ಭಾನುವಾರ, ಜುಲೈ 3, 2022
23 °C
* ₹ 40 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ * ಕೋರಮಂಗಲ ಪೊಲೀಸರ ಕಾರ್ಯಾಚರಣೆ

ಚಾಮರಾಜನಗರದಲ್ಲಿ ಗಾಂಜಾ ಬೆಳೆ: ಕೋರಮಂಗಲ ಪೊಲೀಸರಿಂದ ಐವರ ಬಂಧನ‍

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಬೆಳೆದ ಗಾಂಜಾವನ್ನು ನಗರಕ್ಕೆ ತಂದು ಮಾರುತ್ತಿದ್ದ ಆರೋಪದಡಿ ಐವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಶಿವರಾಜ್, ರಮೇಶ್, ಮಂಜುನಾಥ್, ಮೂರ್ತಿ ಹಾಗೂ ಅಭಿಲಾಷ್‌ ಬಂಧಿತರು. ಇವರಿಂದ ₹ 40 ಲಕ್ಷ ಮೌಲ್ಯದ 102 ಕೆ.ಜಿ 200 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದರು.

‘ನಗರದಲ್ಲಿ ವ್ಯವಸ್ಥಿತ ತಂಡ ಕಟ್ಟಿಕೊಂಡು ಆರೋಪಿಗಳು ಗಾಂಜಾ ಮಾರುತ್ತಿದ್ದರು. ಕೋರಮಂಗಲ 1ನೇ ಹಂತದ ಬಳ್ಳಾರಿ ಕಾಲೊನಿ ಬಳಿ ಮಾರ್ಚ್ 16ರಂದು ಆರೋಪಿಯೊಬ್ಬ ಗಾಂಜಾ ಮಾರಲು ಬಂದಿದ್ದ. ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. ಆತ ನೀಡಿದ್ದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದೂ ತಿಳಿಸಿದರು.

ಪುಷ್ಪಪುರ ಗ್ರಾಮಸ್ಥರಿಂದ ಖರೀದಿ: ‘ಚಾಮರಾಜನಗರ ಜಿಲ್ಲೆಯ ಹನ್ನೂರು ತಾಲ್ಲೂಕಿನ ಪುಷ್ಪಪುರ ಗ್ರಾಮದಲ್ಲಿ ಕೆಲವರು ಗಾಂಜಾ ಬೆಳೆಯುತ್ತಿದ್ದಾರೆ. ಅವರ ಬಳಿಯೇ ಆರೋಪಿಗಳು ಗಾಂಜಾ ಖರೀದಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

‘ಗಾಂಜಾವನ್ನು ಸಣ್ಣ ಪೊಟ್ಟಣಗಳಲ್ಲಿ ತುಂಬಿ ಮಾರಲಾಗುತ್ತಿತ್ತು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು, ಕೆಲ ಕಾರ್ಮಿಕರು ಆರೋಪಿಗಳ ಬಳಿ ಗಾಂಜಾ ಖರೀದಿಸುತ್ತಿದ್ದರು. ಎಚ್‌.ಎಸ್.ಆರ್ ಬಡಾವಣೆ, ಕೆ.ಆರ್.ಪುರ, ಬೇಗೂರು, ಕೋಣನಕುಂಟೆ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲೂ ಆರೋಪಿಗಳು ಗಾಂಜಾ ಮಾರುತ್ತಿದ್ದರು’ ಎಂದೂ ಶ್ರೀನಾಥ್ ಜೋಷಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು