ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ‘ಮಹಾಲಕ್ಷ್ಮಿ ಪ್ರಾಪರ್ಟಿಸ್’ ಮಾಲೀಕನ ಬಂಧನ

ಸರ್ಕಾರಿ ನೌಕರರ ಸಂಘದ ಹೆಸರಿನಲ್ಲಿ ವಂಚನೆ; ಸಿಸಿಬಿ ಕಾರ್ಯಾಚರಣೆ
Last Updated 9 ಸೆಪ್ಟೆಂಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರರ ಸಂಘದ ಹೆಸರಿನಲ್ಲಿ ನಿವೇಶನ ಹಾಗೂ ಮನೆಗಳನ್ನು ನೀಡುವುದಾಗಿ ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ‘ಮಹಾಲಕ್ಷ್ಮಿ ಪ್ರಾಪರ್ಟಿಸ್’ ಮಾಲೀಕ ಶ್ರೀನಿವಾಸ್ ಗೌಡನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆ ನಿವಾಸಿ ಶ್ರೀನಿವಾಸ್ ಗೌಡ, ‘ಕರ್ನಾಟಕ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ’ ಹೆಸರಿನಲ್ಲಿ ಕಚೇರಿ ತೆರೆದು ಜನರನ್ನು ವಂಚಿಸುತ್ತಿದ್ದ. ಆತನ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು. ‘ಆರೋಪಿ ಯಾವುದೇ ಸರ್ಕಾರಿ ನೌಕರನೂ ಅಲ್ಲ. ಆದರೂ ಸರ್ಕಾರಿ ನೌಕರರ ಸಂಘದಿಂದ ನಿವೇಶನ ನೀಡುವುದಾಗಿ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ಪ್ರಕಟಿಸುತ್ತಿದ್ದ’ ಎಂದು ಹೇಳಿದರು.

ನಾನಾ ಆಮಿಷ: ‘ಬಿಬಿಎಂಪಿ ವ್ಯಾಪ್ತಿಯಲ್ಲಿರುವಬಿಡಿಎ ಹಾಗೂ ಬಿಎಂಆರ್‌ಡಿ ಅನುಮೋದನೆ ಪಡೆದ ನಿವೇಶನ ಹಾಗೂ ಮನೆಗಳು ಲಭ್ಯ ವೆಂದು ಹೇಳುತ್ತಿದ್ದ ಆರೋಪಿ, ಮೊದಲ 50 ಬುಕ್ಕಿಂಗ್‌ಗಳಿಗೆ ಅಡುಗೆ ಮನೆ ಹಾಗೂ ಕೊಠಡಿ ಕ್ಯಾಬಿನೆಟ್ ಉಚಿತವೆಂದು ಆಮಿಷವೊಡ್ಡುತ್ತಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ನಿವೇಶನದ ಬೆಲೆ ₹ 9 ಲಕ್ಷದಿಂದ ಹಾಗೂ ಮನೆಗಳ ಬೆಲೆ ₹ 38 ಲಕ್ಷದಿಂದ ಪ್ರಾರಂಭವೆಂದು ಹೇಳುತ್ತಿದ್ದ. ಗೃಹ ಸಾಲವೂ ಸಿಗುತ್ತದೆಂದು ಹೇಳಿ ನಂಬಿಸುತ್ತಿದ್ದ. ‘ಜಾಹೀರಾತು ನೋಡಿದ ಜನ, ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ಅವರನ್ನು ತನ್ನದೇ ವಾಹನದಲ್ಲಿ ಯಾರದ್ದೋ ನಿವೇಶನಗಳ ಜಾಗಕ್ಕೆ ಕರೆದೊಯ್ದು ಆ ನಿವೇಶನಗಳೆಲ್ಲವೂ ತನ್ನದೇ ಎಂದು ಹೇಳುತ್ತಿದ್ದ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಸಿಕ್ಕಿಬಿದ್ದಿದ್ದು ಹೇಗೆ ?
‘ವಿಜಯನಗರದಲ್ಲಿ ‘ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ’ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರಿಗೆ ಹೋಲಿಕೆಯಾಗುವಂತೆ ಸಂಘ ತೆರೆದು ಆರೋಪಿ ಕೃತ್ಯ ಎಸಗುತ್ತಿದ್ದ.

ಆರೋಪಿ ನೀಡಿದ್ದ ಜಾಹೀರಾತುಗಳನ್ನು ನೋಡಿದ್ದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರು. ತನಿಖೆ ಆರಂಭಿಸಿದ ಸಿಸಿಬಿಯವಂಚನೆ ಹಾಗೂ ದುರುಪಯೋಗ ತಡೆ ದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT