ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಉಡುಪಿಯಲ್ಲಿ ದಂಪತಿ ಬಂಧನ

₹ 34.50 ಲಕ್ಷ ನಗದು, 106 ಗ್ರಾಂ ಚಿನ್ನಾಭರಣ ಜಪ್ತಿ
Last Updated 24 ನವೆಂಬರ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಹಾಗೂ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಆರೋಪದಡಿ ದಂಪತಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಧನುಷ್ಯಾ ಅಲಿಯಾಸ್ ರಾಚೆಲ್ ಹಾಗೂ ಅವರ ಪತಿ ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಬಂಧಿತರು. ದೇವನಹಳ್ಳಿ ಹಾಗೂ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ನಿವಾಸಿಗಳನ್ನು ವಂಚಿಸಿ ಪರಾರಿಯಾಗಿದ್ದ ಈ ದಂಪತಿಯನ್ನು ಉಡುಪಿಯಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದ ದಂಪತಿ, ಪದೇ ಪದೇ ಊರು ಬದಲಾಯಿಸುತ್ತಿದ್ದರು. ವಾಸವಿದ್ದ ಸ್ಥಳಗಳಲ್ಲಿ ಜನರನ್ನು ಪರಿಚಯ ಮಾಡಿಕೊಂಡು ವಂಚಿಸಿ ಪರಾರಿಯಾಗುತ್ತಿದ್ದರು. ಇವರಿಂದ ಸದ್ಯ ₹ 34.50 ಲಕ್ಷ ನಗದು ಹಾಗೂ 106 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಅಕಾಡೆಮಿ ಸೇರಿ ₹ 68 ಲಕ್ಷ ವಂಚನೆ: ‘ದೂರುದಾರರಾದ ಸ್ನೇಹಾ ಭಗವತ್, ಇಂದಿರಾನಗರದಲ್ಲಿ ನೈಲ್‌ಬಾಕ್ಸ್ ಅಕಾಡೆಮಿ ನಡೆಸುತ್ತಿದ್ದಾರೆ. ಅಕಾಡೆಮಿಗೆ ಪ್ರವೇಶ ಪಡೆದಿದ್ದ ಧನುಷ್ಯಾ, ತನ್ನ ಪತಿ ದರ್ಬಿನ್ ದಾಸ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡಿದ್ದಳು. ಜಪ್ತಿ ಮಾಡಿರುವ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮಾತು ನಂಬಿದ್ದ ಸ್ನೇಹಾ, ಹಂತ ಹಂತವಾಗಿ ₹ 68 ಲಕ್ಷ ನೀಡಿದ್ದರು. ಹಣ ಪಡೆದಿದ್ದ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಸ್ನೇಹಾ ನೀಡಿದ್ದ ದೂರಿನಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದರು.

ಉದ್ಯೋಗ ಆಮಿಷ: ‘ದೇವನಹಳ್ಳಿಯ ಶಾಲೆಯೊಂದರ ಶಿಕ್ಷಕಿ ಶ್ವೇತಾ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ₹ 96,750 ಪಡೆದಿದ್ದರು. ನಂತರ, ಉದ್ಯೋಗ ಕೊಡಿಸದೇ ಪರಾರಿಯಾಗಿದ್ದರು. ಈ ಬಗ್ಗೆ ಶಿಕ್ಷಕಿ ಶ್ವೇತಾ, ದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕಡಿಮೆ ಬೆಲೆಗೆ ಐ–ಫೋನ್‌, ಲ್ಯಾಪ್‌ಟಾಪ್‌ ಮಾರುವುದಾಗಿಯೂ ಆರೋಪಿಗಳು ಹೇಳುತ್ತಿದ್ದರು. ಅಕಾಡೆಮಿ ಕೆಲಸಗಾರರು, ಶಾಲಾ ಶಿಕ್ಷಕರು, ಮಕ್ಕಳ ಪೋಷಕರು, ನೆರೆ ಮನೆಗಳ ನಿವಾಸಿಗಳು ಸೇರಿ ಹಲವರನ್ನು ಆರೋಪಿಗಳು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT