ಜನರ ಜೇಬು ಕತ್ತರಿಸುತ್ತಿರುವ ಕೇಂದ್ರ ಸರ್ಕಾರ: ಡಿ.ಕೆ. ಶಿವಕುಮಾರ್

ಬೊಮ್ಮನಹಳ್ಳಿ: ‘ಕೊರೊನಾ ಸಂಕಷ್ಟದ ಸಮಯದಲ್ಲೂ ಬೆಲೆ ಏರಿಕೆಗೆ ಮುಂದಾ ಗಿರುವ ಕೇಂದ್ರ ಸರ್ಕಾರ, ಪರೋಕ್ಷವಾಗಿ ಜನರ ಜೇಬು ಕತ್ತರಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಶನಿವಾರ ಹಮ್ಮಿಕೊಂಡಿದ್ದ ಬಡವರಿಗೆ ಪರಿಹಾರದ ಚೆಕ್ ವಿತರಣೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನೋಟು ರದ್ದತಿಯಿಂದ ಹಿಡಿದು ಇಲ್ಲಿಯವರೆಗೆ ಎಲ್ಲದ್ದಕ್ಕೂ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದೇ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ. ಜನರು ಇಂದು ಚಿನ್ನ ಗಿರವಿ ಇಟ್ಟು ಜೀವನ ನಡೆಸುವ ದುಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿದ್ದಾರೆ, ನಿರುದ್ಯೋಗ ಬೆಳೆದು ನಿಂತಿದೆ. ಪಕೋಡ ಮಾಡುವ ಅಡುಗೆ ಎಣ್ಣೆ ಬೆಲೆಯೂ ₹200 ತಲುಪಿದೆ’ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ‘ದೇಶದ ಜನರ ಬದುಕನ್ನು ಭಸ್ಮ ಮಾಡಿದ ಮೋದಿ, ಆಧುನಿಕ ಭಸ್ಮಾಸುರನಾಗಿದ್ದಾರೆ’ ಎಂದು ಆರೋಪಿಸಿದರು.
ಬೊಮ್ಮನಹಳ್ಳಿ ಭಾಗದ ಎಚ್ಎಸ್ಆರ್ ಬಡಾವಣೆ, ಹೊಸಪಾಳ್ಯ ಹಾಗೂ ಹೊಂಗಸಂದ್ರದಲ್ಲಿ ಸುಮಾರು 10 ಸಾವಿರ ಜನರಿಗೆ ತಲಾ ₹1 ಸಾವಿರ ನಗದು ಪರಿಹಾರ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವ ರೆಡ್ಡಿ, ಬಿಳೇಕಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ ನಾರಾಯಣ್, ಐಎನ್ ಟಿಯುಸಿ ರಾಜ್ಯ ಉಪಾಧ್ಯಕ್ಷ ರವೀಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ರೆಡ್ಡಿ, ಸ್ಥಳೀಯ ಮುಖಂಡ ರಾಘವೇಂದ್ರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.