ಭಾನುವಾರ, ಮೇ 22, 2022
28 °C

ಮೀಸಲಾತಿ ಹೋರಾಟ: ಸಚಿವರಿಗೆ ವರಿಷ್ಠರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿವಾರು ಮೀಸಲಾತಿ ಹೋರಾಟಗಳ ಮೂಲಕ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೀರಿ. ಈ ಪ್ರಯತ್ನ ಇಲ್ಲಿಗೆ ನಿಲ್ಲಿಸಬೇಕು’ ಎಂದು ಸಚಿವರಾದ ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ಮುರುಗೇಶ ನಿರಾಣಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.

ಮಠಾಧೀಶರು ಬೀದಿಗಿಳಿದು ಮೀಸಲಾತಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಇವರು ಬೀದಿಗಿಳಿಯುವ ಮೊದಲೇ ಆ ಪ್ರಯತ್ನ ತಡೆಯಬೇಕಿತ್ತು ಎಂದೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವರಿಷ್ಠರು ಕಿವಿ ಹಿಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರು ಮತ್ತು ಶಾಸಕರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪಕ್ಷಕ್ಕೆ ಸಾಕಷ್ಟು ಹಾನಿ ಉಂಟು ಮಾಡಿದ್ದು, ಇದನ್ನು ಇಲ್ಲಿಗೆ ಮುಗಿಸಬೇಕು. ಇಲ್ಲವಾದರೆ ಪಕ್ಷಕ್ಕೆ ಭವಿಷ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಆಗುತ್ತದೆ. ಸಾಮಾಜಿಕ ವಾತಾವರಣವೂ ಹದಗೆಡುತ್ತದೆ. ಯಾವುದೇ ಮಿಸಲಾತಿ ಸಂಬಂಧಿತ ಬೇಡಿಕೆಗಳ ಬಗ್ಗೆ ಕೇಂದ್ರದತ್ತ ಕೈ ತೋರಿಸಿ ಕೇಂದ್ರ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳದಿರುವಂತೆಯೂ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಜಾತಿ ಜೇನುಗೂಡಿಗೆ ಕೈಹಾಕಿ ಕೈ ಸುಟ್ಟುಕೊಂಡ ಸಿದ್ದರಾಮಯ್ಯ ಅವರ ನಿದರ್ಶನ ಮತ್ತು ರಾಜಸ್ಥಾನದಲ್ಲಿ ಮೀಸಲಾತಿ ಹೋರಾಟದ ಪರಿಣಾಮ ಅಧಿಕಾರ ಕಳೆದುಕೊಂಡ ವಸುಂಧರ ರಾಜೆ ಅವರ ಉದಾಹರಣೆಯನ್ನು ನೀಡಿರುವ ವರಿಷ್ಠರು. ಅದೇ ತಪ್ಪು ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ. ಇದನ್ನು ಏಕೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

‘ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಜಾತಿಗಳ ಮೀಸಲಾತಿ ಹೋರಾಟಗಳನ್ನು ಗಮನಿಸುತ್ತಿದ್ದೇವೆ. ಎಲ್ಲರಿಗೂ ಭರವಸೆ ಕೊಡುತ್ತಾ ಹೋಗಬೇಡಿ’ ಎಂದು ವರಿಷ್ಠರು ಯಡಿಯೂರಪ್ಪ ಅವರಿಗೆ ತಾಕೀತು ಮಾಡಿದ್ದಾರೆ. ‘ಮಠಾಧೀಶರ ಬೇಡಿಕೆಗಳಿಗೆ ಮಣೆ ಹಾಕುತ್ತಾ ಹೋದರೆ, ಅದಕ್ಕೆ ಕೊನೆ ಮೊದಲು ಇಲ್ಲವಾಗುತ್ತದೆ. ಕಾನೂನು ಚೌಕಟ್ಟಿನಲ್ಲಿ ಅದನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದಾರೆ.

‘ಕೆ.ಎಸ್‌.ಈಶ್ವರಪ್ಪ ಸಚಿವರಾಗಿ ನಿರ್ದಿಷ್ಟ ಒಂದು ಜಾತಿಯ ಹೋರಾಟದಲ್ಲಿ ಹೇಗೆ ಭಾಗಿಯಾಗುತ್ತಾರೆ. ಇದಕ್ಕೆ ಅವಕಾಶ ಕೊಟ್ಟವರು ಯಾರು? ಸಂಘ ಪರಿವಾರದಿಂದ ಬಂದವರು ಹಿಂದುತ್ವದ ಪರಿಕಲ್ಪನೆ ಬಿಟ್ಟು, ಜಾತಿಯ ಚುಂಗು ಹಿಡಿದು ಹೊರಡಲು ಕಾರಣವೇನು’ ಎಂಬ ಪ್ರಶ್ನೆಯನ್ನೂ ವರಿಷ್ಠರು ಕೇಳಿದ್ದಾರೆ ಎಂದು ಹೇಳಲಾಗಿದೆ.

ಕುರುಬರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂಬ ಹೋರಾಟವೇ ಇತರ ಎಲ್ಲ ಜಾತಿಗಳ ಮಠಾಧೀಶರುಗಳು ಮೀಸಲಾತಿಗಾಗಿ ಕೂಗೆಬ್ಬಿಸಲು ಕಾರಣವಾಗಿದೆ. ಹಿಂದೆ ಎಂದೂ ನಡೆಯದ ಕುರುಬ ಎಸ್‌ಟಿ ಹೋರಾಟ ಬಿಜೆಪಿ ಸರ್ಕಾರ ಬಂದಾಗ ನಡೆದದ್ದು ಏಕೆ? ಈ ವಿಚಾರದಲ್ಲಿ ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ. ಸಂಘ ಪರಿವಾರ ಎಂದೂ ಜಾತಿ ಹೋರಾಟಕ್ಕೆ ಬೆಂಬಲ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಇದರಿಂದ ಹಿಂದುತ್ವದ ಆಂದೋಲನಕ್ಕೆ ಹಿನ್ನಡೆಯಾಗುತ್ತದೆ ಎಂಬ ಸಂದೇಶವನ್ನೂ ವರಿಷ್ಠರು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಆಂತರಿಕ ವ್ಯಕ್ತಿಗಳು ಉರುಳಿಸಿರುವ ದಾಳ ಈಗ ಪಕ್ಷಕ್ಕೇ ಉರುಳಾಗುತ್ತಿದ್ದು, ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು