ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದ ಹೊರಗೆ ಕಾಲಿಟ್ಟರೆ ಕೇಸ್

ಸೀಲ್‌ಡೌನ್‌: ಪಾದರಾಯನಪುರ, ಬಾಪೂಜಿನಗರ ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ
Last Updated 10 ಏಪ್ರಿಲ್ 2020, 21:09 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ನಗರದ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್‌ಗಳನ್ನು ಪ್ರಾಯೋಗಿಕವಾಗಿ ಸೀಲ್‌ಡೌನ್‌ ಮಾಡಲಾಗಿದ್ದು, ಯಾರಾದರೂ ಮನೆಯಿಂದ ಹೊರಗೆ ಕಾಲಿಟ್ಟರೆ ಅಂಥವರ ಮೇಲೆ ಪ್ರಕರಣ ದಾಖಲಾಗಲಿದೆ.

ಎರಡೂ ವಾರ್ಡ್‌ಗಳಲ್ಲಿ ‘ಕೋವಿಡ್‌–19’ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಅದೇ ಕಾರಣಕ್ಕೆ ಬಿಬಿಎಂಪಿ ವತಿಯಿಂದ ಸೀಲ್‌ಡೌನ್‌ ಮಾಡಲಾಗಿದ್ದು, ಎರಡೂ ವಾರ್ಡ್‌ಗಳಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.

‘ದಿನಸಿ ಸೇರಿ ಅಗತ್ಯ ವಸ್ತುಗಳ ಅಂಗಡಿಗಳನ್ನುಈಗಾಗಲೇ ಸಂಪೂರ್ಣವಾಗಿ ಬಂದ್‌ ಮಾಡಿಸಲಾಗಿದೆ. ಬಿಬಿಎಂಪಿ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದ್ದು, ತಮಗೆ ಬೇಕಾದ ವಸ್ತುಗಳನ್ನು ನಿವಾಸಿಗಳು ಸಹಾಯವಾಣಿಗೆ ಕರೆ ಮಾಡಿ ತರಿಸಿಕೊಳ್ಳಬಹುದು. ದಿನಸಿ, ಹಾಲು, ದಿನಪತ್ರಿಕೆಯನ್ನು ಮನೆ ಬಾಗಿಲಿಗೆ ಒದಗಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ’ ಎಂದರು.

‘ಎರಡೂ ವಾರ್ಡ್‌ಗಳಲ್ಲಿ 70ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಅವರು ದಿನದ 24 ಗಂಟೆಯೂ ಸ್ಥಳದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಡಿಸಿಪಿ ಅವರೇ ಭದ್ರತೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಎಸಿಪಿ, ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ಗಳೂ ಗಸ್ತು ತಿರುಗಲಿದ್ದಾರೆ. ಅವರಿಗೆ ಬೇಕಾದ ಊಟ ಹಾಗೂ ಮೂಲ ಸೌಕರ್ಯವನ್ನುಒದಗಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ಪಾಸ್‌→ನಡೆಯಲ್ಲ: ‘ಲಾಕ್‌ಡೌನ್‌ ವೇಳೆಸಂಚರಿಸಲೆಂದು ಇಲಾಖೆಯಿಂದ ಈಗಾಗಲೇ ಪಾಸ್‌ಗಳನ್ನು ವಿತರಿಸಲಾಗಿದೆ. ಇಂಥ ಪಾಸ್‌ಗಳು ಎರಡೂ ವಾರ್ಡ್‌ಗಳಲ್ಲಿ ನಡೆಯುವುದಿಲ್ಲ. ಯಾರಿಗೂ ಈ ವಾರ್ಡ್‌ಗಳಲ್ಲಿ ಪ್ರವೇಶವಿಲ್ಲ. ಹೊರಗೆ ಹೋಗಲೂ ಅವಕಾಶವಿಲ್ಲ’ ಎಂದು ಅಧಿಕಾರಿ ಹೇಳಿದರು.

‘ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಎಲ್ಲರೂ ಮನೆಯೊಳಗೆ ಇರಬೇಕು. ಹೊರಗೆ ಬಂದರೆ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುತ್ತೇವೆ.ವಾಹನಗಳಲ್ಲಿ ಬಂದರೆ, ವಾಹನಗಳನ್ನೂ ಜಪ್ತಿ ಮಾಡುತ್ತೇವೆ’ ಎಂದರು.

‘ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆಸೀಲ್‌ಡೌನ್‌ ಜಾರಿ ಆಗಿದೆ. ಜಾರಿ ಮಾಡುತ್ತ ಹೋದಂತೆ ಅದರ ಸಾಧಕ–ಬಾಧಕಗಳ ಬಗ್ಗೆ ಗೊತ್ತಾಗಲಿದೆ’ ಎಂದರು.

ಊಟಕ್ಕೂ ತೊಂದರೆ

‘ಏಕಾಏಕಿ ಸೀಲ್‌ಡೌನ್ ಘೋಷಣೆ ಮಾಡಿರುವ ಕಾರಣ ಬಾಪೂಜಿನಗರ ವಾರ್ಡ್‌ನಲ್ಲಿನ ಬಡವರಿಗೆ ಊಟಕ್ಕೂ ತೊಂದರೆ ಆಗಲಿದೆ’ ಎಂದು ಈ ವಾರ್ಡ್‌ನ ಪಾಲಿಕೆ ಸದಸ್ಯ ಅಜ್ಮಲ್ ಬೇಗ್ ಆತಂಕ ವ್ಯಕ್ತಪಡಿಸಿದರು.

‘80 ಸಾವಿರ ಜನಸಂಖ್ಯೆ ಇರುವ ವಾರ್ಡ್‌ನಲ್ಲಿ ಬಹುತೇಕ ಎಲ್ಲರೂ ಬಡವರೇ ಇದ್ದಾರೆ. ಕೂಡಿಟ್ಟುಕೊಂಡು ಊಟ ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೋಗಿ ನೀರು ತರಲೂ ಅವಕಾಶ ಇಲ್ಲ. ಈ ಸಮಸ್ಯೆಯನ್ನು ಬಿಬಿಎಂಪಿ ಹೇಗೆ ಬಗೆಹರಿಸುತ್ತದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ’ ಎಂದರು.

‘ಸೀಲ್‌ಡೌನ್ ಮಾಡುವ ಮುನ್ನ ವಾರ್ಡ್‌ ಪ್ರತಿನಿಧಿಗಳ ಜತೆಗೂ ಚರ್ಚೆ ನಡೆಸಿಲ್ಲ. ನಮ್ಮ ವಾರ್ಡ್‌ನಲ್ಲಿ ಒಂದೇ ಒಂದು ಕೋವಿಡ್‌– 19 ಪ್ರಕರಣ ಇಲ್ಲ. ಪಕ್ಕದ ವಾರ್ಡ್‌ನಲ್ಲಿ ಸೋಂಕು ದೃಢಪಟ್ಟಿರುವ ಕಾರಣ ನೆರೆಯ ವಾರ್ಡ್‌ಗಳನ್ನೂ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರಿರುವ ನಿರ್ದಿಷ್ಠ ಪ್ರದೇಶಗಳನ್ನು ಗುರುತಿಸಿ ಸೀಲ್‌ಡೌನ್ ಮಾಡಬೇಕಿತ್ತು. ಈ ಬಗ್ಗೆ ಬಿಬಿಎಂಪಿ ಅಧಿಕಾರಿ
ಗಳ ಜತೆ ಚರ್ಚೆ ಮಾಡುತ್ತೇನೆ’ ಎಂದರು.

ಸೀಲ್‌ಡೌನ್‌ಗೆ ಸಹಕಾರ

‘ಸೀಲ್‌ಡೌನ್ ಆದೇಶ ಬಂದ ನಂತರ ಎರಡೂ ವಾರ್ಡ್‌ಗಳಲ್ಲಿ ಜನ ಸಂಚಾರ ಸಂಪೂರ್ಣ ಬಂದ್ ಆಗಿದೆ. ವೈದ್ಯಕೀಯ ಕಾರಣ ಇದ್ದರೆ ಮಾತ್ರ ಮೇಲಧಿಕಾರಿಗಳ ಅನುಮತಿ ಪಡೆದು ಹೊರಕ್ಕೆ ಬಿಡಲಾಗುತ್ತದೆ’ ಎಂದು ಪಾದರಾಯನಪುರ ವಾರ್ಡ್‌ನ ಸದಸ್ಯ ಇಮ್ರಾನ್‍ಪಾಷಾ ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಜನರಿಗೆ ಅಗತ್ಯ ಇರುವ ಆಹಾರ ಸಾಮಗ್ರಿಯ ಏಳು ಸಾವಿರ ಕಿಟ್‌ಗಳನ್ನು ಬಡವರ ಮನೆಗಳಿಗೆ ನಾನೇ ನೀಡುತ್ತಿದ್ದೇನೆ. ಗುರುವಾರದ ತನಕ ಶೇ 70ರಷ್ಟು ಮನೆಗಳಿಗೆ ನೀಡಲಾಗಿದೆ. ಉಳಿದವುಗಳನ್ನು ಅಧಿಕಾರಿಗಳ ಅನುಮತಿ ಪಡೆದು ವಿತರಿಸುತ್ತೇನೆ’ ಎಂದು ಹೇಳಿದರು.

‘ಮನೆಯಿಂದ ಯಾರೊಬ್ಬರೂ ಹೊರಕ್ಕೆ ಬರುತ್ತಿಲ್ಲ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಎಲ್ಲರೂ ಮನೆಯಲ್ಲೇ ಇರಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ಸೋಂಕು ಹರಡಿರುವ ಶಂಕೆ ಇದ್ದವರನ್ನು ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಮನೆ–ಮನೆಗೆ ಹೋಗಿ ಅವರ ಮನವೊಲಿಸುತ್ತಿದ್ದೇವೆ’ ಎಂದು ತಿಳಿಸಿದರು.

ಜನಸಂಖ್ಯೆ ಎಷ್ಟಿದೆ?

ಪಾದರಾಯನಪುರ ವಾರ್ಡ್‌ನಲ್ಲಿ 50 ಸಾವಿರ ಜನಸಂಖ್ಯೆ ಇದ್ದು, ಅಂದಾಜು 12 ಸಾವಿರ ಮನೆಗಳಿವೆ. ಬಾಪೂಜಿನಗರದಲ್ಲಿ 80 ಸಾವಿರ ಜನಸಂಖ್ಯೆ ಇದ್ದು, ಅಂದಾಜು 30 ಸಾವಿರ ಮನೆಗಳಿವೆ.

ಶುದ್ಧ ಕುಡಿಯುವ ನೀರಿನ ಘಟಕ ಸೇರಿ ಎಲ್ಲಾ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.ಯಾರೊಬ್ಬರೂ ಮನೆ ಬಿಟ್ಟು ಹೊರಗೆ ಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

14 ದಿನ ಸೀಲ್‌ಡೌನ್

ಬೆಂಗಳೂರು:‘ಎರಡೂ ವಾರ್ಡ್‌ಗಳಲ್ಲಿ 14 ದಿನಗಳ ಕಾಲ ಸೀಲ್‌ಡೌನ್ ಇರಲಿದೆ. ಬೇರೆ ವಾರ್ಡ್‌ಗಳಿಗೆ ವಿಸ್ತರಿಸುವ ಯೋಚನೆ ಸದ್ಯಕ್ಕೆ ಇಲ್ಲ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

‘ಹೊಸದಾಗಿ 5 ಕೋವಿಡ್ –19 ಪ್ರಕರಣಗಳು ದೃಢಪಟ್ಟ ಕಾರಣ ಬೇರೆಯವರಿಗೆ ಸೋಂಕು ಹರಡದಂತೆ ತಡೆಯಲು ಸೀಲ್‌ಡೌನ್ ಮಾಡಲಾಗಿದೆ. ಜನರಿಗೆ ಬೇಕಿರುವ ಎಲ್ಲಾ ಅಗತ್ಯ ವಸ್ತುಗಳನ್ನು ಅವರ ಮನೆಗಳಿಗೇ ಪೂರೈಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಕುಡಿಯುವ ನೀರಿನ ಪೈಪ್‌ಲೈನ್ ಎಲ್ಲರ ಮನೆಯಲ್ಲೂ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT