ಶುಕ್ರವಾರ, ನವೆಂಬರ್ 22, 2019
22 °C

ಐಎಂಎ ಪ್ರಕರಣ | ಲಂಚ ಪಡೆದ ಆರೋಪ: ನಾಗರಾಜ್‌, ವಿಜಯಶಂಕರ್‌ ವಿರುದ್ಧ ಎಫ್‌ಐಆರ್‌

Published:
Updated:

ಬೆಂಗಳೂರು: ಐಎಂಎ ಕಂಪನಿಗೆ ‘ಕ್ಲೀನ್‌ ಚಿಟ್‌’ ಕೊಡಲು ಭಾರಿ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಬಿ.ಎಂ ವಿಜಯಶಂಕರ್‌, ಬೆಂಗಳೂರು ಉತ್ತರದ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್‌ ಮತ್ತು ಗ್ರಾಮಲೆಕ್ಕಿಗ ಮಂಜುನಾಥ್‌ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಈ ಮೂವರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬಳಿಕ ಸಿಬಿಐ ಅಧಿಕಾರಿಗಳು ಶುಕ್ರವಾರ ಎಫ್ಐಆರ್‌ ದಾಖಲಿಸಿದೆ. ಇದರ ಬೆನ್ನಲ್ಲೇ ಮೂವರೂ ಅಧಿಕಾರಿಗಳ ಮನೆಗಳ ಮೇಲೂ ದಾಳಿ ನಡೆದಿತ್ತು.

ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಸಮೂಹ ಕಂಪನಿ ನಿರ್ದೇಶಕರಿಂದ ಈ ಮೂವರೂ ಕ್ರಮವಾಗಿ ₹ 1.5 ಕೋಟಿ, ₹ 4 ಕೋಟಿ ಹಾಗೂ ₹ 8 ಲಕ್ಷ ಲಂಚ ಪಡೆದು ಅನುಕೂಲಕರ ವರದಿ ನೀಡಿದ್ದರು. ಈ ವ್ಯವಹಾರಕ್ಕೆ ಮಂಜುನಾಥ್‌ ಅವರೇ ಮಧ್ಯವರ್ತಿಯಾಗಿದ್ದರು ಎಂದು ಸಿಬಿಐ ದೂರಿದೆ.

ಇದು ಸಿಬಿಐ ದಾಖಲಿಸಿದ ಮೂರನೇ ಎಫ್‌ಐಆರ್‌. ಪ್ರಕರಣದಲ್ಲಿ ಈಗಾಗಲೇ ಎರಡು ದೋಷಾರೋಪ ಪಟ್ಟಿಗಳನ್ನು ಸಿಬಿಐ ಸಲ್ಲಿಸಿದೆ. ಸಿಬಿಐ ತಂಡದ ಜೊತೆ ಪ್ರಕರಣದ ತನಿಖೆಗೆ ವಿವಿಧ ಇಲಾಖೆಗಳ ತಜ್ಞರು ಕೈಜೋಡಿಸಿದ್ದು, ದಿನನಿತ್ಯದ ಆಧಾರದಲ್ಲಿ ತನಿಖೆ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)