ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಮಾರಾಟ ಜಾಲದಲ್ಲಿ ಅಂಚೆ ನೌಕರರು!

ಸಿಸಿಬಿ ಪೊಲೀಸರಿಂದ ನಾಲ್ವರ ಬಂಧನ, ಡಾರ್ಕ್‌ ಜಾಲತಾಣದ ಮೂಲಕ ಖರೀದಿ
Last Updated 31 ಡಿಸೆಂಬರ್ 2019, 5:17 IST
ಅಕ್ಷರ ಗಾತ್ರ

ಬೆಂಗಳೂರು: ಅಂಚೆ ಮೂಲಕ ವಿದೇಶಗಳಿಂದ ಮಾದಕ ವಸ್ತುವನ್ನು ನಗರಕ್ಕೆ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಅಂಚೆ ಇಲಾಖೆಯ ನಾಲ್ವರು ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಶ್ರೀರಾಂಪುರದ ಎಚ್‌.ಸುಬ್ಬು (34), ದೇವರಚಿಕ್ಕನಹಳ್ಳಿಯ ರಮೇಶ್‌ಕುಮಾರ್ (47), ಆರ್‌.ಟಿ.ನಗರದ ಸೈಯದ್ ಮಾಜಿದ್ ಅಹಮದ್ (54) ಹಾಗೂ ನಾಗವಾರದ ವಿಜಯರಾಜನ್ (58) ಬಂಧಿತರು. ಈ ನಾಲ್ವರು ರಾಜಭವನ ರಸ್ತೆಯಲ್ಲಿರುವ ಪ್ರಧಾನ
ಅಂಚೆ ಕಚೇರಿ ಹಾಗೂ ಚಾಮರಾಜಪೇಟೆಯಲ್ಲಿರುವ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಡ್ರಗ್ಸ್‌ ಪೆಡ್ಲರ್ ಜೊತೆ ಶಾಮೀಲಾಗಿರುವ ನೌಕರರು, ನಕಲಿ ವಿಳಾಸಗಳನ್ನು ನಮೂದಿಸಿಕೊಂಡು ವಿದೇಶದಿಂದ ಅಂಚೆ ಮೂಲಕ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದರು. ಅದನ್ನೇ ನಗರದಲ್ಲಿರುವ ಪೆಡ್ಲರ್‌ಗಳ ಮೂಲಕ ಮಾರಾಟ ಮಾಡಿಸಿ ಹಣ ಸಂಪಾದಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

‘ಆರೋಪಿಗಳಿಂದ ₹ 20 ಲಕ್ಷ ಮೌಲ್ಯದ 339 ಎಂ.ಡಿ.ಎಂ.ಎ ಮಾತ್ರೆಗಳು, 10 ಗ್ರಾಂ ಎಂ.ಡಿ.ಎಂ.ಎ ಪುಡಿ, 30 ಗ್ರಾಂ ಬ್ರೌನ್ ಶುಗರ್ ಹಾಗೂ ಪೋಸ್ಟ್‌ ಕವರ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ಪಾರ್ಸಲ್ ವಿಭಾಗದಲ್ಲಿದ್ದ ನೌಕರರು: ‘ಬಂಧಿತ ಆರೋಪಿಗಳು ಅಂಚೆ ಇಲಾಖೆಯ ಪಾರ್ಸಲ್ ವಿಭಾಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ವಿದೇಶದಿಂದ ಬರುವ ಪಾರ್ಸಲ್‌ಗಳನ್ನು ಆರೋಪಿಗಳೇ ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ರವಾನಿಸುತ್ತಿದ್ದರು’ ಎಂದುಭಾಸ್ಕರ್ ರಾವ್ ತಿಳಿಸಿದರು.

‘ನೆದರ್‌ಲೆಂಡ್‌, ಡೆನ್ಮಾರ್ಕ್ ಹಾಗೂ ಅಮೆರಿಕದೇಶಗಳಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಇವರು ಡ್ರಗ್ಸ್ ತರಿಸುತ್ತಿದ್ದರು. ಹಿರಿಯ ಅಧಿಕಾರಿಗಳ ಕಣ್ತಪ್ಪಿಸಿ ಆ ಪಾರ್ಸಲ್‌ಗಳನ್ನು ಪೆಡ್ಲರ್‌ಗಳಿಗೆ ರವಾನಿಸುತ್ತಿದ್ದರು. ಅವರ ಮೂಲಕವೇ ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಮಾರುತ್ತಿದ್ದರು’ ಎಂದರು.

‘ಡಾರ್ಕ್‌ ಜಾಲತಾಣಗಳ ಮೂಲಕವೇ ಆರೋಪಿಗಳು ಡ್ರಗ್ಸ್‌ ಖರೀದಿಸುತ್ತಿದ್ದರು. ನಕಲಿ ವಿಳಾಸಗಳನ್ನು ನೀಡಿ ಪಾರ್ಸಲ್‌ ತರಿಸುತ್ತಿದ್ದರು. ಕಚೇರಿಗೆ ಬರುವ ಪಾರ್ಸಲ್‌ಗಳನ್ನು ಅವರೇ ಪರಿಶೀಲನೆ ನಡೆಸುತ್ತಿದ್ದರಿಂದ ಕೆಲಸ ಸುಲಭವಾಗಿತ್ತು’ ಎಂದು ಹೇಳಿದರು.

ಖುದ್ದು ಮಾರಾಟ
‘ಪಾರ್ಸಲ್‌ಗಳಲ್ಲಿದ್ದ ಮಾದಕ ವಸ್ತುವನ್ನು ಹಂಚಿಕೊಳ್ಳುತ್ತಿದ್ದ ಆರೋಪಿಗಳು ತಾವೇ ಖುದ್ದಾಗಿ ಮಾರಾಟ ಮಾಡುತ್ತಿದ್ದರು. ಕೆಲವು ಪರಿಚಯಸ್ಥರು ಅವರ ಬಳಿಯೇ ಬಂದು ಡ್ರಗ್ಸ್‌ ಖರೀದಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT