ಭಾನುವಾರ, ಆಗಸ್ಟ್ 25, 2019
20 °C
ಭೂಮಿ ಮತ್ತು ವಸತಿ ಹಕ್ಕು ವಂಚಿತರಿಂದ ನಡುರಾತ್ರಿ ಸ್ವಾತಂತ್ರ್ಯೋತ್ಸವ

‘ಅನ್ಯಾಯ ಸಹಿಸುವುದೂ ಅಪರಾಧ’

Published:
Updated:
Prajavani

ಬೆಂಗಳೂರು: ‘ಅನ್ಯಾಯ ಸಹಿಸಿಕೊಳ್ಳುವುದು ಕೂಡ ಅಪರಾಧ, ಅದನ್ನು ನಾವ್ಯಾರೂ ಮಾಡಬಾರದು’ ಎಂದು ‘ಭೀಮ್ ಆರ್ಮಿ’ ಸಂಘಟನೆ ಮುಖ್ಯಸ್ಥ ಚಂದ್ರಶೇಖರ ಆಜಾದ್ ರಾವಣ್ ಹೇಳಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಬುಧವಾರ ರಾತ್ರಿ ನಡೆದ ‘ನಡುರಾತ್ರಿ ಸ್ವಾತಂತ್ರ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಬೆಂಗಳೂರಿಗೆ ಬಂದ ಕೂಡಲೇ ಆಕ್ಷೇಪಾರ್ಹ ಭಾಷಣ ಮಾಡದಂತೆ ಪೊಲೀಸರು ಸಹಿ ಪಡೆದರು. ಉತ್ತರ ಪ್ರದೇಶದಲ್ಲಿ ದಲಿತರ ಪರ ಹೋರಾಟ ನಡೆಸಿ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದೇನೆ. ಮತ್ತೆ ಜೈಲಿಗೆ ಹೋಗಲು ಹೆದರುವುದಿಲ್ಲ. ನಾನು ಹೇಳಬೇಕು ಎಂದುಕೊಂಡಿದ್ದನ್ನು ಹೇಳಿಯೇ ತೀರುತ್ತೇನೆ’ ಎಂದರು.

‘ಅನ್ಯಾಯದ ವಿರುದ್ಧ ನಾವು ಮಾಡುವ ಹೋರಾಟ ಸಂವಿಧಾನ ಉಳಿಸಿಕೊಳ್ಳುವ ಕೆಲಸವಾಗಿದೆ. ಆಳುವವರಿಗೆ ಸಂವಿಧಾನ ಮತ್ತು ಈ ನೆಲದ ಕಾನೂನು ಗೌರವಿಸುವುದನ್ನು ನಾವೆಲ್ಲರೂ ಸೇರಿ ಕಲಿಸಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶ್ರೀಮಂತರು ತಮ್ಮಲ್ಲಿರುವ ಹಣದಿಂದ ದೇಶ ಆಳುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಭೂಮಿ ಕಸಿದುಕೊಳ್ಳಲು ಹೊರಟಿದ್ದಾರೆ. ಅದು ಈ ಸರ್ಕಾರಗಳಿಂದ ಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ. ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸಬಹುದು. ಆದರೆ, ಬೆದರಿಸಿ ಓಡಿಸಲು ಸಾಧ್ಯವಿಲ್ಲ. ಭೂಮಿ ಮತ್ತು ವಸತಿ ಹಕ್ಕಿನ ಹೋರಾಟವನ್ನು ದೇಶದಾದ್ಯಂತ ವಿಸ್ತರಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ‘ಸಂತೋಷದಿಂದ ಆಚರಿಸಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ನೋವಿನಿಂದ ಆಚರಿಸುತ್ತಿದ್ದೇವೆ. ಈ ದೇಶದ ಶೋಷಿತರು, ದಲಿತರು, ಮಹಿಳೆಯರಿಗೆ ನೈಜ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಈ ವರ್ಗದ ಜನರು ಗೌರವಯುತ ಜೀವನ ನಡೆಸಲು ಸಾಧ್ಯವಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ’ ಎಂದರು.

ವಿವಿಧೆಡೆಯಿಂದ ಬಂದಿದ್ದ ಭೂಮಿ ಮತ್ತು ವಸತಿ ವಂಚಿತರು ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಶಿರೂರ್ ಪಾರ್ಕ್ ತನಕ ದೀಪಗಳೊಂದಿಗೆ ಮೆರವಣಿಗೆ ನಡೆಸಿದರು.

‘ಬಡವರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ’

‘ಭೂಮಿ, ವಸತಿ ಹಕ್ಕಿನಿಂದ ವಂಚಿತರಾಗಿ ಬಡತನದಲ್ಲಿ ಮುಳುಗಿರುವ ಜನರಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಬಡತನದಿಂದ ಮುಕ್ತಿ ಪಡೆಯುವುದೇ ನಿಜವಾದ ಸ್ವಾತಂತ್ರ್ಯ. ನನ್ನ ಕೊನೆಯ ಉಸಿರಿರುವ ತನಕ ಬಡವರ ಪರವಾಗಿ ಹೋರಾಡುತ್ತೇನೆ’ ಎಂದರು.

‘ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಇಂದಿರಾಗಾಂಧಿ ವಿರುದ್ಧ ಜಯಪ್ರಕಾಶ ನಾರಾಯಣ ಹೋರಾಟ ನಡೆಸಿದರು. ಅದರ ಫಲವಾಗಿ ಇಂದಿರಾ ಅಧಿಕಾರ ಕಳೆದುಕೊಂಡರು. ಮನಮೋಹನ ಸಿಂಗ್ ಅವರು ಉತ್ತಮ ಆಡಳಿತ ನೀಡಿದರೂ ಹಗರಣಗಳನ್ನು ತಡೆಯುವಷ್ಟು ದಕ್ಷರಾಗಲಿಲ್ಲ. ಹೀಗಾಗಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು. ಪರಿಸ್ಥಿತಿಯ ಲಾಭ ಪಡೆದುಕೊಂಡು ನರೇಂದ್ರ ಮೊದಿ ಅಧಿಕಾರ ಹಿಡಿದಿದ್ದಾರೆ’ ಎಂದರು.

Post Comments (+)