳಿಯ ವಿರೂಪಾಕ್ಷಪುರದ ವೆಂಕಟೇಗೌಡ (51) ಹಾಗೂ ಬಿ.ರಾಮಕೃಷ್ಣ (48) ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಆರೋಪಿಗಳು ಹಲವು ವರ್ಷಗಳಿಂದ ಗ್ರಾನೈಟ್ ವ್ಯಾಪಾರ ಮಾಡುತ್ತಿದ್ದಾರೆ. ಹಲವು ರಾಜಕೀಯ ಮುಖಂಡರ ಜೊತೆ ಒಡನಾಟ ಹೊಂದಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ಎಸಿಪಿ ಹಾಗೂ ಸಿಬ್ಬಂದಿಯನ್ನು ಬೆದರಿಸಿದ್ದರು’ ಎಂದು ತಿಳಿಸಿದರು.

‘ಎಸಿಪಿ ಪಿ.ಟಿ.ಸುಬ್ರಹ್ಮಣ್ಯ, ಇನ್‌ಸ್ಪೆಕ್ಟರ್‌ಗಳಾದ ಸಿದ್ದರಾಜು, ಚಂದ್ರಶೇಖರ್ ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಏ. 2ರಂದು ಸಂಜೆ 7.30ರ ಸುಮಾರಿಗೆ ಆರೋಪಿಗಳು ಫಾರ್ಚ್ಯೂನರ್ ಕಾರಿನಲ್ಲಿ ಬಂದಿದ್ದರು. ಎಸಿಪಿ ಹಾಗೂ ಸಿಬ್ಬಂದಿ ಅವರನ್ನು ತಡೆದಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ‘ನಾವು ಯಾರು ಎಂಬುದು ನಿನಗೆ ಗೊತ್ತಿಲ್ಲ. ಮುಖ್ಯಮಂತ್ರಿಗೆ ಹೇಳಿ ನಿನ್ನನ್ನು (ಎಸಿಪಿ) ನಾಳೆಯೇ ಸಸ್ಪೆಂಡ್ ಮಾಡಿಸುತ್ತೇವೆ. ನಿನ್ನನ್ನು ದೇವನಹಳ್ಳಿಯಲ್ಲಿ ಇರಲು ಬಿಡುವುದಿಲ್ಲ’ ಎಂದು ಧಮ್ಕಿ ಹಾಕಿದ್ದರು. ಸಮವಸ್ತ್ರ ಹಿಡಿದು ಎಳೆದಾಡಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದರು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು