ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನ ನಿರೋಧ ರದ್ದತಿ ಖಂಡಿಸಿ ರಾಜೀನಾಮೆ!

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಎಚ್.ಸಿ. ದಾಸಪ್ಪನವರು ನಿಧನರಾದ ಮೇಲೆ ಯಶೋಧರಾ ದಾಸಪ್ಪನವರು ಸ್ವಲ್ಪ ದಿನಗಳಲ್ಲೇ ಚೇತರಿಸಿಕೊಂಡು ಎಂದಿನಂತೆ ರಾಜ್ಯದ ಸಚಿವ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಹೋದರು. ಮುಂದಿನ ಒಂದೂವರೆ ವರ್ಷ ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಇನ್ನೂ ನವನವೀನ ಯೋಜನೆಗಳನ್ನು ಹಮ್ಮಿಕೊಂಡು ಸ್ವಯಂಸೇವಾ ಸಂಘ ಸಂಸ್ಥೆಗಳಿಗೆ ಚೈತನ್ಯ ನೀಡಿ ಕಾರ್ಯ ನಿರ್ವಹಿಸಿದರು. ಆದರೆ, 1965ರ ಕೊನೆಯ ಹೊತ್ತಿಗೆ ನಿಜಲಿಂಗಪ್ಪನವರ ಮಂತ್ರಿಮಂಡಲದ ಕೆಲವು ಬಲಿಷ್ಠ ಸಚಿವರು ರಾಜ್ಯದಲ್ಲಿ ಪಾನ ನಿರೋಧ ಕಾಯ್ದೆಯನ್ನು ರದ್ದುಗೊಳಿಸಿ ಮಾರುಕಟ್ಟೆಯಲ್ಲಿ ಮುಕ್ತವಾಗಿ ಹೆಂಡ, ಸಾರಾಯಿ ಮತ್ತಿತರ ಮದ್ಯಪಾನೀಯಗಳು ದೊರೆಯುವಂತೆ ಮಾಡಬೇಕೆಂದು ಪ್ರಸ್ತಾಪ ಮಾಡಲಾರಂಭಿಸಿದರು. ಅವರು ಮುಂದಿಡುತ್ತಿದ್ದ ಕಾರಣಗಳು ಎರಡು. ಮೊದಲನೆಯದಾಗಿ ಕಳ್ಳಭಟ್ಟಿಯನ್ನು ನಿಲ್ಲಿಸುವುದು; ಎರಡನೆಯದಾಗಿ, ಸರ್ಕಾರದ ಬೊಕ್ಕಸಕ್ಕೆ ಅಗತ್ಯವಾದ ಹಣವನ್ನು ತೆರಿಗೆ ರೂಪದಲ್ಲಿ ತುಂಬಿಕೊಳ್ಳುವುದು.

ಗಾಂಧಿ ಪರಂಪರೆಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿ, ಅವರು ದೇಶದ ಪುನರ್‌ನಿರ್ಮಾಣಕ್ಕೆ ಕೈಗೊಂಡಿದ್ದ ರಚನಾತ್ಮಕ ಕಾರ್ಯಗಳಲ್ಲಿ ಪ್ರಧಾನ ಅಂಗವಾಗಿದ್ದ ಪಾನ ನಿರೋಧದ ನೀತಿಯನ್ನು ರದ್ದು ಮಾಡುವ ಮಾತು ಯಶೋಧರಾ ಅವರಿಗೆ ಆಘಾತವುಂಟು ಮಾಡಿತು. ಒಂದು ಕಾಲದಲ್ಲಿ, ಸ್ವಾತಂತ್ರ್ಯ ಹೋರಾಟದ ಮಹತ್ವದ ಘಟ್ಟದಲ್ಲಿ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಈಚಲು ಮರಗಳನ್ನು ಕತ್ತರಿಸಿ ಹೆಂಡದ ಗಡಿಗೆಗಳನ್ನು ಒಡೆದು ಹಾಕುವ ಸಾಮೂಹಿಕ ಸತ್ಯಾಗ್ರಹದಲ್ಲಿ ನೇತಾರರಾಗಿ ವಿಜೃಂಭಿಸಿದ್ದ ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರೇ ಈಗ ಮುಖ್ಯಮಂತ್ರಿಯಾಗಿರುವಾಗ ಪಾನ ನಿರೋಧವನ್ನು ರದ್ದು ಮಾಡುವ ಕ್ರಮ ಕೈಗೊಳ್ಳುವುದು ಒಂದು ಐತಿಹಾಸಿಕ ವಿಪರ್ಯಾಸ ಎಂದು ಯಶೋಧರಾ ಬಣ್ಣಿಸಿ, ಪ್ರತಿಯೊಂದು ಸಚಿವ ಸಂಪುಟದ ಸಭೆಯಲ್ಲೂ ಪ್ರಬಲವಾಗಿ ವಿರೋಧಿಸುತ್ತಾ ಹೋದರು. ಮೊದಮೊದಲು ಯಶೋಧರಾರನ್ನು ಬೆಂಬಲಿಸುತ್ತಿದ್ದ ಕೆಲವು ಹಿರಿಯ ಸದಸ್ಯರು ಒಬ್ಬೊಬ್ಬರಾಗಿ ತಟಸ್ಥ ಧೋರಣೆ ತಾಳುತ್ತಾ ಬಂದರು. ಕಡೆಗೆ ಬಿ. ರಾಚಯ್ಯನವರೊಬ್ಬರು ಕಡೆಯ ತನಕ ಯಶೋಧರಾ ಅವರ ನಿಲುವನ್ನು ಸಮರ್ಥಿಸುತ್ತಿದ್ದರು. 1966ರ ಜೂನ್‌ ಹೊತ್ತಿಗೆ ಕರ್ನಾಟಕದಲ್ಲಿ ಪಾನ ನಿರೋಧ ನೀತಿಯನ್ನು ಕೈ ಬಿಡುವ ನಿರ್ಧಾರವನ್ನು ಮಂತ್ರಿಮಂಡಲ ಕೈಗೊಂಡಿತು. ಯಶೋಧರಾ ದಾಸಪ್ಪನವರು ತಮ್ಮ ಸಚಿವ ಪದವಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಯಶೋಧರಾ ಅವರ ರಾಜೀನಾಮೆಯ ಪ್ರಕರಣ, ದೇಶದಾದ್ಯಂತ ಪಾನನಿರೋಧ ನೀತಿಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ರಾಜಗೋಪಾಲಾಚಾರಿ ಸೇರಿದಂತೆ ಹಿರಿಯ ಮುತ್ಸದ್ದಿಗಳೂ, ಸ್ವಾತಂತ್ರ್ಯ ಹೋರಾಟಗಾರರೂ, ಸರ್ವೋದಯ ಚಳವಳಿಯ ಮುಖಂಡರೂ ಕರ್ನಾಟಕ ಸರ್ಕಾರದ ಕ್ರಮವನ್ನು ಕಟುವಾಗಿ ಖಂಡಿಸಿದರು. ಯಶೋಧರಾ ದಾಸಪ್ಪನವರ ದಿಟ್ಟತನ ಮತ್ತು ತತ್ವನಿಷ್ಠೆಯನ್ನು ಪ್ರಶಂಸಿಸಿದರು.

ಸಚಿವ ಸಂಪುಟವು ಪಾನನಿರೋಧ ಕಾನೂನನ್ನು ತೆಗೆದು ಹಾಕುವ ಘಟ್ಟ ಬಂದಾಗ ಯಶೋಧರಾ ದಾಸಪ್ಪನವರು ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೂ ಕಾಂಗ್ರೆಸ್‌ ಅಧ್ಯಕ್ಷ ಕಾಮರಾಜ್‌ ಅವರಿಗೂ ಪತ್ರ ಬರೆದು ಸಚಿವ ಪದವಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ತಿಳಿಯಪಡಿಸಿದರು. ಶಾಸ್ತ್ರಿಯವರು ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಪತ್ರ ಬರೆದು ಯಶೋಧರಾ ಅವರ ಮನವೊಲಿಸಬೇಕೆಂದು ಕೋರಿದರು. ಈ ಸಂಬಂಧವಾಗಿ ಸಚಿವ ಸಂಪುಟದ ಹಿರಿಯ ಸದಸ್ಯರು  ಅವರೊಡನೆ ಗಂಟೆಗಟ್ಟಲೆ ಅನೌಪಚಾರಿಕವಾಗಿ ಚರ್ಚೆ ನಡೆಸಿ, ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಆಗ್ರಹಪಡಿಸಿದರು. ಸರ್ಕಾರವು ಉಪಕ್ರಮಿಸಿರುವ ನೀತಿಯು ಪಾನ ನಿರೋಧ ಕಾನೂನಿನ ಸಡಿಲಿಕೆಯೇ ಹೊರತು ಪೂರ್ಣ ರದ್ದತಿಯಲ್ಲ ಎಂಬ ವಾದವನ್ನು ಮಂಡಿಸಿದರು.

‘ಒಮ್ಮೆ ಕಾನೂನನ್ನು ಸಡಿಲಿಸಿದ ಮೇಲೆ ಅದು ಮುಕ್ತಪಾನ ವಿತರಣೆಗೆ ಹೆಬ್ಬಾಗಿಲನ್ನು ತೆಗೆದಂತೆ ಆಗುವುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ ಪಾನನಿರೋಧ ಕಾನೂನನ್ನು ಪ್ರಾಮಾಣಿಕವಾಗಿ ಜಾರಿಯಲ್ಲಿಡಿ, ಇಲ್ಲದಿದ್ದರೆ ನನ್ನ ರಾಜೀನಾಮೆ ಒಪ್ಪಿಕೊಳ್ಳಿ. ಕೋಟಿ ಕೋಟಿ ಹೆಣ್ಣು ಮಕ್ಕಳನ್ನು ಕಣ್ಣೀರಿಗೆ ಗುರಿ ಮಾಡುವ, ದೀನದಲಿತರ ಜೀವನವನ್ನು ಮತ್ತಷ್ಟುದಾರಿದ್ರ್ಯಮತ್ತು ವ್ಯಸನಕ್ಕೆ ತಳ್ಳುವ ಈ ಕ್ರಮಕ್ಕೆ ನನ್ನ ಸಮ್ಮತಿಯಿಲ್ಲ’ ಎಂದು ಸ್ಪಷ್ಟವಾಗಿ ಯಶೋಧರಾ ಹೇಳಿದರು. ಕಡೆಗೆ ಅವರ ರಾಜೀನಾಮೆಯನ್ನು ಒಪ್ಪಿಕೊಳ್ಳುವ ನಿರ್ಧಾರವನ್ನು ಮುಖ್ಯಮಂತ್ರಿ ನಿಜಲಿಂಗಪ್ಪನವರು ಕೈಗೊಂಡರು. ಯಶೋಧರಾ ಅವರು ಕಟ್ಟಕಡೆಯ ಮಂತ್ರಿಮಂಡಲದ ಸಭೆಯಿಂದ ಹೊರಬರುವುದಕ್ಕೆ ಮುಂಚೆ ಎಲ್ಲ ಸಚಿವರಿಗೂ ಚಾಕೊಲೇಟ್‌ ಹಂಚಿದರು. ‘ವೈಯಕ್ತಿಕವಾಗಿ ನಾನು ಯಾವುದೇ ಕಹಿ ಭಾವನೆಯಿಂದ ಮಂತ್ರಿಮಂಡಲವನ್ನು ತ್ಯಜಿಸಿ ಹೋಗುತ್ತಿಲ್ಲ. ನೀವು ಕೈಗೊಂಡ ಕ್ರಮದಿಂದ ಜನಕೋಟಿಗೆ ಅಪಾರ ಹಾನಿಯಾಗುವುದೆಂಬ ಖಚಿತ ಅಭಿಪ್ರಾಯದಿಂದ ಹಾಗೂ ಸ್ವಾತಂತ್ರ್ಯ ಹೋರಾಟ ಕಾಲದ ಅತ್ಯಂತ ಮೌಲಿಕವಾದ ಸಿದ್ಧಾಂತಕ್ಕೆ ಬದ್ಧಳಾಗಿ ನಾನು ನಿರ್ಗಮಿಸುತ್ತಿದ್ದೇನೆ’ ಎಂದು ಹೇಳಿ ಹೊರಬಂದರು.

–ಬಿ.ಆರ್‌. ಪ್ರಾಣೇಶರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT