ಬುಧವಾರ, ಏಪ್ರಿಲ್ 8, 2020
19 °C

ವೈದ್ಯ ಸೀಟು ವಂಚನೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಿವಾಸಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಬಂಧಿತ ಆರೋಪಿ ಕೋಲ್ಕತ್ತಾದ ಶೈಲೇಶ್ ಕೊಥಾರಿ ಅಲಿಯಾಸ್ ಗೌರವ್ ಕುಮಾರ್ ಡಾಗಾ (48) ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಕೊಡಿಸುವುದಾಗಿ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಂಚಿಸುತ್ತಿದ್ದ. ಆರೋಪಿಯಿಂದ ₹ 2 ಲಕ್ಷ  ನಗದು ಮತ್ತು ₹ 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿ ಶ್ರೀರಾಮಪುರದ ಬೂಪೇಶ್ ಭಾರತಿ ಎಂಬುವರು ಆರೋಪಿಯನ್ನು ಸಂಪರ್ಕಿಸಿದ್ದರು. ಚೆನ್ನೈನ ಭಾರತ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಸೀಟು ಕೊಡಿಸುವುದಾಗಿ ನಂಬಿಸಿದ ಆರೋಪಿ, ಬೂಪೇಶ್ ಅವರಿಂದ ₹ 1.70 ಲಕ್ಷ ಪಡೆದು ತಲೆಮರೆಸಿಕೊಂಡಿದ್ದ. ಈ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಯನ್ನು ನಗರದಲ್ಲಿ ಬಂಧಿಸಿದರು.

ಆರೋಪಿಯು ಎರಡು ಆಧಾರ್ ಕಾರ್ಡ್ ಹೊಂದಿದ್ದು, ಅವುಗಳ ನಂಬರ್ ಒಂದೇ ಇದೆ. ಹುಟ್ಟಿದ ದಿನಾಂಕ ಮತ್ತು ವಿಳಾಸ ಬೇರೆ ಬೇರೆ ಇದೆ. ಒಂದರಲ್ಲಿ ಬೆಂಗಳೂರು ಶಿವಾಜಿನಗರದ ವಿಳಾಸವಿದೆ. ಇನ್ನೊಂದರಲ್ಲಿ ಟಾಲಿ ಗುಂಜ್‌ ರೋಡ್‌, ನ್ಯೂ ಆಲಿಪುರ್‌, ಕೋಲ್ಕತ್ತಾ ವಿಳಾಸವಿದೆ.

ಪಾನ್ ಕಾರ್ಡನಲ್ಲೂ ಮತ್ತೊಂದು ವಿಳಾಸವಿದೆ. ಆರೋಪಿಯನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದ್ದು, ಎಷ್ಟು ಮಂದಿಗೆ ಮೋಸ ಮಾಡಿದ್ದಾನೆ ಎಂಬ ತನಿಖೆ ನಡೆಯುತ್ತಿದೆ. ಈತನಿಂದ ವಂಚನೆಗೆ ಒಳಗಾದವರು ತಮ್ಮನ್ನು ಸಂಪರ್ಕಿಸುವಂತೆ ಸಿಸಿಬಿ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು