ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸ್ಥಳೀಯ ಸಂಸ್ಥೆಗಳಿಗೆ ₹ 3,885 ಕೋಟಿ

ಅಮೃತ ನಗರೋತ್ಥಾನ ಯೋಜನೆಗೆ ಸಂಪುಟ ಸಭೆಯ ಅನುಮೋದನೆ
Last Updated 6 ಜನವರಿ 2022, 20:34 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಘೋಷಿಸಿರುವ ‘ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ’ ಯೋಜನೆಯಡಿ ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಗೆ ₹3,885 ಕೋಟಿ ಅನುದಾನ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಬಿಬಿಎಂಪಿಗೆ ಇದೇ ಯೋಜನೆಯಡಿ ₹6,000 ಕೋಟಿ ಒದಗಿಸಲೂ ಗುರುವಾರ ನಡೆದ ರಾಜ್ಯ ಸಂಪುಟ ಸಭೆಯು ತೀರ್ಮಾನಿಸಿದೆ.

2021ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಯನ್ನು ಪ್ರಕಟಿಸಿದ್ದರು. ಐದು ವರ್ಷಗಳಲ್ಲಿ ಯೋಜನೆ ಜಾರಿಗೆ ತೀರ್ಮಾನಿಸಿದ್ದು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಕ್ರಿಯಾಯೋಜನೆ ರೂಪಿಸುವುದಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ‘ಅಮೃತ ನಗರೋತ್ಥಾನ ಯೋಜನೆಯಡಿ ಒಂದನೇ ದರ್ಜೆಯ ನಗರಸಭೆಗಳಿಗೆ ತಲಾ ₹ 40 ಕೋಟಿ, ಇತರ ನಗರಸಭೆ
ಗಳಿಗೆ ತಲಾ ₹ 30 ಕೋಟಿ, ಪುರಸಭೆಗಳಿಗೆ ತಲಾ ₹ 10 ಕೋಟಿ ಮತ್ತು ಪಟ್ಟಣ ಪಂಚಾಯಿತಿಗಳಿಗೆ ತಲಾ ₹ 5 ಕೋಟಿ ಅನುದಾನ ಒದಗಿಸಲಾಗುವುದು’ ಎಂದರು.

23 ಜಿಲ್ಲಾ ಕೇಂದ್ರಗಳಲ್ಲಿರುವ ಹಾಗೂ ಒಂದನೇ ದರ್ಜೆಯ ನಗರಸಭೆಗಳಿಗೆ ₹ 920 ಕೋಟಿ ಮತ್ತು ಇತರ 38 ನಗರಸಭೆಗಳಿಗೆ ₹ 1,140 ಕೋಟಿ ಅನುದಾನ ದೊರಕಲಿದೆ. 124 ಪುರಸಭೆಗಳಿಗೆ ಒಟ್ಟು ₹ 1,240 ಕೋಟಿ ಹಾಗೂ 117 ಪಟ್ಟಣ ಪಂಚಾಯಿತಿಗಳಿಗೆ ಒಟ್ಟು ₹ 585 ಕೋಟಿ ಅನುದಾನ ಒದಗಿಸಲಾಗುತ್ತದೆ.

ಈ ಅನುದಾನದಲ್ಲಿ ಶೇಕಡ 24.10 ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ, ಪಂಗಡಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಡಬೇಕು. ಶೇ 5ರಷ್ಟು ಮೊತ್ತವನ್ನು ಅಂಗವಿಕಲರ ಅಭಿವೃದ್ಧಿ ಶೇ 7.25 ರಷ್ಟು ಅನುದಾನವನ್ನು ಇತರ ಬಡ ಜನರ ಅಭಿವೃದ್ಧಿಗೆ ಕಾಯ್ದಿರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ವಿಶ್ವ ಬ್ಯಾಂಕ್‌ ಸಾಲ: ಜಲ ಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೂ ನಲ್ಲಿ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆಗೆ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ವಿಶ್ವ ಬ್ಯಾಂಕ್‌ನಿಂದ ₹ 1,167 ಕೋಟಿ ಸಾಲ ಪಡೆಯುವ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿದೆ.

ಜಲ ಜೀವನ್‌ ಮಿಷನ್‌ ಯೋಜನೆಯಡಿ ₹ 9,152 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡ 45ರಷ್ಟು ಭರಿಸುತ್ತಿವೆ. ಶೇ 10ರಷ್ಟನ್ನು ಸ್ಥಳೀಯ ಫಲಾನುಭವಿಗಳ ವಂತಿಗೆಯಿಂದ ಭರಿಸಲಾಗುವುದು. ರಾಜ್ಯದ ಪಾಲಿನ ಮೊತ್ತದಲ್ಲಿ ₹ 2,700 ಕೋಟಿಯನ್ನು ನಬಾರ್ಡ್‌ ನೆರವು ಮತ್ತು ₹ 1,167 ಕೋಟಿಯನ್ನು ವಿಶ್ವ ಬ್ಯಾಂಕ್‌ ಸಾಲದ ಮೂಲಕ ಭರಿಸಲು ನಿರ್ಧರಿಸಲಾಗಿದೆ. ₹ 1,372 ಕೋಟಿಯನ್ನು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಶುಶ್ರೂಷಕರ ನೇಮಕ:ಆಯುಷ್‌ ಇಲಾಖೆಯಲ್ಲಿ ಖಾಲಿ ಇರುವ 177 ಶುಶ್ರೂಷಕರ ಹುದ್ದೆಗಳ ಪೈಕಿ 80 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಉಳಿದ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

‘ಗುತ್ತಿಗೆ ಆಧಾರದಲ್ಲಿಈಗಾಗಲೇ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರಿಗೆ ಪ್ರತಿ ವರ್ಷದ ಸೇವೆಗೆ 2ರಂತೆ ಗರಿಷ್ಠ 20 ಅಂಕಗಳನ್ನು ನೀಡಲಾಗುವುದು. ಒಂದು ವರ್ಷ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದರೂ, ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT