ಬುಧವಾರ, ಅಕ್ಟೋಬರ್ 21, 2020
21 °C
ಪರಿಷತ್‌ ಚುನಾವಣೆ ಮತಯಾಚನೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ

ಶಿಕ್ಷಣ ರಂಗದಲ್ಲಿ ಬದಲಾವಣೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಇದರಿಂದಾಗಿ ರಾಜ್ಯವು ಈಗ ಶಿಕ್ಷಣ ರಂಗದಲ್ಲಿ ದೇಶದಲ್ಲಿ ಮುಂಚೂಣಿ ಸ್ಥಾನದತ್ತ ಸಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಶನಿವಾರ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಯಾರೂ ಊಹಿಸಲಾರದಂತಹ ಬದಲಾವಣೆಗಳು ಆಗುತ್ತಿವೆ. ಸುಧಾರಣೆಗಳು ಬಾಯಿ ಮಾತಿನಿಂದ ಆಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿ ಮತ್ತು ಒಳ್ಳೆಯ ಯೋಚನೆಗಳಿಂದ ಆಗುತ್ತವೆ. ಅದು ಬಿಜೆಪಿ ಸರ್ಕಾರದಲ್ಲಿ ಸಾಧ್ಯವಾಗಿದೆ’ ಎಂದರು.

ಶಿಕ್ಷಕರು ಮತ್ತು ಉಪನ್ಯಾಸಕರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲಾಗಿದೆ. ಅದಕ್ಕೆ ಪೂರಕವಾಗಿ ವರ್ಗಾವಣೆ ನೀತಿ ರೂಪಿಸಲಾಗಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ನೇಮಕಾತಿ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಡತಗಳು 24 ಗಂಟೆಗಳೊಳಗೆ ವಿಲೇವಾರಿಯಾಗುವ ವ್ಯವಸ್ಥೆ ಬಂದಿದೆ ಎಂದು ಹೇಳಿದರು.

‘ಪುಟ್ಟಣ್ಣ ಅವರು ಶಿಕ್ಷಕರ ಸಮಸ್ಯೆಗಳು ಮತ್ತು ಶಿಕ್ಷಣ ಕ್ಷೇತ್ರದ ಕುರಿತು ಆಳವಾದ ಜ್ಞಾನ ಹೊಂದಿರುವ ಉತ್ತಮ ಅಭ್ಯರ್ಥಿ. ಅನೇಕ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಶಿಕ್ಷಕರ ಗಟ್ಟಿ ಧ್ವನಿಯಾಗಿ ಇದ್ದಾರೆ. ತಮ್ಮನ್ನು ಯಾರು ಪ್ರತಿನಿಧಿಸಬೇಕು ಎಂಬ ಅರಿವು ಶಿಕ್ಷಕರಿಗೆ ಇದೆ. ಶಿಕ್ಷಕರಿಗೆ ಬಲ ತುಂಬುವುದಕ್ಕಾಗಿಯೇ ಪುಟ್ಟಣ್ಣ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಸಚಿವ ಕೆ. ಗೋಪಾಲಯ್ಯ, ಅಭ್ಯರ್ಥಿ ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬೆಂಗಳೂರು ಉತ್ತರ ಭಾಗದ ಬಿಜೆಪಿ ಘಟಕದ ಉಪಾಧ್ಯಕ್ಷ ಎನ್.ಜಯರಾಮ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.