72 ಗಂಟೆಗಳಲ್ಲಿ ನಿರ್ಮಿಸಿ ನಭಕ್ಕೆ ಹಾರಿಸಬಲ್ಲ ಉಡ್ಡಯನ ವಾಹನ!

7
ಮೂರು ವರ್ಷದಲ್ಲಿ 50 ಬಾಹ್ಯಾಕಾಶ ನೌಕೆಗಳ ಉಡ್ಡಯನ ಗುರಿ

72 ಗಂಟೆಗಳಲ್ಲಿ ನಿರ್ಮಿಸಿ ನಭಕ್ಕೆ ಹಾರಿಸಬಲ್ಲ ಉಡ್ಡಯನ ವಾಹನ!

Published:
Updated:

ಬೆಂಗಳೂರು: ಮೂರರಿಂದ ಆರು ಜನ ಸೇರಿ, 72 ರಿಂದ 74 ಗಂಟೆಗಳಲ್ಲಿ ಪುಟ್ಟ ಬಾಹ್ಯಾಕಾಶ ಉಡಾವಣಾ ವಾಹನ ತಯಾರಿಸಿ, ಸಣ್ಣ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಹೊಸ ಯುಗ ಇಸ್ರೊದಲ್ಲಿ ಆರಂಭವಾಗಲಿದೆ.

ದೇಶ– ವಿದೇಶಗಳಿಂದ ಸಣ್ಣ ಉಪಗ್ರಹಗಳ ಉಡಾವಣೆಗೆ ಭಾರಿ ಬೇಡಿಕೆ ಇದೆ. ಅತ್ಯಂತ ಕಡಿಮೆ ಖರ್ಚು ಮತ್ತು ಅವಧಿಯಲ್ಲಿ ಉಪಗ್ರಹ ಉಡಾವಣೆ ಮಾಡುವ ಈ ತಂತ್ರಜ್ಞಾನದ (ಎಸ್‌ಎಸ್‌ಎಲ್‌ವಿ) ಪರೀಕ್ಷೆಯನ್ನು ಇಸ್ರೊ 2019 ರಲ್ಲಿ  ನಡೆಸಲಿದೆ.

ಇಸ್ರೊ ಅಧ್ಯಕ್ಷ ಕೆ.ಶಿವನ್‌ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಇದರ ಮೊದಲ ಹಾರಾಟ ಮುಂದಿನ ವರ್ಷ ಮೇ ಅಥವಾ ಜೂನ್‌ನಲ್ಲಿ ನಡೆಯಲಿದೆ. ಇದರ ನಿರ್ಮಾಣ ಮತ್ತು ಉಡಾವಣಾ ವೆಚ್ಚ ಅತ್ಯಂತ ಕಡಿಮೆ. ಈಗ ಬಳಸುತ್ತಿರುವ ಜಿಎಸ್‌ಎಲ್‌ವಿಯಂತಹ ನೌಕೆಗಳಿಗಿಂತ ಹತ್ತನೇ ಒಂದರಷ್ಟು ಮೊತ್ತದಲ್ಲಿ ನಿರ್ಮಿಸಬಹುದು  ಎಂದು ಅವರು ತಿಳಿಸಿದರು.

ಇದರ ಒಟ್ಟು ತೂಕ 500– 600 ಕೆ.ಜಿಗಳು. ಭೂ ಕಕ್ಷೆಯ ಒಳ ಆವರಣಕ್ಕೆ ಉಡಾವಣೆ ಮಾಡಿ ಉಪಗ್ರಹಗಳನ್ನು ನೆಲೆಗೊಳಿಸಬಹುದು. ಇದು ಹೊಸ ತಲೆಮಾರಿನ ಉಡಾವಣಾ ವಾಹನವಾಗಲಿದ್ದು, ಇದರ ವಿನ್ಯಾಸ ನಡೆಯುತ್ತಿದೆ ಎಂದರು.

ತಿಂಗಳಿಗೆರಡು ಉಡಾವಣೆ: ಇಸ್ರೊ 2019 ರ ಜನವರಿಯಿಂದ ತಿಂಗಳಿಗೆ ಎರಡು ಬಾಹ್ಯಾಕಾಶ ನೌಕೆಗಳ ಉಡಾವಣೆ ಮಾಡಲಿದೆ. ಈ ವರ್ಷದ ಡಿಸೆಂಬರ್‌ವರೆಗೆ 9, 2019 ರಲ್ಲಿ 22 ಮತ್ತು 2020 ರಲ್ಲಿ 19 ಸೇರಿ ಒಟ್ಟು 50 ಉಡಾವಣೆಗಳು ನಡೆಯಲಿವೆ ಎಂದು ಶಿವನ್‌ ತಿಳಿಸಿದರು.

 ವಿವಿಧ ಉದ್ದೇಶಗಳಿಗಾಗಿ ಉಡಾವಣೆ ಮಾಡಲು ಒಟ್ಟು 50 ಉಪಗ್ರಹಗಳನ್ನು ಸಿದ್ಧಪಡಿಸಿಟ್ಟಕೊಳ್ಳಲಾಗಿದೆ. ಕಕ್ಷೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಉಪಗ್ರಹಗಳ ಕಾರ್ಯಾಚರಣೆ ಅವಧಿಯು ಮುಗಿದಿದ್ದು, ಅವುಗಳನ್ನು ಬದಲಿಸಲು ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಬೇಕಾಗಿದೆ. ಕಾರ್ಟೋಸ್ಯಾಟ್‌ ಮತ್ತು ಭೂವೀಕ್ಷಣಾ ಸರಣಿಯ ಉಪಗ್ರಹಗಳು ಇದರಲ್ಲಿ ಪ್ರಮುಖವಾದವು ಎಂದು ಶಿವನ್‌ ತಿಳಿಸಿದರು.

ವಿದ್ಯಾರ್ಥಿಗಳಿಗೆ ತರಬೇತಿ
ಬಾಹ್ಯಾಕಾಶ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ, ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ವಿವಿಧ ರಾಜ್ಯಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ 25 ರಿಂದ 30 ದಿನ ತರಬೇತಿ ನೀಡಲಾಗುವುದು. ಮುಖ್ಯವಾಗಿ ಉಪಗ್ರಹ ನಿರ್ಮಾಣವನ್ನು ಹೇಳಿಕೊಡಲಾಗುವುದು. ಆ ವಿದ್ಯಾರ್ಥಿಗಳಿಗೆ ಇಸ್ರೊದ ಎಲ್ಲ ಪ್ರಯೋಗಾಲಯಗಳನ್ನೂ ಪರಿಚಯಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯ ಮೇರೆಗೆ ಈ ಕಾರ್ಯಕ್ರಮಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಇನ್‌ಕ್ಯುಬೇಷನ್‌ ಕೇಂದ್ರಗಳು: ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಬಗ್ಗೆ ಇಸ್ರೊದಿಂದ ಹೊರಗಿದ್ದು ಕೆಲಸ ಮಾಡಲು ಬಯಸುವವರಿಗೆ ದೇಶದ 6 ಕಡೆಗಳಲ್ಲಿ ನವೋದ್ಯಮ ಆರಂಭಿಸಲು ಇನ್‌ಕ್ಯುಬೇಷನ್‌ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ದೇಶದ ಪ್ರತಿಭಾವಂತರು ಬಾಹ್ಯಾಕಾಶ ವಿಜ್ಞಾನದಲ್ಲಿ ತೊಡಗಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಉಪಗ್ರಹ ನಿರ್ಮಾಣದಿಂದ ಮೊದಲ್ಗೊಂಡು ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಲು ಅವಕಾಶ ಇದೆ ಎಂದರು.

ಉಡಾವಣೆ ವೀಕ್ಷಣೆಗೆ ಅವಕಾಶ: ಶ್ರೀಹರಿಕೋಟದಲ್ಲಿ ಉಪಗ್ರಹ ಉಡಾವಣೆಯನ್ನು ಹತ್ತಿರದಿಂದಲೇ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಉಡಾವಣೆ ನಡೆಯುವ ದಿನಗಳಲ್ಲಿ ಉಡ್ಡಯನ ಕೇಂದ್ರಕ್ಕೆ ಬಂದು ಅಲ್ಲಿನ ವ್ಯವಸ್ಥೆಯನ್ನು ನೋಡಬಹುದು. ಅಲ್ಲದೆ, ಬಾಹ್ಯಾಕಾಶ ಗ್ಯಾಲರಿ, ಮ್ಯೂಸಿಯಂ ವೀಕ್ಷಣೆಗೂ ಅವಕಾಶವಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳೂ ಅವಕಾಶ ಇದೆ. ನಾಸಾದಲ್ಲಿಯೂ ಇದೇ ರೀತಿ ಸಾರ್ವಜನಿಕ ವಿಕ್ಷಣೆಗೆ ಅವಕಾಶವಿದೆ ಎಂದು ಶಿವನ್‌ ತಿಳಿಸಿದರು.

ಅಂತರ ಗ್ರಹ ಯಾನಕ್ಕೆ ಮುಹೂರ್ತ ನಿಗದಿ!

ಸೂರ್ಯ ಮತ್ತು ಚಂದ್ರ ಭಾರತೀಯರ ಪರಂಪರೆ ಜತೆಗೆ ಹಾಸು ಹೊಕ್ಕಾಗಿದೆ. ಪುರಾಣ, ಕಲೆ, ಕಾವ್ಯ ಮತ್ತು ತತ್ವಶಾಸ್ತ್ರಗಳಲ್ಲೂ ಗಾಢವಾದ ಅನುಬಂಧ ಹೊಂದಿವೆ. ಬಾಹ್ಯಾಕಾಶ ವಿಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಭಾರತ ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಅಂತರ ಗ್ರಹಯಾನ ಕ್ಷೇತ್ರದಲ್ಲಿ ಪೈಪೋಟಿಗೆ ಇಳಿದಿದೆ. 2019 ರಲ್ಲಿ ಚಂದ್ರ (ಉಪಗ್ರಹ) ಮತ್ತು ಸೂರ್ಯನ(ನಕ್ಷತ್ರ) ಬಳಿ ಬಾಹ್ಯಾಕಾಶ ನೌಕೆ ಕಳುಹಿಸಲಿದೆ.

ಜನವರಿ 3 ಕ್ಕೆ ‘ಚಂದ್ರಯಾನ–2’ ಮತ್ತು ಡಿಸೆಂಬರ್‌ನಲ್ಲಿ ‘ಆದಿತ್ಯ–1’ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವುದಾಗಿ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಭಾನುವಾರ ಪ್ರಕಟಿಸಿದರು. 

ಚಂದ್ರಯಾನ–2

* ಇದೇ ಆಗಸ್ಟ್‌ನಲ್ಲಿ ಉಡಾವಣೆ ಆಗಬೇಕಿತ್ತು ಆದರೆ, ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಇಳಿಸುವಾಗ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳು ಮತ್ತು ಇಂಧನ ಕ್ಷಮತೆಯ ಬಗ್ಗೆ ಕೆಲವು ಸಮಸ್ಯೆಗಳಿದ್ದವು.  ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ. 

* ಇದಕ್ಕಾಗಿ ಲ್ಯಾಂಡಿಂಗ್‌ಗೆ ಸಂಬಂಧಿಸಿದ ಸಂಪೂರ್ಣ ಯೋಜನೆಯನ್ನೇ ಹೊಸದಾಗಿ ರೂಪಿಸಲಾಗಿದೆ. ಇದಕ್ಕಾಗಿ ಲ್ಯಾಂಡರ್‌ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

* ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿ 30– 35 ದಿನಗಳಲ್ಲಿ ಚಂದ್ರನ ಕಕ್ಷೆಗೆ ತಲುಪುತ್ತದೆ.

* ಬಾಹ್ಯಾಕಾಶ ನೌಕೆ ಕಕ್ಷೆಗಾಮಿ(ಆರ್ಬಿಟರ್‌), ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಒಯ್ಯಲಿದೆ.

* ಚಂದ್ರನ ಕಕ್ಷೆಗೆ ತಲುಪಿದ ಬಳಿಕ ನೌಕೆಯಿಂದ ರೋವರ್‌ ಅನ್ನು ಹೊತ್ತ ಲ್ಯಾಂಡರ್‌ ಪ್ರತ್ಯೇಕಗೊಂಡು, ಮೊದಲೇ ಗೊತ್ತು ಮಾಡಿದ ಸ್ಥಳದಲ್ಲಿ ನೆಲ ಸ್ಪರ್ಶ ಮಾಡಲಿದೆ.

* ಆರು ಗಾಲಿಗಳ ರೋವರ್‌ ಚಲಿಸಿ ಚಂದ್ರನ ಮೇಲ್ಮೈನ ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತದೆ. ಇದು ಅರೆ ಸ್ವಯಂ ಚಾಲಿತ. ಅಲ್ಲದೆ, ಭೂಮಿಯಿಂದಲೇ ಕಮಾಂಡ್‌ ನೀಡಿ ನಿಯಂತ್ರಿಸಲಾಗುತ್ತದೆ. 

* 3290 ಕೆ.ಜಿ ತೂಕದ ನೌಕೆ ರೋವರ್‌ ಇಳಿಸುವುದಕ್ಕೆ ಮೊದಲು ಚಂದ್ರನಿಗೆ ಏಳು ದಿನಗಳ ಕಾಲ ಸುತ್ತು ಹಾಕುತ್ತದೆ. ಅಲ್ಲಿನ ವಾತಾವರಣದ ಬಗ್ಗೆ ದೂರಸಂವೇದಿ ಸೆನ್ಸರ್‌ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತದೆ. ಮೇಲ್ಮೈ ಸ್ಥಳ ವಿವರಣೆ, ಖನಿಜ, ನೀರಿನ ಕುರುಹುಗಳು ಮತ್ತು ಬಾಹ್ಯಗೋಳದ ಬಗ್ಗೆ ಅಧ್ಯಯನ.

ಆದಿತ್ಯ–1

* ನೌಕೆ ಸೂರ್ಯನ ಹೊರ ಪದರದಲ್ಲಿ ನೆಲೆ ನಿಂತು ಅಧ್ಯಯನ ನಡೆಸುತ್ತದೆ. ವಿಶೇಷವಾಗಿ ಸೂರ್ಯ ಮಂಡಲ ವೀಕ್ಷಿಸಿ, ಅದರ ಒಡಲಲ್ಲಿ ಏನೇನು ಸಂಭವಿಸುತ್ತದೆ, ಸೌರ ಮಾರುತ ಮತ್ತು ಅದರಿಂದ ಭೂಮಿಯ ಮೇಲೆ ಆಗುವ ಪರಿಣಾಮಗಳ ಅಧ್ಯಯನ. ಅಲ್ಟ್ರಾವಯೊಲೆಟ್‌ ಇಮೇಜರ್‌ನಿಂದ ಇವೆಲ್ಲ ವಿದ್ಯಮಾನಗಳನ್ನು ಗ್ರಹಿಸಬಹುದು.

* ಐದು ಪೇಲೋಡ್‌ಗಳು ಎಂದರೆ, ಅಧ್ಯಯನದ ಸಾಧನಗಳನ್ನು ಒಯ್ಯಲಿದೆ.

* ಸೂರ್ಯ ಭೂಮಿಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದೇ ಅಧ್ಯಯನದ ಮುಖ್ಯ ಉದ್ದೇಶ.

 * ಈವರೆಗೆ ಈ ಸಾಹಸಕ್ಕೆ ಕೈ ಹಾಕಿರುವ ಏಜೆನ್ಸಿಗಳೆಂದರೆ ‘ಯುರೋಪ್ ಸ್ಪೇಸ್ ಏಜೆನ್ಸಿ’ ಮತ್ತು ಅಮೆರಿಕದ ‘ನಾಸಾ’. ಭಾರತ  ‘ಸೂರ್ಯ ಕೂಟ’ಕ್ಕೆ ಹೊಸ ಸದಸ್ಯ ರಾಷ್ಟ್ರವಾಗಿ ಸೇರಲಿದೆ.

ಬರಹ ಇಷ್ಟವಾಯಿತೆ?

  • 34

    Happy
  • 1

    Amused
  • 0

    Sad
  • 1

    Frustrated
  • 2

    Angry

Comments:

0 comments

Write the first review for this !