ಆರ್‌ಟಿಐ ಕಾರ್ಯಕರ್ತ ಬಂಧನ

7
ಪೊಲೀಸ್‌ ಸಮವಸ್ತ್ರ ತೊಟ್ಟು ಓಡಾಟ; ಐಜಿಪಿ, ಪತ್ರಕರ್ತನ ಸೋಗಿನಲ್ಲಿ ವಂಚನೆ

ಆರ್‌ಟಿಐ ಕಾರ್ಯಕರ್ತ ಬಂಧನ

Published:
Updated:
ರಮಾನಂದ್ ಸಾಗರ್

ಬೆಂಗಳೂರು: ಸರ್ಕಾರಿ ನೌಕರರು ಹಾಗೂ ವೈದ್ಯರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಆರ್‌ಟಿಐ ಕಾರ್ಯಕರ್ತ ರಮಾನಂದ್ ಸಾಗರ್‌ ಎಂಬುವರನ್ನು ತಿಲಕ್‌ ನಗರ ಪೊಲೀಸರು ಬಂಧಿಸಿದ್ದಾರೆ.

‘ಭಾರತ್ ಯುವ ಜನಸೇನೆ’ ಹೆಸರಿನ ಸಂಘಟನೆ ಕಟ್ಟಿಕೊಂಡಿದ್ದ ಆರೋಪಿ, ಪೊಲೀಸ್‌ ಸಮವಸ್ತ್ರ ತೊಟ್ಟು ಓಡಾಡುತ್ತಿದ್ದರು. ತಾವೊಬ್ಬ ಐಜಿಪಿ ಅಧಿಕಾರಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡು ನೌಕರರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಅವರ ವಿರುದ್ಧ ಜಯನಗರ ಸರ್ಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

ಆಸ್ಪತ್ರೆಗೆ ಹೋಗುತ್ತಿದ್ದ ಆರೋಪಿ, ವೈದ್ಯರು ಮತ್ತು ಸಿಬ್ಬಂದಿಗೆ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ‘ನಿಮ್ಮ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿದ್ದೀರಾ. ದೂರುಗಳು ಬಂದಿದ್ದು, ನಿಮ್ಮನ್ನು ಅಮಾನತು ಮಾಡಿಸುತ್ತೇನೆ’ ಎಂದು ಬೆದರಿಸುತ್ತಿದ್ದರು. ರಾತ್ರಿ ಹೊತ್ತಿನಲ್ಲೂ ಆಸ್ಪತ್ರೆಗೆ ನುಗ್ಗಿ ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಸಿಬ್ಬಂದಿಯ ಖಾಸಗಿ ವಿಷಯಗಳನ್ನು ತಿಳಿದುಕೊಂಡು ಹಣ ವಸೂಲಿ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.

ಆರೋಪಿ ವಿರುದ್ಧ ಸಿಬ್ಬಂದಿಯು ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಅದು ತಿಳಿಯುತ್ತಿದ್ದಂತೆ ರಮಾನಂದ್ ಸಾಗರ್, ‘ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ದೂರು ದಾರರಿಗೆ ಜೀವ ಬೆದರಿಕೆ ಹಾಕಿದ್ದರು. ಆಯೋಗದ ನಿರ್ದೇಶನದಂತೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.ಬಳಿಕ ಆರೋಪಿ ತಲೆಮರೆಸಿಕೊಂಡಿದ್ದರು. ವಿಶೇಷ ತನಿಖಾ ತಂಡ ಒಂದು ತಿಂಗಳು ಹುಡುಕಾಡಿ ಆರೋಪಿಯನ್ನು ಬಂಧಿಸಿದೆ ಎಂದರು.

ರಾಜ್ಯದಾದ್ಯಂತ ಘಟಕ ಸ್ಥಾಪನೆ: 10 ವರ್ಷಗಳ ಹಿಂದೆ ಆರೋಪಿ, ‘ಭಾರತ ಯುವಜನ ಸೇನೆ’ ಸ್ಥಾಪಿಸಿದ್ದರು. ರಾಯಚೂರು, ಗದಗ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಘಟನೆಯ ಘಟಕಗಳನ್ನು ತೆರೆದಿದ್ದಾರೆ. ಆ ಮೂಲಕ ಹಲವರನ್ನು ವಂಚಿಸಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿರುವ ಮಾಹಿತಿ ಇದ್ದು, ಅದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಸಂಘಟನೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ 4 ಉಚಿತ ಆಂಬುಲೆನ್ಸ್‌ಗಳನ್ನು ಅವರು ಬಿಡುಗಡೆ ಮಾಡಿದ್ದರು. ಆ ಬಳಿಕ ನಿತ್ಯವೂ ಆಸ್ಪತ್ರೆಗಳಿಗೆ ಹೋಗಿ ಸಿಬ್ಬಂದಿಗೆ ಕಿರುಕುಳ ನೀಡಲಾರಂಭಿಸಿದ್ದರು. ಈ ಬಗ್ಗೆ ನೌಕರರು ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !