ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೋಡಿ ಫ್ಲ್ಯಾಟ್‌ನಲ್ಲಿ 90 ಕೆ.ಜಿ. ಗಾಂಜಾ ಪತ್ತೆ

ಬೆಂಗಳೂರು ಪೊಲೀಸರ ಕಾರ್ಯಾಚರಣೆ ; 2 ಕ್ವಿಂಟಲ್ ಗಾಂಜಾ ಜಪ್ತಿ
Last Updated 18 ಸೆಪ್ಟೆಂಬರ್ 2020, 2:31 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ವಿರುದ್ಧ ಚುರುಕಿನ ಕಾರ್ಯಾಚರಣೆ ನಡೆಸುತ್ತಿರುವ ನಗರ ಪೊಲೀಸರು ಐದು ಪ್ರಕರಣಗಳಲ್ಲಿ 2 ಕ್ವಿಂಟಲ್ ಗಾಂಜಾ ಜಪ್ತಿ ಮಾಡಿದ್ದು, 15 ಮಂದಿಯನ್ನು ಬಂಧಿಸಿದ್ದಾರೆ.

ಕಾಡುಗೋಡಿಯ ಅಜಾಮ್ ಪಾಷಾ (25), ಮಸ್ತಾನ್ ಅಲಿ (25), ಹೊಸಕೋಟೆಯ ಮೊಹಮ್ಮದ್ ಅಬ್ಬಾಸ್ (27), ಆಂಧ್ರಪ್ರದೇಶದ ಮನೋಹರ್ (29), ಪಾರ್ಥ (28), ಮೊಹಮ್ಮದ್ ಖೈಜಲ್ (20), ಮೊಹಮ್ಮದ್ ಫಾರೂಕ್ (33), ಮೈಸೂರಿನ ಹಬೀಬ್‌ಖಾನ್ (45), ತುಷಾರ್ ಪಟ್ನಾಯಕ್ (25), ಕೇರಳದ ಲೂಬಿನ್ ಅಮಲ್ ಹಾಗೂ ವಿವೇಕ್‌ ಬಂಧಿತರು. ಉಳಿದವರ ಹೆಸರು ಗೊತ್ತಾಗಿಲ್ಲ.

₹50 ಲಕ್ಷ ಮೌಲ್ಯದ ಗಾಂಜಾ; ಕಾಡುಗೋಡಿಯ ದೊಡ್ಡಬನಹಳ್ಳಿಯ ಸಫಲ್ ಮಾರುಕಟ್ಟೆ ಹಿಂಭಾಗದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಬಚ್ಚಿಟ್ಟಿದ್ದ ₹ 50 ಲಕ್ಷ ಮೌಲ್ಯದ 90 ಕೆ.ಜಿ ಗಾಂಜಾವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

‘ಆರೋಪಿಗಳಾದ ಅಜಾಮ್ ಪಾಷಾ, ಮಸ್ತಾನ್ ಹಾಗೂ ಮೊಹಮ್ಮದ್ ಅಬ್ಬಾಸ್ ಆಂಧ್ರಪ್ರದೇಶದಿಂದ ಗಾಂಜಾವನ್ನು ನಗರಕ್ಕೆ ತರಿಸುತ್ತಿದ್ದರು. ಫ್ಲ್ಯಾಟ್‌ನಲ್ಲಿ ಸಂಗ್ರಹಿಸಿಟ್ಟು, ನಗರದ ಕೆಲ ಶಾಲಾ- ಕಾಲೇಜು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಪೂರೈಸುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಡೆಲಿವರಿ ಬಾಯ್ ಬಂಧನ: ಒಡಿಶಾದಿಂದ ಗಾಂಜಾ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಅಸ್ಸಾಂನ ಮೊಹಮ್ಮದ್ ಖೈಜಲ್ ಮತ್ತು ಮೊಹಮ್ಮದ್ ಫಾರೂಕ್‌ ಅವರನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

‘ನಗರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಅದರ ಜೊತೆಯೇ ಆಹಾರ ಡೆಲಿವರಿ ಬಾಯ್ ಸಹ ಆಗಿದ್ದರು. ಕೋಲಾರದಲ್ಲಿ ಬಾಡಿಗೆ ಮನೆ ಮಾಡಿದ್ದ ಅವರು, ಅಲ್ಲಿಯೇ ಗಾಂಜಾ ಸಂಗ್ರಹಿಸಿಟ್ಟಿದ್ದರು. ವಾರಕ್ಕೊಮ್ಮೆ ಬೆಂಗಳೂರಿಗೆ ಬಂದು ಗಾಂಜಾ ಮಾರಿ ಹೋಗುತ್ತಿದ್ದರು. ಅವರಿಂದ 51 ಕೆ.ಜಿ ಗಾಂಜಾ, ಕಾರು ಹಾಗು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಜೈಲಿನಿಂದ ಹೊರಬಂದು ಗಾಂಜಾ ಮಾರಾಟ: ಬೈಕ್‌ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಹೊರಬಂದು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪದಡಿ ಮನೋಹರ್‌ ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

‘ಮನೋಹರ್‌ನನ್ನು ಬೈಕ್ ಕಳವು ಪ್ರಕರಣದಲ್ಲಿ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿರುವಾಗ ಕೃಪಾನಂದ ಮತ್ತು ಪಾರ್ಥ ಎಂಬುವರ ಪರಿಚಯ ಆತನಿಗೆ ಆಗಿತ್ತು. ಗಾಂಜಾ ಮಾರಾಟ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ಅವರಿಬ್ಬರು ಹೇಳಿದ್ದರು. ಜೈಲಿನಿಂದ ಹೊರಬರುತ್ತಿದ್ದಂತೆ ಮನೋಹರ್, ಗಾಂಜಾ ಸಾಗಣೆ ಹಾಗೂ ಮಾರಾಟ ಮಾಡಲಾರಂಭಿಸಿದ್ದ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದರು.

‘₹ 8 ಸಾವಿರಕ್ಕೆ 1 ಕೆ.ಜಿ ಗಾಂಜಾ ಖರೀದಿಸಿ ನಗರಕ್ಕೆ ತರುತ್ತಿದ್ದ ಆರೋಪಿ, 20ರಿಂದ 30 ಸಾವಿರಕ್ಕೆ ಮಾರುತ್ತಿದ್ದ. ಆತನಿಂದ 57 ಕೆ.ಜಿ ಗಾಂಜಾ, ₹20 ಸಾವಿರ ನಗದು, 10 ಮೊಬೈಲ್, ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದೂ ಹೇಳಿದರು.

ಎಂಬಿಎ ಪದವೀಧರ ಬಂಧನ: ಮಾಲೂರಿನಿಂದ ಗಾಂಜಾ ಖರೀದಿಸಿ ತಂದು ನಗರದ ಕೆಲ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ತುಷಾರ್ ಪಟ್ನಾಯಕ್ ಎಂಬಾತನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಒಡಿಶಾದ ತುಷಾರ್, ಎಂಬಿಎ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಿದ್ದ. ಓದು ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಕೈಯಲ್ಲಿ ಹಣ ಬರುತ್ತಿದ್ದಂತೆ ಮಾದಕ ವಸ್ತು ಸೇವಿಸಲಾರಂಭಿಸಿದ್ದ ಆತ, ವ್ಯಸನಿಯಾಗಿ ಮಾರ್ಪಟ್ಟಿದ್ದ. ಲಾಕ್‌ಡೌನ್‌ ಸಮಯದಲ್ಲಿ ಮಾಲೂರಿನ ವ್ಯಕ್ತಿಯೊಬ್ಬನಿಂದ ಗಾಂಜಾ ಖರೀದಿಸಿದ್ದ. ನಂತರ, ತಾನೇ ಗಾಂಜಾ ಮಾರಾಟ ಮಾಡಲು ಶುರು ಮಾಡಿದ್ದ’ ಎಂದು ಪೊಲೀಸರು ಹೇಳಿದರು.

₹16 ಲಕ್ಷ ಮೌಲ್ಯದ ಹ್ಯಾಶಿಶ್ ಜಪ್ತಿ; ಜಾಲಹಳ್ಳಿ ಬಳಿಯ ಕಿರ್ಲೋಸ್ಕರ್ ಲೇಔಟ್‌ನಲ್ಲಿ ಹ್ಯಾಶಿಸ್ ಎಣ್ಣೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳದ ಲೂಬಿನ್ ಅಮಲ್ ಮತ್ತು ವಿವೇಕ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಬ್ಬರಿಂದ ₹16 ಲಕ್ಷ ಮೌಲ್ಯದ ಹ್ಯಾಶಿಶ್ ಎಣ್ಣೆ ಜಪ್ತಿ ಮಾಡಿದ್ದಾರೆ/

‘ಸ್ಟೀಲ್ ಡಬ್ಬಿಗಳಲ್ಲಿ 10 ಗ್ರಾಂ ಎಣ್ಣೆ ತುಂಬಿಡಲಾಗಿತ್ತು. ಫೇಸ್‌ಬುಕ್‌ ಮೂಲಕವೇ ಗ್ರಾಹಕರನ್ನು ಸಂಪರ್ಕಿಸಿ ಎಣ್ಣೆ ಮಾರಾಟ ಮಾಡಲಾಗುತ್ತಿತ್ತು’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT