ಹುತಾತ್ಮ ಐಪಿಎಸ್ ಅಧಿಕಾರಿಯ ತಮ್ಮನಿಗೆ ವಂಚನೆ

7
ಎಸ್‌ಡಿಎಂಎ ಕೊ–ಅಪರೇಟಿವ್ ಸೊಸೈಟಿ ಅಧ್ಯಕ್ಷ ಸೆರೆ l ₹ 27 ಲಕ್ಷ ಬ್ಯಾಂಕ್‌ನಲ್ಲಿ ಠೇವಣಿ

ಹುತಾತ್ಮ ಐಪಿಎಸ್ ಅಧಿಕಾರಿಯ ತಮ್ಮನಿಗೆ ವಂಚನೆ

Published:
Updated:

ಬೆಂಗಳೂರು: ನರಹಂತಕ ವೀರಪ್ಪನ್ ಕಾರ್ಯಾಚರಣೆಯಲ್ಲಿ ಹತರಾದ ಐಪಿಎಸ್ ಅಧಿಕಾರಿ ಟಿ.ಹರಿಕೃಷ್ಣನ್ ಅವರ ಸೋದರನಿಗೆ ₹ 27 ಲಕ್ಷ ವಂಚಿಸಿದ್ದ ಆರೋಪದ ಮೇಲೆ ರಾಜಾಜಿನಗರದ ಎಸ್‌ಡಿಎಂಎ ಕೊ–ಅಪರೇಟಿವ್ ಸೊಸೈಟಿ ಅಧ್ಯಕ್ಷ ರಾಜಕುಮಾರ್ ಅವರನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

‘ಠೇವಣಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ನನಗೆ ವಂಚಿಸಿದ್ದಾರೆ’ ಎಂದು ಆರೋಪಿಸಿ ನಂದಿನಿಲೇಔಟ್ ನಿವಾಸಿ ಟಿ.ಗೋಪಾಲಕೃಷ್ಣ ಅವರು ಇದೇ ಆ.14ರಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ದೂರು  ಕೊಟ್ಟಿದ್ದರು. ಆ ದೂರನ್ನು ಸುಬ್ರಹ್ಮಣ್ಯನಗರ ಠಾಣೆಗೆ ವರ್ಗಾಯಿಸಿದ್ದ ಕಮಿಷನರ್, ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದರು.

‘ಅಪರಾಧ ಸಂಚು (ಐಪಿಸಿ 120ಬಿ), ವಂಚನೆ (420), ನಕಲಿ ದಾಖಲೆ ಸೃಷ್ಟಿ (468) ಹಾಗೂ ಜೀವಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡು, ರಾಜಕುಮಾರ್ ಅವರನ್ನು ಬಂಧಿಸಿದ್ದೇವೆ. ಮತ್ತೊಬ್ಬ ಆರೋಪಿ ಕೊ–ಅಪರೇಟಿವ್ ಸೊಸೈಟಿಯ ನಿರ್ದೇಶಕಿ ಎಸ್.ಅಕ್ಷತಾ ಇನ್ನೂ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳಿದರು.

ದೂರಿನ ವಿವರ: ‘ನಾನು ಪಿಇಎಸ್ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ 18 ವರ್ಷ ಕೆಲಸ ಮಾಡಿದ್ದೆ. ನಿವೃತ್ತಿ ವೇತನ ಹಾಗೂ ವೈಯಕ್ತಿಕವಾಗಿ ಉಳಿಸಿದ್ದ ಹಣ ಸೇರಿ ನನ್ನ ಬಳಿ ₹ 27 ಲಕ್ಷವಿತ್ತು. ಆಗ ಪರಿಚಿತ ರಾಜ್‌ಕುಮಾರ್ ಹಾಗೂ ಅಕ್ಷತಾ ಅವರು, ‘ಹಣವನ್ನು ನಮ್ಮ ಸೊಸೈಟಿಯಲ್ಲೇ ಠೇವಣಿ ಇಡಿ. ಅದಕ್ಕೆ ಸೂಕ್ತ ಭದ್ರತೆ ಹಾಗೂ ಹೆಚ್ಚಿನ ಬಡ್ಡಿ ನೀಡುತ್ತೇವೆ’ ಎಂದರು. ಅವರ ಮಾತನ್ನು ನಂಬಿ, 2015ರಲ್ಲಿ ಎರಡು ಕಂತುಗಳಲ್ಲಿ ₹ 27 ಲಕ್ಷ ಠೇವಣಿ ಇಟ್ಟಿದ್ದೆ’ ಎಂದು ಗೋಪಾಲಕೃಷ್ಣ ದೂರಿನಲ್ಲಿ ಹೇಳಿದ್ದಾರೆ.

‘ಠೇವಣಿ ಇಟ್ಟಿದ್ದಕ್ಕೆ ಎಫ್‌ಡಿ ಕಾರ್ಡ್ ಹಾಗೂ ರಸೀದಿಗಳಿಗೆ ಸಹಿ ಹಾಗೂ ಸೊಸೈಟಿಯ ಮೊಹರನ್ನೂ ಹಾಕಿಕೊಟ್ಟಿದ್ದರು. ಠೇವಣಿ ಅವಧಿ 2021ರ ಸೆ.26ಕ್ಕೆ ಮುಗಿಯಲಿದ್ದು, ಆ ಹಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ನಾಮಿನಿ ಮಾಡಿದ್ದೇನೆ. ಒಂದು ವೇಳೆ ನಾನು ಮೃತಪಟ್ಟರೆ, ಠೇವಣಿ ಹಣ ಬಡ್ಡಿ ಸಮೇತ ಧರ್ಮಾಧಿಕಾರಿ ಅವರಿಗೆ ಸಲ್ಲಬೇಕು ಎಂದು ಉಯಿಲು ಸಹ ಮಾಡಿಸಿದ್ದೆ.’

‘ಎಫ್‌ಡಿ ಮುಗಿಯುವವರೆಗೆ ಪ್ರತಿ ತಿಂಗಳು ₹ 28,500 ಬಡ್ಡಿ ಕೊಡುವುದಾಗಿ ಹೇಳಿದ್ದ ರಾಜ್‌ಕುಮಾರ್ ಹಾಗೂ ಅಕ್ಷತಾ, ಆರಂಭದ ಕೆಲ ತಿಂಗಳು ಮಾತ್ರ ಚೆಕ್ ಮೂಲಕ ಬಡ್ಡಿ ಪಾವತಿಸಿದ್ದರು. ಆ ನಂತರ ಏಕಾಏಕಿ ಬಡ್ಡಿ ಕೊಡುವುದನ್ನು ನಿಲ್ಲಿಸಿದರು.’

‘ಇದನ್ನು ಪ್ರಶ್ನಿಸಲು ಸೊಸೈಟಿಗೆ ಹೋದಾಗ, ‘ಇನ್ನು ಮುಂದೆ ಬಡ್ಡಿ ಕೊಡುವುದಿಲ್ಲ. ಒಂಟಿಯಾಗಿರುವ ನೀವು, ಹಣ ತೆಗೆದುಕೊಂಡು ಏನು ಮಾಡುತ್ತೀರಿ. ನೀವಾಗೇ ಸತ್ತರೆ ಒಳ್ಳೆಯದು. ಇಲ್ಲದಿದ್ದರೆ ನಾವೇ ನಮ್ಮ ಕಡೆಯವರನ್ನು ಬಿಟ್ಟು ಸಾಯಿಸುತ್ತೇವೆ’ ಎಂದು ಬೆದರಿಕೆ ಹಾಕಿದರು. ಈಗ ಸೊಸೈಟಿ ಬಾಗಿಲು ಬಂದ್ ಆಗಿದೆ. ಹೀಗಾಗಿ, ರಾಜ್‌ಕುಮಾರ್ ಹಾಗೂ ಅಕ್ಷತಾ ಅವರನ್ನು ಪತ್ತೆ ಮಾಡಿ ನನ್ನ ಹಣ ವಾಪಸ್ ಕೊಡಿಸಿ’ ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

**

‘ಧರ್ಮಕ್ಕೇ ಬಳಸುತ್ತೇನೆ’

‘ನಾನು ಅವಿವಾಹಿತ. ಅಣ್ಣ ಹುತಾತ್ಮನಾದ ಬಳಿಕ ಪೂರ್ತಿ ಅನಾಥನಾದೆ. ಆರೋಗ್ಯ ಬೇರೆ ಸರಿಯಿಲ್ಲ. ಅಷ್ಟೊಂದು ಹಣ ಇಟ್ಟುಕೊಂಡು ನಾನೇನು ಮಾಡಲಿ. ಸೊಸೈಟಿಯಲ್ಲಿರುವ ನನ್ನ ಹಣದಲ್ಲೇ ಚಿಕಿತ್ಸೆ ಪಡೆಯುತ್ತೇನೆ. ಉಳಿದದ್ದನ್ನು ಧರ್ಮಸ್ಥಳದ ಧರ್ಮ ಕಾರ್ಯಗಳಿಗೇ ವಿನಿಯೋಗಿಸುತ್ತೇನೆ’ ಎಂದೂ ಅವರು ದೂರಿನಲ್ಲಿ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !