ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಬೀದಿಗೆ 3 ಯೋಜನೆಗಳಡಿ ಸಿಸಿಟಿವಿ ಕ್ಯಾಮೆರಾ

ಮಿತವ್ಯಯದ ಬಗ್ಗೆ ‘ಸ್ಮಾರ್ಟ್‌’ ಆಗಿಲ್ಲ ಪಾಲಿಕೆ
Last Updated 19 ಫೆಬ್ರುವರಿ 2020, 22:18 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ‌ನಗರದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌, ಸ್ಮಾರ್ಟ್‌ ಬೀದಿದೀಪ ಹಾಗೂ ನಿರ್ಭಯ ಯೋಜನೆಗಳಡಿ ಪ್ರತ್ಯೇಕವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಒಂದೇ ರಸ್ತೆಗೆ ಬೇರೆ ಬೇರೆ ಏಜೆನ್ಸಿಗಳ ಮೂಲಕ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಒಂದು ಇಲಾಖೆ ಅಳವಡಿಸುವ ಸಿಸಿಟಿವಿ ಕ್ಯಾಮೆರಾವನ್ನೇ ಬೇರೆ ಇಲಾಖೆಯವರೂ ಬಳಸಿಕೊಳ್ಳುವ ಮೂಲಕ ಮಿತವ್ಯಯದ ಮಾರ್ಗ ಅನುಸರಿಸಲು ಅವಕಾಶವಿದ್ದರೂ ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆಗಳು ಪ್ರಯತ್ನ ನಡೆಸದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಅದರಿಂದ ವರಮಾನ ಗಳಿಸಲು ಮುಂದಾಗಿರುವ ಬಿಬಿಎಂಪಿ ‘ಚತುರ ವಾಹನ ನಿಲುಗಡೆ’ (ಸ್ಮಾರ್ಟ್‌ ಪಾರ್ಕಿಂಗ್‌) ವ್ಯವಸ್ಥೆಯನ್ನು ಕೇಂದ್ರ ವಾಣಿಜ್ಯ ಪ್ರದೇಶದ 85 ರಸ್ತೆಗಳಲ್ಲಿ ಜಾರಿಗೊಳಿಸುತ್ತಿದೆ. ಈ ವ್ಯವಸ್ಥೆ ಜಾರಿಯಾಗುವ ಪ್ರತಿ ಬೀದಿಯಲ್ಲೂ ವಾಹನಗಳ ನಿರ್ವಹಣೆ ಸಲುವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

‘ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯ ಗುತ್ತಿಗೆ ಪಡೆದ ಕಂಪನಿಯೇ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಿದೆ. ಇದಕ್ಕೆ ಪಾಲಿಕೆ ಯಾವುದೇ ವೆಚ್ಚ ಮಾಡುತ್ತಿಲ್ಲ. ಅದರ ಬದಲು 85 ರಸ್ತೆಗಳಲ್ಲೂ ಸ್ಮಾರ್ಟ್‌ ಪಾರ್ಕಿಂಗ್‌ ಜಾರಿಯಾದ ಬಳಿಕ ಪಾಲಿಕೆಗೆ ವರ್ಷಕ್ಕೆ ₹ 31 ಕೋಟಿ ವರಮಾನ ಬರಲಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಯೊಬ್ಬರು.

ಇನ್ನೊಂದೆಡೆ, ನಗರದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸುವ ‘ಸ್ಮಾರ್ಟ್‌ ಲೈಟಿಂಗ್‌’ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೂ ಪಾಲಿಕೆ ಟೆಂಡರ್‌ ಕರೆದು ಗುತ್ತಿಗೆ ನೀಡಿದೆ. ವಿನ್ಯಾಸ ರಚನೆ, ಹಣಕಾಸು ವ್ಯವಸ್ಥೆ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಡಿಎಫ್‌ಬಿಒಟಿ) ಮಾದರಿಯಲ್ಲಿ ಜಾರಿಯಾಗುವ ಈ ಕಾರ್ಯಕ್ರಮದ ಅಡಿ ಒಟ್ಟು 4.7 ಲಕ್ಷ ಬೀದಿದೀಪ ಕಂಬಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ಕಂಬದಲ್ಲೂ ಸಿಸಿಟಿವಿ ಕ್ಯಾಮೆರಾ ಇರಲಿದೆ.

ಇದಲ್ಲದೇ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ₹ 667 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರಡಿ ಪೊಲೀಸ್‌ ಇಲಾಖೆ ನಗರದಲ್ಲಿ 17 ಸಾವಿರ ಕ್ಯಾಮೆರಾಗಳನ್ನು ಅಳವಡಿಸುತ್ತಿದೆ.

ವಿವಿಧ ದಿಕ್ಕುಗಳಿಗೆ ತಿರುಗುವ (ಪಿಟಿಜೆಡ್‌) ಸಿಸಿಟಿವಿ ಕ್ಯಾಮೆರಾವೊಂದಕ್ಕೆ ₹ 35 ಸಾವಿರದಿಂದ ₹40 ಸಾವಿರ ಇದೆ. ಏಕಕಾಲದಲ್ಲಿ ಜಾರಿಯಾಗುತ್ತಿರುವ ಈ ಮೂರು ಯೋಜನೆಗಳ ನಡುವೆ ಸಮನ್ವಯ ಸಾಧಿಸಿದ್ದೇ ಆದರೆ ಸಾಕಷ್ಟು ಹಣ ಉಳಿಸಬಹುದು ಎಂಬ ಸಲಹೆ ವ್ಯಕ್ತವಾಗಿದೆ.

‘ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಾಗ ಪೊಲೀಸ್‌ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯ ಸಾಧಿಸಿದರೆ ವೃಥಾ ಹಣ ಪೋಲಾಗುವುದನ್ನು ತಡೆಯಬಹುದು. ಎಲ್‌ಇಡಿ ಬೀದಿದೀಪದ ಕಂಬದಲ್ಲಿ ಅಳವಡಿಸುವ ಕ್ಯಾಮೆರಾವನ್ನು ಸ್ಮಾರ್ಟ್‌ ಪಾರ್ಕಿಂಗ್‌ ನಿರ್ವಹಣೆಗೂ ಬಳಸಬಹುದು. ಪೊಲೀಸ್‌ ಇಲಾಖೆ ಕ್ಯಾಮೆರಾ ಅಳವಡಿಸುವ ಕಡೆ ಬಿಬಿಎಂಪಿಯ ಕ್ಯಾಮೆರಾಗಳ ಅಗತ್ಯ ಇರುವುದಿಲ್ಲ’ ಎಂದು ಪಾಲಿಕೆ ಸದಸ್ಯ ಸಿ.ಆರ್‌.ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

‘ಒಂದೇ ಕಮಾಂಡ್‌ ಸೆಂಟರ್‌’
‘ಪಾಲಿಕೆ ವತಿಯಿಂದ ಅಳವಡಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ನಿಯಂತ್ರಣಕ್ಕೆ ಕೇಂದ್ರೀಕೃತ ವ್ಯವಸ್ಥೆ ಬರಲಿದೆ. ಒಂದೇ ಕಮಾಂಡ್‌ ಸೆಂಟರ್‌ನಲ್ಲಿ ಕುಳಿತು ಅಷ್ಟೂ ಕ್ಯಾಮೆರಾಗಳಲ್ಲಿ ದಾಖಲಾಗುವ ದೃಶ್ಯಗಳನ್ನು ಪರಿಶೀಲಿಸಬಹುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸ್‌ ಇಲಾಖೆಯವರು ಅಳವಡಿಸುವ ಸಿಸಿಟಿವಿ ಕ್ಯಾಮೆರಾಗಳನ್ನೂ ಕೂಡಾ ಈ ಕಮಾಂಡ್‌ ಸೆಂಟರ್‌ಗೆ ಜೋಡಿಸುವಂತೆ ಪತ್ರ ಬರೆದಿದ್ದೇನೆ’ ಎಂದರು.

ಎಂ.ಜಿ. ರಸ್ತೆ: ಸ್ಮಾರ್ಟ್‌ ಪಾರ್ಕಿಂಗ್‌ ಶೀಘ್ರ
ಕಸ್ತೂರಬಾ ರಸ್ತೆಯಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಿರುವ ಬಿಬಿಎಂಪಿ, ಅದರ ಬೆನ್ನಲ್ಲೇ ಮಹಾತ್ಮ ಗಾಂಧಿ ರಸ್ತೆಯಲ್ಲೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಈ ಸಲುವಾಗಿ ಎಂ.ಜಿ.ರಸ್ತೆಯಲ್ಲಿ ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ವಾಹನಗಳ ನಿರ್ಹವಣೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯವೂ ಪ್ರಗತಿಯಲ್ಲಿದೆ.

ಮೂರು ವಿಧದ ಶುಲ್ಕ: ‘ಸ್ಮಾರ್ಟ್‌ ಪಾರ್ಕಿಂಗ್‌ ಜಾರಿಯಾಗುವ 85 ರಸ್ತೆಗಳನ್ನು ಪ್ರೀಮಿಯಂ (ಎ), ವಾಣಿಜ್ಯ (ಬಿ) ಮತ್ತು ಸಾಮಾನ್ಯ (ಸಿ) ಎಂದು ವರ್ಗೀಕರಿಸಲಾಗುತ್ತಿದೆ. ಪ್ರೀಮಿಯಂ ರಸ್ತೆಗಳಲ್ಲಿ ಪಾರ್ಕಿಂಗ್‌ ಶುಲ್ಕ ಹೆಚ್ಚಿರುತ್ತದೆ. ಬೈಸಿಕಲ್‌ಗಳ ನಿಲುಗಡೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಎಂ.ಜಿ.ರಸ್ತೆ ಪ್ರೀಮಿಯಂ ವಿಭಾಗದಲ್ಲಿ ಬರಲಿದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು. ‌

‘ಈ ರಸ್ತೆಗಳಲ್ಲಿ ಡಿಜಿಟಲ್‌ ಫಲಕಗಳ ಮೂಲಕ ವಾಹನ ನಿಲುಗಡೆಗೆ ಎಲ್ಲಿ ಸ್ಥಳಾವಕಾಶ ಲಭ್ಯ ಎಂಬ ಮಾಹಿತಿ ನೀಡಲಾಗುತ್ತದೆ. ನಗದು ಅಥವಾ ಡಿಬಿಟ್‌/ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ವಾಹನಗಳ ಮಾಲೀಕರು ಪಾರ್ಕಿಂಗ್‌ ಶುಲ್ಕವನ್ನು ಪಾವತಿಸಬಹುದು’ ಎಂದರು.

*
ಒಂದೇ ಕಡೆ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದನ್ನು ತಪ್ಪಿಸಲು ಪೊಲೀಸ್‌ ಇಲಾಖೆಯ ಪ್ರಮುಖರ ಜೊತೆ ಸಮಾಲೋಚನೆ ನಡೆಸುತ್ತೇನೆ.
-ಬಿ.ಎಚ್‌.ಅನಿಲ್‌ ಕುಮಾರ್‌, ಪಾಲಿಕೆ ಆಯುಕ್ತ

ಎಂ.ಜಿ.ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಯಿತು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT