ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಗೇಟ್’ ಸಂರಕ್ಷಣೆಗೆ ಹಕ್ಕೊತ್ತಾಯ

ಪೊಲೀಸ್ ಕಮಿಷನರ್ ಟ್ವೀಟ್‌
Last Updated 21 ಆಗಸ್ಟ್ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿಯ ಚಾಮರಾಜಪೇಟೆಯಲ್ಲಿರುವ ‘ಬೆಂಗಳೂರು ಗೇಟ್‌’ ಪಾರಂಪರಿಕ ಚೌಕಿಯನ್ನು ಸಂರಕ್ಷಿಸಬೇಕೆಂಬ ಕೂಗು ಕೇಳಿಬಂದಿದ್ದು, ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರೇ ಆ ಬಗ್ಗೆ ಟ್ವೀಟ್ ಮಾಡಿದ್ದಾರೆ.

‘ಚಾಮರಾಜಪೇಟೆಯ ನಗರ ಸಶಸ್ತ್ರ ಮೀಸಲು ಪಡೆಯ ಕಾಂಪೌಂಡ್‌ನಲ್ಲಿರುವ 18ನೇ ಶತಮಾನದ ‘ಬೆಂಗಳೂರು ಗೇಟ್‌’ ಅನ್ನು ಪಾರಂಪರಿಕ ವಾಸ್ತುಶಿಲ್ಪವಾಗಿ ಪರಿಗಣಿಸಿ ಸಂರಕ್ಷಿಸಲು ಯಾರಾದರೂ ಶಿಫಾರಸು ಮಾಡುವ ಮೂಲಕ ನನ್ನ ನೆರವಿಗೆ ಬರುವಿರಾ’ ಎಂದು ಭಾಸ್ಕರ್ ರಾವ್ ಟ್ವೀಟ್‌ನಲ್ಲಿ ಕೇಳಿದ್ದಾರೆ.

ಅದಕ್ಕೆ ಮರು ಟ್ವೀಟ್‌ ಮಾಡಿರುವ ಹಲವರು, ‘ನಿಮ್ಮೊಂದಿಗೆ ನಾವಿದ್ದೇವೆ. ಮುಂದುವರಿಯಿರಿ’ ಎಂದು ಹೇಳಿದ್ದಾರೆ. ಇನ್ನು ಕೆಲವರು,ಪಾರಂಪರಿಕ ವಾಸ್ತುಶಿಲ್ಪ ಸಂರಕ್ಷಿಸಲು ಅರ್ಹರಾದವರ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ‘ಸ್ವಾಮಿನಾಥನ್ ಅವರು ಸಂರಕ್ಷಣೆ ಕೆಲಸಕ್ಕೆ ಸಮರ್ಥರು’ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿನಾಥನ್, ‘ಧನ್ಯವಾದಗಳು ಮೇಡಂ. ಇನ್‌ಟಕ್‌ ಸಂಘಟನೆಯ ಮೀರಾ ಅಯ್ಯರ್ ಹಾಗೂ ಪಂಕಜ್ ಮೋದಿ ಈಗಾಗಲೇ ಕೋಟೆ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಕೆಲವರು, ‘ಬ್ರಿಟಿಷರ ಕಾಲದಲ್ಲಿ ಮೈಸೂರಿನಿಂದ ನಗರಕ್ಕೆ ಬರುವವರ ಬಗ್ಗೆ ನಿಗಾ ವಹಿಸಲು ‘ಬೆಂಗಳೂರು ಗೇಟ್’ ಚೌಕಿ ನಿರ್ಮಿಸಲಾಗಿತ್ತು. ಕಾವಲುಗಾರರು ಈ ಚೌಕಿಯಲ್ಲಿರುತ್ತಿದ್ದರು. ಈ ಪಾರಂಪರಿಕ ವಾಸ್ತುಶಿಲ್ಪವನ್ನು ಸ್ಥಳೀಯ ಆಡಳಿತ ಸಂಸ್ಥೆಯೇ ಸಂರಕ್ಷಿಸಬೇಕು’ ಎಂದೂ ಸಲಹೆ ನೀಡಿದ್ದಾರೆ.

‘ಬೆಂಗಳೂರು ಗೇಟ್’ ಸಂರಕ್ಷಿಸಲು ಜನರು ಆಸಕ್ತಿ ತೋರುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿ ಮತ್ತೊಂದು ಟ್ವೀಟ್ ಮಾಡಿರುವ ಭಾಸ್ಕರ್‌ ರಾವ್, ‘ನೀವು ನೀಡಿದ ಮಾರ್ಗದರ್ಶನ ಹಾಗೂ ಸಲಹೆ ನನ್ನಲ್ಲಿ ಉತ್ಸಾಹ ತುಂಬಿದೆ. ನಾನು ತಕ್ಷಣ ಸರ್ಕಾರದಿಂದ ಅನುಮತಿ ಪಡೆಯುತ್ತೇನೆ ಮತ್ತು ನಿಮ್ಮ ನೆರವನ್ನೂ ಕೋರುತ್ತೇನೆ’ ಎಂದಿದ್ದಾರೆ.

‘ಕಬ್ಬನ್ ಪಾರ್ಕ್ ಠಾಣೆಯೂ ಪಾರಂಪರಿಕ ಕಟ್ಟಡ’

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸುದೀಪ್ ಸಿಂಗ್ ಎಂಬುವರು, ‘ಕಬ್ಬನ್ ಪಾರ್ಕ್ ಠಾಣೆ ಕಟ್ಟಡವೂ ಪಾರಂಪರಿಕ ವಾಸ್ತುಶಿಲ್ಪದ ಕಟ್ಟಡ’ ಎಂದಿದ್ದಾರೆ. ಆ ಕಟ್ಟಡದ ಫೋಟೊವನ್ನೂ ಪ್ರಕಟಿಸಿದ್ದಾರೆ.

ಅದಕ್ಕೆ ಮರು ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ‘ಮುಂದಿನ ದಿನಗಳಲ್ಲಿ ಅದನ್ನೂ ಪರಿಗಣಿಸುತ್ತೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT