ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೀನಾಕ್ಷಿನಗರದ ನಿವಾಸಿ ಲಕ್ಷ್ಮಮ್ಮ (53) ಬಂಧಿಸಲಾದ ಆರೋಪಿ.
ಆರೋಪಿಯಿಂದ ₹ 20.98 ಲಕ್ಷ ಮೌಲ್ಯದ 374 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮೀನಾಕ್ಷಿನಗರದ ನಿವಾಸಿ, ಬಟ್ಟೆ ವ್ಯಾಪಾರಿ ರಂಜಿತಾ ಅವರ ಮನೆಯಲ್ಲಿ ಒಂದು ವರ್ಷದಿಂದ ಆರೋಪಿ ಮಹಿಳೆ ಮನೆ ಕೆಲಸ ಮಾಡುತ್ತಿದ್ದರು. ರಂಜಿತಾ ತಮ್ಮ ಮಾವ ಲಕ್ಷ್ಮಣ್‌ಗೆ ಚಿನ್ನದ ಚೈನು ಕೊಡಲು ಕಬೋರ್ಡ್ ತೆರೆದಾಗ ಕೆಲವು ಆಭರಣಗಳ ಕಣ್ಮರೆಯಾಗಿದ್ದವು. ಲಕ್ಷ್ಮಮ್ಮನ ಮೇಲೆ ಅನುಮಾನಗೊಂಡು ಕೆಲಸದಿಂದ ತೆಗೆದುಹಾಕಿದ್ದರು. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದರು.
‘ಲಕ್ಷ್ಮಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರತಿ ದಿನ ಒಂದೊಂದು ಚಿನ್ನಾಭರಣ ಕಳವು ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ’ ಎಂದು ಪೊಲೀಸರು ಹೇಳಿದರು.
ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಬೈಕ್‌ಗಳ ಲಾಕ್ ಮುರಿದು ಬೈಕ್ ಕಳವು ಹಾಗೂ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುಟ್ಟೇನಹಳ್ಳಿ ನಿವಾಸಿ ಕಾರ್ತಿಕ್ ಅಲಿಯಾಸ್ ಹಂದಿ ಅಲಿಯಾಸ್ ತುಕಡಿ (24) ಬಂಧಿತ.
ಆರೋಪಿಯಿಂದ ₹ 2.85 ಲಕ್ಷ ಮೌಲ್ಯದ 51 ಗ್ರಾಂ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.