ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೋರಾಟದ ಕಾವು ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸೆ.26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂದೇ ರಾಮನಗರ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲೂ ಬಂದ್ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.
ಬೆಂಗಳೂರಿನಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಬಂದ್ ನಡೆಸಲು ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ.
‘ಕೆಲವು ಸಂಘಟನೆಗಳು ಮಂಗಳವಾರ ಕರೆ ನೀಡಿರುವ ಬಂದ್ ವಾಪಸ್ ಪಡೆಯುವಂತೆ ಕೋರಿದ್ದವು. ನಾಡಿನ ಜನರು, ರೈತರ ಹಿತದೃಷ್ಟಿಯಿಂದ ಬಂದ್‌ಗೆ ಕರೆ ನೀಡಲಾಗಿದ್ದು ಬಂದ್ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಬಂದ್ ಯಶಸ್ವಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರು ನೋವು ತಿಳಿಸುತ್ತೇವೆ’ ಎಂದು ಹೋರಾಟಗಾರರು ಹೇಳಿದರು.
ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಪುರಭವನದಿಂದ ಪ್ರತಿಭಟನಾ ರ್‍ಯಾಲಿ ಆರಂಭವಾಗಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಕನ್ನಡ ಸಂಘಟನೆಗಳ ಮುಖಂಡರು, ರೈತರು, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಬಿಬಿಎಂಪಿ ಕಾರ್ಮಿಕರು, ಕೆಎಸ್‌ಆರ್‌ಟಿಸಿ ಕನ್ನಡ ಕಾರ್ಮಿಕರ ಸಂಘ, ಓಲಾ–ಊಬರ್ ಚಾಲಕರ ಸಂಘ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಕರ್ನಾಟಕ ಮರಾಠ ಮಂಡಳ, ರಾಜ್ಯ ಕಾರ್ಮಿಕ ಪರಿಷತ್‌ನ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸದಂತೆ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಕರೆ ನೀಡಿದ್ದು ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆಟೊ, ಕ್ಯಾಬ್ ಸಂಚಾರ ಇರುವುದಿಲ್ಲ. ಕರ್ನಾಟಕ ಟೆಲಿವಿಷನ್ ಕಲಾವಿದರ ಸಂಘ ಚಿತ್ರೀಕರಣ ಬಂದ್ ಮಾಡಲು ತೀರ್ಮಾನಿಸಿದೆ.
ರಾಮನಗರದಲ್ಲೂ ಅಂದು ಬೆಳಿಗ್ಗೆಯಿಂದ ಸಂಜೆ 5ರವರೆಗೆ ಜಿಲ್ಲೆಯಾದ್ಯಂತ ಬಂದ್ ಇರಲಿದೆ. ತುರ್ತು ಸೇವೆಗಳಾದ ಆಸ್ಪತ್ರೆ, ಔಷಧದ ಅಂಗಡಿಗಳ ಜೊತೆಗೆ ಸಾರಿಗೆ ವ್ಯವಸ್ಥೆ, ರೇಷ್ಮೆ ಮಾರುಕಟ್ಟೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿರಲಿವೆ ಎಂದು ಮುಖಂಡರು ಮಾಹಿತಿ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಶಾಂತಿಯುತ ಬಂದ್ ನಡೆಸುತ್ತೇವೆ. ತಕ್ಷಣವೇ ವಿಶೇಷ ಅಧಿವೇಶನ ಕರೆದು, ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಎಚ್ಚರಿಕೆ ನೀಡಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಬಂದ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರಿಗೆ ಅಧಿಕಾರ ಶಾಶ್ವತ ಅಲ್ಲ. ನೀವೂ ಮೇಕೆದಾಟು ಹೋರಾಟ ನಡೆಸಿ ಅಧಿಕಾರಕ್ಕೆ ಬಂದಿದ್ದೀರಿ. ಈಗ ನೀವು ಮೌನ ವಹಿಸಿದ್ದೀರಿ’ ಎಂದು ಹೇಳಿದರು.
ಏನಿರುವುದಿಲ್ಲ
ಊಬರ್–ಓಲಾ ಕ್ಯಾಬ್
ಆಟೊರಿಕ್ಷಾ
ಖಾಸಗಿ ಸಾರಿಗೆ
ಚಿತ್ರಮಂದಿರ
ಏನಿರಲಿದೆ
ಮೆಟ್ರೊ
ಕೆಲವು ಬಿಎಂಟಿಸಿ ಬಸ್
ಆಸ್ಪತ್ರೆ
ಹಾಲು–ತರಕಾರಿ
ದಿನಪತ್ರಿಕೆಗಳು
29ಕ್ಕೆ ಕರ್ನಾಟಕ ಬಂದ್
ಸೆ.29ರಂದು ಕರ್ನಾಟಕ ಬಂದ್‌ಗೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ ಬಣದ ಜತೆಗೆ ಸೋಮವಾರ ಸಭೆ ನಡೆಸಿ ಅಂತಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
‘ರುಪ್ಸ’ ಶಾಲೆಗಳಿಗೆ ರಜೆ
ಬೆಂಗಳೂರು: ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘದ(ರುಪ್ಸ) ಶಾಲೆಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಪರೀಕ್ಷಾ ವಿದ್ಯಾರ್ಥಿಗಳು ಮಾತ್ರ ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ‘ರುಪ್ಸ’ ಅಧ್ಯಕ್ಷ ಲೋಕೇಶ್ ತಾಳಿಕೋಟೆ ತಿಳಿಸಿದ್ದಾರೆ.
‘ಮೂರುವರೆ ಸಾವಿರಕ್ಕೂ ಹೆಚ್ಚು ಐ.ಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ರ್‍ಯಾಲಿ ನಡೆಸಲಿದ್ದಾರೆ’ ಎಂದು ಸಂಘಟನೆ ಅಧ್ಯಕ್ಷ ಶಿವಾನಂದ್ ಹೇಳಿದರು.
ಶಾಲಾ ಮುಖ್ಯಸ್ಥರಿಗೆ ಅನುಮತಿ
ಬಂದ್ ನಡೆಯುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ರಜೆ ನೀಡಲು ಆಯಾ ಶಾಲೆಗಳ ಮುಖ್ಯಸ್ಥರಿಗೆ ಅನುಮತಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.