ಮಂಗಳವಾರ, ಅಕ್ಟೋಬರ್ 15, 2019
22 °C
ಚಮಚ, ತಟ್ಟೆಯಿಂದ ಮಾರಕಾಸ್ತ್ರ ತಯಾರಿಸಿಕೊಂಡ ಕೈದಿಗಳು!

ಸಿಸಿಬಿ ದಾಳಿ: ಜೈಲಿನಲ್ಲಿ 37 ಚಾಕು, ಡ್ರ್ಯಾಗರ್‌ ಪತ್ತೆ

Published:
Updated:
Prajavani

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು, ಗಾಂಜಾ ಹಾಗೂ ಭಾರಿ ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಜೈಲಿನಲ್ಲಿರುವ ಕೈದಿಗಳು ಗಾಂಜಾ ಹಾಗೂ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಜಂಟಿ ಕಮಿಷನರ್‌ ಸಂದೀಪ್ ಪಾಟೀಲ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ನಡೆಸಿದರು. 37 ಚಾಕುಗಳು, ಡ್ರ್ಯಾಗರ್‌ಗಳು, ಗಾಂಜಾ ಸೇದಲು ಬಳಸುವ ಪೈಪ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಜೈಲಿನಲ್ಲಿ ಸಿಕ್ಕಿರುವ ಬಹುತೇಕ ಮಾರಾಕಾಸ್ತ್ರಗಳನ್ನು ಕೈದಿಗಳೇ ತಯಾರಿಸಿಕೊಂಡಿದ್ದಾರೆ. ಇವುಗಳನ್ನು ಚಮಚ, ತಟ್ಟೆಗಳು, ಗ್ಯಾಸ್ ಲೈಟರ್ ಸೇರಿದಂತೆ ವಿವಿಧ ವಸ್ತುಗಳಿಂದ ತಯಾರಿಸಿರುವುದು ಎಂದು ಗೊತ್ತಾಗಿದೆ.

‘ರೌಡಿ ಚಟುವಟಿಕೆ ಮಟ್ಟ ಹಾಕುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜೈಲಿನ ಮೇಲೆ ಆಗಾಗ ದಾಳಿ ನಡೆಸಲಾಗುತ್ತದೆ. ಪ್ರತಿ ಬ್ಯಾರಕ್‌ನಲ್ಲೂ ತಪಾಸಣೆ ಮಾಡಲಾಗಿದೆ’ ಎಂದು ಸಂದೀಪ ಪಾಟೀಲ ತಿಳಿಸಿದರು.

‘ಜೈಲಿನಲ್ಲಿರುವ ಕೆಲವು ರೌಡಿಗಳನ್ನು ವಿಚಾರಣೆಗೆ ಒಳಪಡಿಸಿ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲಿನ ಒಳಗಿದ್ದು, ಅಲ್ಲಿನಿಂದಲೇ ಅಪರಾಧ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ತನಿಖೆಯ ದೃಷ್ಟಿಯಿಂದ ಕೆಲವು ವಿಷಯಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ. ಪರಿಶೀಲನೆ ವೇಳೆ ಜೈಲು ಅಧೀಕ್ಷಕರು ಜೊತೆಗಿದ್ದರು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ’ ಎಂದೂ ಅವರು ಹೇಳಿದರು.

ಪರಪ್ಪನ ಅಗ್ರಹಾರ ಜೈಲಿಗೆ ಎಷ್ಟೇ ಭದ್ರತೆ ಒದಗಿಸಿದರೂ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳು ಚಾಣಾಕ್ಷತನದಿಂದ ಅಪರಾಧ ಕೃತ್ಯಗಳಲ್ಲಿ ಪರೋಕ್ಷವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು ಆಗಾಗ ದಾಳಿ ನಡೆಸುತ್ತಾರೆ. ಪ್ರತಿ ಬಾರಿ ಮಾರಕಾಸ್ತ್ರಗಳು, ಮೊಬೈಲ್‌ಗಳು, ಮಾದಕ ದ್ರವ್ಯಗಳು ಪತ್ತೆಯಾಗುತ್ತಿವೆ.

Post Comments (+)