ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಟಿ ಆಯುಕ್ತರ ವಿರುದ್ಧ ಚಾರ್ಜ್‌ಶೀಟ್

ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಕಡಿತ ಮಾಡಿದ ಆರೋಪ l ವಿಶೇಷ ಆಯುಕ್ತರಿಂದ ಪ್ರಕರಣದ ಮಧ್ಯಂತರ ವರದಿ
Last Updated 8 ನವೆಂಬರ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂಟು ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಕಡಿತ ಮಾಡಿದ ಆರೋಪದಲ್ಲಿ ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

‍ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ‘ತೆರಿಗೆ ಕಡಿತ ಮಾಡಿರುವ ಬಗ್ಗೆ ವಿಶೇಷ ಆಯುಕ್ತರು ಮಧ್ಯಂತರ ವರದಿ ಕೊಟ್ಟಿದ್ದಾರೆ. ಪಾಲಿಕೆ ವರಮಾನಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಲು ನಾವು ಹಿಂದೇಟು ಹಾಕುವುದಿಲ್ಲ’ ಎಂದರು.

‘ರವೀಂದ್ರ ಮೂಲತಃ ಸಹಕಾರ ಇಲಾಖೆಯವರು. ಅವರನ್ನು ಕೂಡಲೇ ವಾಪಸ್ ಕಳುಹಿಸುತ್ತೇನೆ. ಆರೋಪಪಟ್ಟಿ ಜತೆಗೆ ಆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇನೆ. ಇದರಲ್ಲಿ ಭಾಗಿಯಾಗಿರುವ ಇತರ ಅಧಿಕಾರಿಗಳ ವಿರುದ್ಧವೂ ಕಾನೂನುಕ್ರಮ ಜರುಗಿಸುತ್ತೇನೆ’ ಎಂದು ತಿಳಿಸಿದರು.

‘ತೆರಿಗೆ ಕಡಿತ ಮಾಡಿರುವುದು ಪತ್ತೆಯಾಗಿರುವ 8 ಪ್ರಕರಣಗಳಲ್ಲದೇ, 109 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಲಾಗಿದೆ. ಎಲ್ಲಾ ಪ್ರಕರಣಗಳ ಬಗ್ಗೆಯೂ ಕೂಲಂಕಷ ತನಿಖೆ ನಡೆಸಲು ತಂಡ ರಚನೆ ಮಾಡಲಾಗಿದೆ. ತೆರಿಗೆ ಕಡಿತ ಮಾಡಿರುವುದು ಕಂಡುಬಂದರೆ ಅಂತವರ ವಿರುದ್ಧವೂ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ’ ಎಂದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಪದ್ಮನಾಭ ರೆಡ್ಡಿ, ಉಮೇಶ್‌ ಶೆಟ್ಟಿ, ‘ತೆರಿಗೆ ಕಡಿತ ಮಾಡುವ ಮೂಲಕ ಪಾಲಿಕೆಗೆ ಅಧಿಕಾರಿಗಳು ನಷ್ಟ ಉಂಟು ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಈ ರೀತಿಯ ಪ್ರಕರಣಗಳು ಮರುಕಳಿಸುತ್ತವೆ. ತಪ್ಪು ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಆಗ್ರಹಿಸಿದರು.

‘ಕಾನೂನು ಬಾಹಿರವಾಗಿ ಶೇ 80 ರಷ್ಟು ತೆರಿಗೆ ಕಡಿತ ಮಾಡಲಾಗಿದೆ. ಇಂತಹ ಅಧಿಕಾರಿಗಳನ್ನು ಸುಮ್ಮನೆ ಬಿಟ್ಟರೆ ಪಾಲಿಕೆಗೆ ಕೆಟ್ಟ ಹೆಸರು ಬರಲಿದೆ. ಅದಕ್ಕೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದ್ದರೆ ಇವರಿಗೆ ಶಿಕ್ಷೆ ಆಗಲೇಬೇಕು’ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ ಒತ್ತಾಯಿಸಿದರು.

ನಿಯಮ ತಿದ್ದುಪಡಿಗೆ ಸಮಿತಿ
ಸ್ವಯಂಘೋಷಿತ ಆಸ್ತಿ ತೆರಿಗೆ(ಎಸ್‌ಎಎಸ್‌) ಪದ್ಧತಿಯನ್ನು ಮತ್ತಷ್ಟು ಬಲಪಡಿಸಲು ಈಗಿರುವ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅನಿಲ್‌ಕುಮಾರ್ ಅಭಿಪ್ರಾಯಪಟ್ಟರು.

‘2008ರಲ್ಲಿ ಈ ಪದ್ಧತಿಯನ್ನು ಮೊದಲ ಬಾರಿಗೆ ಜಾರಿಗೆ ತರಲಾಯಿತು. ಆಸ್ತಿ ಎಷ್ಟಿದೆ ಎಂಬುದನ್ನು ಮಾಲೀಕರು ಮಾಡಿಕೊಳ್ಳುವ ಘೋಷಣೆಯನ್ನು ಪಾಲಿಕೆ ಒಪ್ಪುತ್ತಿದೆ. ಅನುಮಾನ ಎನಿಸಿದರೆ ಪರಿಶೀಲನೆ ಮಾಡಲು ಅವಕಾಶ ಇತ್ತು. ಆದರೆ, ಎಷ್ಟು ಪ್ರಮಾಣದಲ್ಲಿ ಪರಿಶೀಲನೆ ಮಾಡಬೇಕು ಎಂಬುದು ನಿಗದಿಯಾಗಿಲ್ಲ. ಹೀಗಾಗಿ, ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಪಾಲಿಕೆಗೆ ತೆರಿಗೆ ವಂಚಿಸುತ್ತಿದ್ದಾರೆ’ ಎಂದರು.

‘ನಿಯಮಾವಳಿ ರೂಪಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನುಒಳಗೊಂಡ ಸಮಿತಿ ರಚನೆ ಮಾಡುವ ಅಗತ್ಯವಿದೆ’ ಎಂದೂ ಅವರು ಹೇಳಿದರು.

‘ಆದಾಯ ತೆರಿಗೆ ಇಲಾಖೆ ರೀತಿಯಲ್ಲಿ ಶೋಧ ನಡೆಸಿ ಆಸ್ತಿ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಲು ಅವಕಾಶ ಇರಬೇಕು. ತಪ್ಪು ಎನಿಸಿದರೆ ಮೇಲ್ಮನವಿ ಸಲ್ಲಿಸಲು ಅವಕಾಶವೂ ಇರಬೇಕು’ ಎಂದರು.

ವಿ. ಅನ್ಬುಕುಮಾರ್ ವಿರುದ್ಧ ಸದಸ್ಯರ ಆಕ್ರೋಶ
ವಿಶೇಷ ಆಯುಕ್ತ (ಆಡಳಿತ) ವಿ. ಅನ್ಬುಕುಮಾರ್ ಅವರನ್ನು ಪಾಲಿಕೆಯಿಂದ ವರ್ಗಾವಣೆ ಮಾಡಬೇಕು ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು.

‘ಪಶ್ಚಿಮ ಮತ್ತು ದಾಸರಹಳ್ಳಿ ವಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಇವರು, ಪಾಲಿಕೆ ಸದಸ್ಯರಿಗೆ ಗೌರವವನ್ನೇ ನೀಡುವುದಿಲ್ಲ. ಸಾರ್ವಜನಿಕರ ಕೆಲಸ ತ್ವರಿತವಾಗಿ ಆಗಬೇಕು ಎಂಬ ಕಾರಣಕ್ಕೆ ಕಡತಗಳನ್ನು ಹಿಡಿದು ಕಚೇರಿ ಸುತ್ತುತ್ತೇವೆ. ಆದರೆ, ಅನ್ಬುಕುಮಾರ್ ನಮ್ಮನ್ನು ಕೇವಲವಾಗಿ ನೋಡುತ್ತಾರೆ’ ಎಂದು ಸದಸ್ಯ ಉಮೇಶ್‌ಶೆಟ್ಟಿ ಆರೋಪಿಸಿದರು.

‘ಮೇಯರ್ ಎಂ.ಗೌತಮ್‌ಕುಮಾರ್, ವಸತಿ ಸಚಿವ ವಿ. ಸೋಮಣ್ಣ ಸೂಚನೆಗೂ ಬೆಲೆ ನೀಡದೆ ಅನ್ಬುಕುಮಾರ್ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ’ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಶಾಂತಕುಮಾರಿ, ‘ಅನ್ಬುಕುಮಾರ್ ರಜೆಯಲ್ಲಿದ್ದ 15 ದಿನಗಳ ಕಾಲ ಚುರುಕಾಗಿ ಕೆಲಸ ನಡೆದಿತ್ತು. ಅವರು ಕಚೇರಿಯಲ್ಲಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಅವರನ್ನು ಪಾಲಿಕೆಯಿಂದ ಬಿಡುಗಡೆ ಮಾಡಿ’ ಎಂದು ಆಗ್ರಹಿಸಿದರು.

‘ಅವರನ್ನು ಯಾವುದೇ ವಲಯಕ್ಕೂ ವರ್ಗಾವಣೆ ಮಾಡುವುದು ಬೇಡ. ಪಾಲಿಕೆಯಿಂದಲೇ ವರ್ಗಾವಣೆ ಮಾಡಬೇಕು’ ಎಂದು ಬಹುತೇಕ ಸದಸ್ಯರು ಮನವಿ ಮಾಡಿದರು. ‘ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಗೌತಮ್‌ ಕುಮಾರ್ ಭರವಸೆ ನೀಡಿದರು.

ಆಯುಕ್ತರ ಶಹಬ್ಬಾಶ್‌ ಗಿರಿ: ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಆಯುಕ್ತ ಅನಿಲ್‌ಕುಮಾರ್‌, ‘ಅನ್ಬುಕುಮಾರ್ ಅವರನ್ನು ನಾನು ಹೊಸದಾಗಿ ನೋಡುತ್ತಿಲ್ಲ. ಅವರೊಬ್ಬ ದಕ್ಷ ಅಧಿಕಾರಿ. ಅವರನ್ನು ಪಾಲಿಕೆಯಿಂದ ವರ್ಗಾವಣೆ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಆಡಳಿತ ಬಿಗಿಗೊಳಿಸಲು ಅವರು ಸ್ವಲ್ಪ ಒರಟಾಗಿ ನಡೆದುಕೊಂಡಿರಬಹುದು. ಪಾಲಿಕೆ ಸದಸ್ಯರು ಎಂಬುದು ಗೊತ್ತಿಲ್ಲದೆಯೂ ಹೀಗೆ ಆಗಿರಬಹುದು. ಮೇಯರ್‌ ಹಾಗೂ ಸದಸ್ಯರಿಗೆ ಮನವರಿಕೆ ಮಾಡಿಸಿ ಅನ್ಬುಕುಮಾರ್ ಅವರನ್ನು ಪಾಲಿಕೆಯಲ್ಲೇ ಉಳಿಸಿಕೊಳ್ಳುತ್ತೇನೆ’ ಎಂದರು.

ರಸ್ತೆಗೆ ಟಿಪ್ಪು ಹೆಸರು: ಪ್ರಸ್ತಾವ ಕೈಬಿಟ್ಟ ಪಾಲಿಕೆ
ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಮೈಸೂರು ರಸ್ತೆ ಸಂಪರ್ಕ ಕಲ್ಪಿಸುವ ಟಿಪ್ಪು ಸುಲ್ತಾನ್‌ ಅರಮನೆ ರಸ್ತೆ ಎಂಬ ನಾಮಕರಣ ಮಾಡುವ ಪ್ರಸ್ತಾವನೆಯನ್ನು ಪಾಲಿಕೆ ಕೈಬಿಟ್ಟಿದೆ.

ಆಲೂರು ವೆಂಕಟರಾಯ ರಸ್ತೆ ಎಂಬ ಹೆಸರನ್ನೇ ಮುಂದುವರಿಸುವ ನಿರ್ಧಾರಕ್ಕೆ ಮೇಯರ್ ಒಪ್ಪಿಗೆ ನೀಡಿದರು.

ಟಿಪ್ಪು ಸುಲ್ತಾನ್ ಹೆಸರಿಡಲು 2019ರ ಜನವರಿ 30ರಂದು ಸಲ್ಲಿಸಿದ್ದ ಪ್ರಸ್ತಾವನೆಗೆ, ‘ಈ ವಿಷಯವನ್ನು ಮರು ಪರಿಶೀಲನೆ ನಡೆಸಿ ಸ್ಪಷ್ಟ ನಿರ್ಧಾರೊಂದಿಗೆ ವಿಷಯ ಮಂಡಿಸಿ’ ಎಂದು ಸರ್ಕಾರ ಸೂಚಿಸಿತ್ತು.

ವಾರ್ಡ್ ಸಂಖ್ಯೆ 109ರಲ್ಲಿನ ಜುಮ್ಮಾ ಮಸೀದಿ ರಸ್ತೆಗೆ ‘ದೇವರದಾಸಿಮಯ್ಯ ರಸ್ತೆ’ ಎಂಬ ಹೆಸರು ಮರುನಾಮಕರಣ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಎರಡು ವಿಷಯಗಳು ಪ್ರಸ್ತಾಪವಾದಾಗ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮತ್ತು ಸದಸ್ಯ ರಿಜ್ವಾನ್ ಆಕ್ರೋಶ ವ್ಯಕ್ತಪಡಿಸಿದರು.

10ರೊಳಗೆ ಗುಂಡಿ ಮುಚ್ಚಲು ಕ್ರಮ
ನವೆಂಬರ್ 10ರೊಳಗೆ ನಗರದ ಬಹುತೇಕ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು ಎಂದು ಆಯುಕ್ತ ಅನಿಲ್‌ಕುಮಾರ್ ತಿಳಿಸಿದರು.

‘ಹಗಲು ರಾತ್ರಿ ಎನ್ನದೇ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸೋಮಾರಿತನ ಮಾಡಿದ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತಿದೆ. ಶಾಸಕರೊಬ್ಬರು ಕರೆ ಮಾಡಿ ಅಮಾನತು ಮಾಡದಂತೆ ಹೇಳಿದರು. ಆದರೆ, ವಾಸ್ತವಾಂಶವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮಾರ್ಷಲ್‌ಗಳ ಸೇವೆ ಅಗತ್ಯವಿಲ್ಲ’
‘ಹೊಸದಾಗಿ ನೇಮಕಗೊಂಡಿರುವ ಮಾರ್ಷಲ್‌ಗಳು ಸದಸ್ಯರೊಂದಿಗೂ ಉಡಾಫೆಯಿಂದ ವರ್ತಿಸುತ್ತಿದ್ದು, ಅವರ ಸೇವೆ ಪಾಲಿಕೆಗೆ ಅಗತ್ಯವೇ ಇಲ್ಲ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಎಸ್‌.ಸತ್ಯನಾರಾಯಣ, ‘ಬ್ಲಾಕ್ ಸ್ಪಾಟ್‌ಗಳು ಮತ್ತು ರಾಜಕಾಲುವೆಯಲ್ಲಿ ಕಸ ಸುರಿಯುವುದನ್ನು ತಪ್ಪಿಸುವುದು ಅವರ ಕೆಲಸ. ಅದನ್ನು ಬಿಟ್ಟು ಸಣ್ಣಪುಟ್ಟ ಅಂಗಡಿಗಳ ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತಿಂಗಳಿಗೆ ₹25 ಸಾವಿರ ವೇತನ ನೀಡಿ ಅವರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ವಾರ್ಡ್‌ನಲ್ಲಿ ಸುತ್ತಾಡಿ ಕೆಲಸ ಮಾಡುವ ನಮಗೆ ಸರ್ಕಾರ ನೀಡುವ ಗೌರವಧನ ₹7,500 ಮಾತ್ರ. ಮಾಜಿ ಸೈನಿಕರನ್ನು ನೇಮಿಸಿಕೊಳ್ಳಬೇಕೆಂಬ ನಿಯಮವಿದ್ದರೂ ಎನ್‌ಸಿಸಿ ಕೆಡೆಟ್‌ಗಳು ಮತ್ತು ಹೋಮ್‌ಗಾರ್ಡ್‌ಗಳನ್ನು ನೇಮಿಸಿಕೊಳ್ಳಲಾಗಿದೆ‘ ಎಂದರು.

ಸದಸ್ಯರೆಲ್ಲರೂ ಎದ್ದುನಿಂತು, ‘ಮಾರ್ಷಲ್‌ಗಳು ಬೇಡ’ ಎಂದು ಕೂಗಿದರು. ಇದಕ್ಕೆ ಮಾಧ್ಯಮಗಳ ಜತೆ ಪ್ರತಿಕ್ರಿಯಿಸಿದ ಆಯುಕ್ತರು,‘ಕಸ ಸುರಿಯುವುದನ್ನು ತಪ್ಪಿಸಲು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ರಸ್ತೆ ಬದಿ ಕಸ ಸುರಿದರೆ ದಂಡ ವಿಧಿಸುವ ಅಧಿಕಾರವೂ ಅವರಿಗೆ ಇದೆ. ಅವರ ಕೆಲಸವನ್ನಷ್ಟೇ ಮಾಡುವಂತೆ ಸೂಚನೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT