ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ ಮೈದಾನ: ಚಾಮರಾಜಪೇಟೆ ಬಂದ್‌ಗೆ ಪೂರ್ಣ ಬೆಂಬಲ

ಈದ್ಗಾ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್‌ ಹೆಸರಿಡಲು ಸಾರ್ವಜನಿಕರ ಒತ್ತಾಯ
Last Updated 12 ಜುಲೈ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಈದ್ಗಾ ಮೈದಾನವನ್ನು ಸಾರ್ವಜನಿಕ ಆಟದ ಮೈದಾನವನ್ನಾಗಿ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟಗಳ ವೇದಿಕೆ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್‌ಗೆ ಚಾಮರಾಜಪೇಟೆಯಲ್ಲಿ ಮಂಗಳವಾರ ಪೂರ್ಣ ಬೆಂಬಲ ವ್ಯಕ್ತವಾಯಿತು.

ಸಿರ್ಸಿ ವೃತ್ತದಿಂದ ಚಾಮರಾಜಪೇಟೆ ಮಕ್ಕಳ ಕೂಟದವರೆಗೂ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ಭಾಗದಲ್ಲಿ ಮಂಗಳವಾರ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಹೋಟೆಲ್‌, ವಾಣಿಜ್ಯ ಮಳಿಗೆಗಳು, ಶಾಲೆಗಳು, ಟ್ರಾನ್ಸ್‌ಪೋರ್ಟ್‌ ಕಚೇರಿಗಳು ಸೇರಿ ಎಲ್ಲ ರೀತಿಯ ಮಳಿಗೆಗಳು ಬಂದ್‌ ಆಗಿದ್ದವು. ಆಸ್ಪತ್ರೆ, ಔಷಧಾಲಯ, ಹಾಲು–ತರಕಾರಿ ಮಳಿಗೆಗಳು ಎಂದಿನಂತಿದ್ದವು. ಬೀದಿ ಬದಿ ವ್ಯಾಪಾರವೂ ಇರಲಿಲ್ಲ.

ಚಾಮರಾಜಪೇಟೆಯ 30ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿದ್ದವು. ಹೋಟೆಲ್‌, ಮಳಿಗೆಗಳು ಮಂಗಳವಾರ ಬಾಗಿಲು ತೆರೆಯಲಿಲ್ಲ.

ಸಂಘಟನೆಗಳ ಸದಸ್ಯರು ಈದ್ಗಾ ಮೈದಾನದ ಬಳಿ ಸೇರಿಕೊಂಡಿದ್ದರು. ‘ಮೈದಾನವನ್ನು ಸಾರ್ವಜನಿಕ ಸ್ವತ್ತಾ ಗಿಯೇ ಉಳಿಸಬೇಕು. ಜಯಚಾಮರಾಜೇಂದ್ರ ಒಡೆಯರ್‌ ಹೆಸರಿಡಬೇಕು. ಗಣೇಶೋತ್ಸವ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಬೇಕು. ರಾಷ್ಟ್ರ, ರಾಜ್ಯ ಧ್ವಜಾರೋಹಣ ನೆರವೇರಿಸಬೇಕು’ ಎಂದು ಆಗ್ರಹಿಸಿದರು. ವೇದಿಕೆ ಅಧ್ಯಕ್ಷ ರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಬಿ.ವಿ. ಗಣೇಶ್‌ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರಿದ್ದರು.

ನೂರಾರು ಜನ ಸೇರಿಕೊಂಡಿದ್ದರಿಂದ ಕೆಲವು ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಎಲ್ಲರೂ ‘ಮೈದಾನ ಸಾರ್ವಜನಿಕರದ್ದು’ ಎಂದು ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನಂತರ ಪರಿಸ್ಥಿತಿ ತಿಳಿಗೊಂಡಿತು.

ಸಂಚಾರದ ದಟ್ಟಣೆ: ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೂ ಮೈದಾನದ ಬಳಿ ಹೆಚ್ಚು ಜನರು ಇದ್ದಿದ್ದರಿಂದ, ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ಮೈಸೂರು ರಸ್ತೆ ಹಾಗೂ ಚಾಮರಾಜಪೇಟೆ ಕಡೆಯ ರಸ್ತೆಗಳಲ್ಲಿ ವಾಹನ ದಟ್ಟಣೆ ಇತ್ತು.

ಮಕ್ಕಳ ಆಟ: ಚಾಮರಾಜಪೇಟೆ ಬಂದ್‌ ಸಂದರ್ಭದಲ್ಲಿ ಈದ್ಗಾ ಮೈದಾನಕ್ಕೆ ಯಾರೂ ಪ್ರವೇಶಿಸದಂತೆ ಪೊಲೀಸರು ಕ್ರಮ ವಹಿಸಿದ್ದರು. ಮಧ್ಯಾಹ್ನದ ನಂತರ ಪೊಲೀಸರ ಬಂದೋಬಸ್ತ್‌ ನಡುವೆಯೇ ಮಕ್ಕಳು ಆಟವಾಡುತ್ತಿದ್ದದ್ದು ಗಮನಸೆಳೆಯಿತು. ಬಂದ್‌ ಬಗ್ಗೆ ಮಾಹಿತಿ ಇಲ್ಲದ ಕೆಲವರು ಎಂದಿನಂತೆ ಕೆಲವು ಹೋಟೆಲ್‌ಗಳಲ್ಲಿ ಊಟ ಮಾಡಲು ಬಂದಾಗ ಅವರಿಗೆ ನಿರಾಸೆಯಾಗಿತ್ತು. ‘ಪಾದರಾಯನಪುರ ದಾಟಿ ಹೋದರೆ ಅಥವಾ ಬಸವನಗುಡಿ ಕಡೆಗೆ ಹೋದರೆ ಊಟ ಸಿಗುತ್ತೆ’ ಎಂದು ಸ್ಥಳೀಯರು ಹೇಳಿ ಕಳುಹಿಸಿದರು.

ಮನವಿ: ‘ಚಾಮರಾಜಪೇಟೆ ನಾಗರಿಕರ ಒಕ್ಕೂಟಗಳ ವೇದಿಕೆ ವತಿಯಿಂದ ಸಂಸದರ ನೇತೃತ್ವದಲ್ಲಿ ಈ ವಾರದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಸಾರ್ವ ಜನಿಕ ಸ್ವತ್ತಾಗಿ ಉಳಿಸಿಕೊಂಡು, ಮೈದಾನಕ್ಕೆ ನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗುತ್ತದೆ ಎಂದು ವೇದಿಕೆ ಸದಸ್ಯ ಶಶಾಂಕ್‌ ತಿಳಿಸಿದರು.

ಪೊಲೀಸರ ವಶಕ್ಕೆ

ಈದ್ಗಾ ಮೈದಾನದಲ್ಲಿ ಒಂದಷ್ಟು ಜನರ ಗುಂಪು ಘೋಷಣೆಯನ್ನು ಕೂಗಿದರು. ಮೈದಾನದತ್ತ ಗುಂಪಾಗಿ ಹೋಗಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇದು ಎರಡು–ಮೂರು ಬಾರಿ ನಡೆಯಿತು. ಒಟ್ಟು 41 ಜನರನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT