ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿ, ಜೊಮ್ಯಾಟೊ ಹೆಸರಿನಲ್ಲಿ ಡ್ರಗ್ಸ್ ಮಾರಾಟ

ಸಿಸಿಬಿ ಕಾರ್ಯಾಚರಣೆ * ಡೆಲಿವರಿ ಬಾಯ್ ಬಂಧನ
Last Updated 17 ಡಿಸೆಂಬರ್ 2022, 19:33 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಆ್ಯಪ್ ಆಧರಿತ ಆಹಾರ ಪೂರೈಕೆ ಕಂಪನಿಗಳಾದ ಸ್ವಿಗ್ಗಿ ಹಾಗೂ ಜೊಮ್ಯಾಟೊ ಹೆಸರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪಿ ಅಭಿಜಿತ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಅಭಿಜಿತ್ ಕೆಲಸ ಹುಡುಕಿಕೊಂಡು ಕೆಲ ವರ್ಷಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ. ಸ್ವಿಗ್ಗಿ ಹಾಗೂ ಜೊಮ್ಯಾಟೊ ಡೆಲಿವರಿ ಬಾಯ್ ಕೆಲಸ ಆರಂಭಿಸಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟು, ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಕೆಲಸ ಬಿಟ್ಟ ನಂತರ ಆರೋಪಿ, ಕಂಪನಿಯ ಟೀಶರ್ಟ್ ಹಾಗೂ ಬ್ಯಾಗ್‌ಗಳನ್ನು ವಾಪಸು ನೀಡಿರಲಿಲ್ಲ. ಅವುಗಳನ್ನೇ ಬಳಸಿಕೊಂಡು ಆರೋಪಿ ಡ್ರಗ್ಸ್ ಮಾರುತ್ತಿದ್ದ. ಈತ ಡೆಲಿವರಿ ಬಾಯ್ ಇರಬಹುದೆಂದು ಯಾರಿಗೂ ಅನುಮಾನ ಬಂದಿರಲಿಲ್ಲ. ಇತ್ತೀಚೆಗೆ ಆರೋಪಿ ಕೃತ್ಯದ ಬಗ್ಗೆ ಮಾಹಿತಿ ಬಂದಿತ್ತು. ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಸಮೇತ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

‘₹4 ಲಕ್ಷ ಮೌಲ್ಯದ 3 ಕೆ.ಜಿ. ಗಾಂಜಾ, ಎಲ್‌ಎಸ್‌ಡಿ ಕಾಗದದ 12 ಚೂರುಗಳು, ಮೊಬೈಲ್, ದ್ವಿಚಕ್ರ ವಾಹನ ಹಾಗೂ ಡೆಲಿವರಿ ಕಂಪನಿಗಳ ಟೀ–ಶರ್ಟ್, ಬ್ಯಾಗ್ ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪ್ರಮುಖ ಆರೋಪಿ ನಿರ್ದೇಶನದಂತೆ ಕೆಲಸ: ‘ಜಾಲದ ಪ್ರಮುಖ ಆರೋಪಿ ಅಭಿಷೇಕ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನೇ ಬಿಹಾರದಿಂದ ನಗರಕ್ಕೆ ಡ್ರಗ್ಸ್ ಕಳುಹಿಸಿ ಆರೋಪಿ ಅಭಿಜಿತ್‌ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಅಭಿಜಿತ್ ಮನೆಗೆ ಕೊರಿಯರ್ ಹಾಗೂ ಇತರೆ ಮಾರ್ಗಗಳ ಮೂಲಕ ಡ್ರಗ್ಸ್ ಪೊಟ್ಟಣ ಬರುತ್ತಿತ್ತು. ಡ್ರಗ್ಸ್ ತಲುಪಿಸಬೇಕಾದ ಗ್ರಾಹಕರ ವಿಳಾಸವನ್ನು ಪ್ರಮುಖ ಆರೋಪಿ ಅಭಿಷೇಕ್ ತಿಳಿಸುತ್ತಿದ್ದ. ನಂತರ, ಅಭಿಜಿತ್ ತನ್ನ ದ್ವಿಚಕ್ರ ವಾಹನದಲ್ಲಿ ಸುತ್ತಾಡಿ ಗ್ರಾಹಕರಿಗೆ ಡ್ರಗ್ಸ್ ತಲುಪಿಸುತ್ತಿದ್ದ. ಅದರ ಹಣ ನೇರವಾಗಿ ಪ್ರಮುಖ ಆರೋಪಿಗೆ ಸಂದಾಯವಾಗುತ್ತಿತ್ತು. ಆತ ಕಮಿಷನ್ ರೂಪದಲ್ಲಿ ಅಭಿಜಿತ್‌ಗೆ ಹಣ ನೀಡುತ್ತಿದ್ದ’ ಎಂದು ತಿಳಿಸಿದರು.

‘ಇಬ್ಬರೂ ಸೇರಿಕೊಂಡು ತಮ್ಮದೇ ಡ್ರಗ್ಸ್ ಜಾಲ ಸೃಷ್ಟಿಸಿಕೊಂಡಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿಗಳ ಉದ್ಯೋಗಿಗಳು ಹಾಗೂ ಇತರರು ಆರೋಪಿಗಳ ಬಳಿ ಡ್ರಗ್ಸ್ ಖರೀದಿಸುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT