ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅತಿ ದಟ್ಟಣೆ ಕಾರಿಡಾರ್‌–ಕೊನೆಗೂ ಮರುಟೆಂಡರ್‌

₹1,120 ಕೋಟಿ ವೆಚ್ಚದ ಯೋಜನೆ –ಟೆಂಡರ್‌ ಪಕ್ರಿಯೆ ನ್ಯೂನತೆಗಳ ವಿವರ ಕೇಳಿದ ಸಿ.ಎಂ
Last Updated 13 ಡಿಸೆಂಬರ್ 2021, 3:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 12 ಅತಿ ದಟ್ಟಣೆಯ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ₹1,120.48 ಕೋಟಿ ವೆಚ್ಚದ ಯೋಜನೆಯ ಟೆಂಡರ್‌ನ ನ್ಯೂನತೆಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಇದಕ್ಕೆ ಮರು ಟೆಂಡರ್‌ ಕರೆದು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಈ ಯೋಜನೆಯ ಅನೇಕ ಲೋಪಗಳ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿಗಳ ಮೂಲಕ ಬೆಳಕು ಚೆಲ್ಲಿತ್ತು. ನಾಲ್ಕು ಪ್ಯಾಕೇಜ್‌ಗಳನ್ನು ಒಳಗೊಂಡ ಈ ಯೋಜನೆಯ ಏಳು ಗಹನವಾದ ನ್ಯೂನತೆಗಳನ್ನು ಪಟ್ಟಿ ಮಾಡಿರುವ ಮುಖ್ಯಮಂತ್ರಿ ಅವರು ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆಯೂ ಸೂಚನೆ ನೀಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ನಗರದ 191 ಕಿ.ಮೀ ಉದ್ದದ ರಸ್ತೆಯ ನಿರ್ವಹಣೆಯ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಆರ್‌ಡಿಸಿಎಲ್‌) ವಹಿಸಲಾಗಿದ್ದು, ಅದರಲ್ಲಿ ಬಿಬಿಎಂಪಿ ಅಧೀನದಲ್ಲಿದ್ದ 98 ಕಿ.ಮೀ ರಸ್ತೆಯೂ ಸೇರಿದೆ. 2017–18ರಲ್ಲಿ ಅತಿ ದಟ್ಟಣೆ ಕಾರಿಡಾರ್‌ ಅಭಿವೃದ್ಧಿಗೆ ಸರ್ಕಾರ ₹ 200 ಕೋಟಿ ಅನುದಾನ ಹಂಚಿಕೆ ಮಾಡಿದ್ದು, ಅದರ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 191 ಕಿ.ಮೀ ರಸ್ತೆಯಲ್ಲಿ 51 ಕಿ.ಮೀ ರಸ್ತೆಗಳನ್ನು ವೈಟ್‌ಟಾಪಿಂಗ್‌ ಮಾಡಲಾಗಿದೆ. ಅಂದರೆ, ಇನ್ನು ಅಭಿವೃದ್ಧಿಪಡಿಸುವುದಕ್ಕೆ ಬಾಕಿ ಇರುವುದು 67 ಕಿ.ಮೀ ಉದ್ದದ ರಸ್ತೆ ಮಾತ್ರ. ಆದರೂ 191 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಟೆಂಡರ್‌ ಕರೆದಿರುವುದು ಏಕೆ ಎಂದು ಮುಖ್ಯಮಂತ್ರಿ ವಿವರಣೆ ಕೇಳಿದ್ದಾರೆ.

ವೈಟ್‌ಟಾಪಿಂಗ್‌ ಆಗಿರುವ ರಸ್ತೆಗಳ ನಿರ್ವಹಣೆಗೆ ಅತ್ಯಲ್ಪ ವೆಚ್ಚವಾಗುತ್ತದೆ. ಆದರೂ, ಕಾರಿಡಾರ್‌ಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ವ್ಯಯಿಸುವ ಅಗತ್ಯವೇನು. ಹೆಬ್ಬಾಳ– ಕೆ.ಆರ್‌.‍ಪುರ– ಸಿಲ್ಕ್‌ಬೋರ್ಡ್‌ ಹೊರವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಾಣವಾಗುವುದರಿಂದ ಈ ರಸ್ತೆಯನ್ನು ಈ ಹಂತದಲ್ಲಿ ಅಭಿವೃದ್ಧಿಪಡಿಸುವುದು ಕಾರ್ಯಸಾಧುವೇ ಎಂದೂ ಪ್ರಶ್ನಿಸಿದ್ದಾರೆ.

12 ಕಾರಿಡಾರ್‌ಗಳ ಅಭಿವೃದ್ಧಿಗೆ ₹ 335 ಕೋಟಿ ವ್ಯಯಿಸಿ, ಅವುಗಳ ನಿರ್ವಹಣೆಗೆ ಮತ್ತೆ ₹ 785 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಯಾವುದೇ ರಸ್ತೆ ಅಭಿವೃದ್ಧಿಪಡಿಸಿದರೂ, ಎರಡು ವರ್ಷ ಅವುಗಳ ದೋಷ ಬಾಧ್ಯತಾ ಅವಧಿ ಇರುತ್ತದೆ. ಈ ಅವಧಿಯಲ್ಲಿ ಏನೇ ದೋಷ ಕಾಣಿಸಿಕೊಂಡರೂ ಗುತ್ತಿಗೆದಾರರೇ ದುರಸ್ತಿಪಡಿಸಬೇಕು ಹಾಗಿದ್ದರೂ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಿದ ಮೊದಲ ಎರಡು ವರ್ಷಗಳಿಗೆ ₹ 291.35 ಕೋಟಿ ವೆಚ್ಚ ಮಾಡುವುದಕ್ಕೆ ಸಮರ್ಥನೆ ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೆಎಆರ್‌ಡಿಸಿಎಲ್‌ಗೆ ನೀಡುವುದಕ್ಕೆ ಬಿಬಿಎಂಪಿ ಆಯುಕ್ತರು ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದರು. ಇವುಗಳ ನಿರ್ವಹಣೆಯನ್ನು ಬಿಬಿಎಂಪಿಗೇ ವಹಿಸುವುದಕ್ಕೆ ಹಿಂದಿನ ಮುಖ್ಯ ಕಾರ್ಯದರ್ಶಿಯವರು ಸಮನ್ವಯ ಸಮಿತಿ ಸಭೆಯಲ್ಲಿ ಸಮ್ಮತಿಯನ್ನೂ ನೀಡಿದ್ದರು. ಈಗ ಇವುಗಳನ್ನು ಯಾವ ಸಂಸ್ಥೆಯಿಂದ ಕಾಮಗಾರಿ ಅನುಷ್ಠಾನ ಮಾಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಬೇಕೂ ಎಂದೂ ಹೇಳಿದ್ದಾರೆ.

ಪ್ಯಾಕೇಜ್‌– 2ರಲ್ಲಿ ಟೆಂಡರ್‌ನಲ್ಲಿ ಎಲ್‌– 1 ಬಿಡ್‌ದಾರರಾಗಿದ್ದ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್ ಸಂಸ್ಥೆ ನಿಗದಿಪಡಿಸಿದಷ್ಟು ಆರ್ಥಿಕ ವಹಿವಾಟು ನಡೆಸಿಲ್ಲ ಎಂಬ ಕಾರಣಕ್ಕೆ ಎಲ್–2 ಗುತ್ತಿಗೆದಾರರಾಗಿದ್ದ ಆರ್‌.ಎಂ.ಎನ್‌ ಇನ್‌ಫ್ರಾಸ್ಟ್ರಕ್ಚರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಟೆಂಡರ್ ಮೊತ್ತಕ್ಕಿಂತ (₹ 145.29 ಕೋಟಿ) ಶೇ 5ರಷ್ಟು ಅಧಿಕ ಟೆಂಡರ್‌ ಪ್ರೀಮಿಯಂ (₹152.55 ಕೋಟಿ) ಮಿತಿ ನಿಗದಿಪಡಿಸಿ ಅನುಮೋದನೆ ನೀಡಲಾಗಿದೆ. ನಂತರ ಮತ್ತೆ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಗೆ ಟೆಂಡರ್‌ ಮೊತ್ತಕ್ಕಿಂತ ಶೇ 5ರಷ್ಟು ಅಧಿಕ ಪ್ರೀಮಿಯಂ ಮಿತಿ ನಿಗದಿಪಡಿಸಿ ಅನುಮೋದನೆ ನೀಡುವ ಮೂಲಕ ದ್ವಂದ್ವ ನಿರ್ಧಾರ ಕೈಗೊಂಡಿರುವುದು ಮೇಲ್ನೊಟಕ್ಕೆ ಕಾಣುತ್ತಿದೆ ಎಂದು ಮುಖ್ಯಮಂತ್ರಿಅಭಿಪ್ರಾಯ‍ಪಟ್ಟಿದ್ದಾರೆ.

ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರನಿಗೆ ಟೆಂಡರ್‌– ಆಕ್ಷೇಪ

ಪ್ಯಾಕೇಜ್‌–3ರ ಗುತ್ತಿಗೆದಾರ ಉದಯ್‌ ಶಿವಕುಮಾರ್‌ (ಇಂಡಿಯಾ ಪ್ರೈ ಲಿ.) ಅವರನ್ನು ಲೋಕೋಪಯೋಗಿ ಇಲಾಖೆ 2019ರ ಮೇ 27ರಂದು ಕಪ್ಪುಪಟ್ಟಿಗೆ ಸೇರಿಸಿತ್ತು. ಟೆಂಡರ್‌ನಲ್ಲಿ ತಾಂತ್ರಿಕ ಅರ್ಹತೆ ಪಡೆಯಲು ಐದು ವರ್ಷಗಳಲ್ಲಿ ₹ 80 ಕೋಟಿ ಮೊತ್ತದ ಒಂದಾದರೂ ಕಾಮಗಾರಿ ನಿರ್ವಹಿಸಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಈ ಗುತ್ತಿಗೆದಾರ ₹ 60 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ತಾಂತ್ರಿಕವಾಗಿ ಅನರ್ಹಗೊಳಿಸಲಾಗಿತ್ತು. ನಂತರ ಇದೇ ಗುತ್ತಿಗೆದಾರ ಮತ್ತೆ ಅರ್ಹತೆ ಗಿಟ್ಟಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆಯೂ ಮುಖ್ಯಮಂತ್ರಿ ಸ್ಪಷ್ಟನೆ ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT