ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 530 ಕೋಟಿವರೆಗಿನ ಕಾಮಗಾರಿ ಪೂರ್ಣ

ಕಾವೇರಿ 5ನೇ ಹಂತದ ಯೋಜನೆ * ಶೇ 10 ಹೆಚ್ಚು ಪ್ರಗತಿ
Last Updated 30 ಏಪ್ರಿಲ್ 2021, 20:46 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯಡಿ ₹ 530 ಕೋಟಿಯವರೆಗಿನ ಕಾಮಗಾರಿ ಪೂರ್ಣಗೊಂಡಿದೆ ಎಂದು ಜಲಮಂಡಳಿ ಹೇಳಿದೆ.

ಕಾಮಗಾರಿ ಅನುಷ್ಠಾನ ವಿಳಂಬವಾಗುತ್ತಿದೆ, ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯಲಾಗಿದ್ದು, ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರು.

‘ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯ (ಜೈಕಾ) ಸಹಯೋಗದೊಂದಿಗೆ ₹5,550 ಕೋಟಿ ಮೊತ್ತದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಾರ್ಚ್‌ ವೇಳೆಗೆ ₹450 ಕೋಟಿ ಮೊತ್ತದವರೆಗಿನ ಕಾಮಗಾರಿ ಪೂರ್ಣಗೊಂಡಿರಬೇಕು ಎಂದು ಜೈಕಾ ಗಡುವು ನೀಡಿತ್ತು. ಆದರೆ, ಕಾಮಗಾರಿಯಲ್ಲಿ ಅವರು ಹೇಳಿದ್ದಕ್ಕಿಂತ ಶೇ 10ರಷ್ಟು ಹೆಚ್ಚು ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ₹530 ಕೋಟಿಯವರೆಗಿನ ಕಾಮಗಾರಿ ನಡೆದಿದೆ’ ಎಂದು ಮಂಡಳಿಯ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 50 ಲಕ್ಷ ನಿವಾಸಿಗಳಿಗೆ ದಿನಕ್ಕೆ 7.55 ಕೋಟಿ ಲೀಟರ್‌ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿಯೂ ಕಾಮಗಾರಿಯಲ್ಲಿ ನಿಗದಿಗಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ’ ಎಂದು ಅವರು ಹೇಳಿದರು.

‘2020ರ ಜನವರಿಯಿಂದ ನವೆಂಬರ್‌ ನಡುವೆ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 2023ರ ಆಗಸ್ಟ್‌ ವೇಳೆಗೆ ಯೋಜನೆ ಪೂರ್ಣಗೊಳಿಸುವಂತೆ ಜೈಕಾ ಗಡುವು ನೀಡಿದೆ. ಆ ಅವಧಿಯೊಳಗೇ ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದು ಕಾವೇರಿ 5ನೇ ಹಂತದ ಯೋಜನೆಯ ಮುಖ್ಯ ಎಂಜಿನಿಯರ್‌ ಎಸ್.ವಿ. ರಮೇಶ್‌ ತಿಳಿಸಿದರು.

‘ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಎಲ್ಲ ಇಲಾಖೆಗಳ ಅನುಮೋದನೆ ಮತ್ತು ಅನುಮತಿ ಪಡೆಯಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT