ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ₹ 16.50 ಲಕ್ಷಕ್ಕೆ ಶಿಶು ಮಾರಿದ್ದ ಮನೋವೈದ್ಯೆ ಬಂಧನ

* ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು * ಚಾಮರಾಜಪೇಟೆಯಿಂದ ಅಪಹರಣವಾಗಿದ್ದ ಮಗು
Last Updated 31 ಮೇ 2021, 20:31 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಿಂದ ನವಜಾತ ಶಿಶು ಅಪಹರಣವಾಗಿದ್ದ ಪ್ರಕರಣವನ್ನು ವರ್ಷದ ಬಳಿಕ ಭೇದಿಸಿರುವ ದಕ್ಷಿಣ ವಿಭಾಗದ ಪೊಲೀಸರು, ನಗರದ ಆಸ್ಪತ್ರೆಯೊಂದರ ಮನೋವೈದ್ಯೆ ಡಾ. ರಶ್ಮಿ (34) ಎಂಬುವರನ್ನು ಬಂಧಿಸಿದ್ದಾರೆ.

‘ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, 2020ರ ಮೇ 29ರಂದು ಶಿಶು ಅಪಹರಣ ಮಾಡಿದ್ದರು. ಅದೇ ಶಿಶುವನ್ನು ₹ 16.50 ಲಕ್ಷಕ್ಕೆ ಕೊಪ್ಪಳದ ದಂಪತಿಗೆ ಮಾರಿದ್ದರು. ಇದೀಗ ರಶ್ಮಿ ಅವರನ್ನು ಬಂಧಿಸಿ, ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಜಗಜೀವನರಾಮ್ ನಗರ ನಿವಾಸಿ ಹುಸ್ನಾ ಬಾನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಗಂಡು ಮಗುವಾಗಿತ್ತು. ಆ ಮಗುವನ್ನು ಆರೋಪಿ ಅಪಹರಣ ಮಾಡಿದ್ದರು. ಆ ಸಂಬಂಧ ಹುಸ್ನಾಬಾನು ಪತಿ ನವೀದ್ ಪಾಷಾ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಬಸವನಗುಡಿ ಮಹಿಳಾ ಠಾಣೆಗೆ ವರ್ಗಾಯಿಸಲಾಗಿತ್ತು. 20 ಸಿಬ್ಬಂದಿ ಒಳಗೊಂಡಿದ್ದ ವಿಶೇಷ ತಂಡ, ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ಹೇಳಿದರು.

ಹುಬ್ಬಳ್ಳಿಯಲ್ಲಿ ಒಪ್ಪಂದ: ‘ಆರೋಪಿ ರಶ್ಮಿ, 2014ರಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಮಗುವಿನ ಚಿಕಿತ್ಸೆಗಾಗಿ ಬಂದಿದ್ದ ಕೊಪ್ಪಳದ ದಂಪತಿ ಪರಿಚಯವಾಗಿತ್ತು. ಅವರ ಮಗು ಬುದ್ಧಿಮಾಂದ್ಯವಾಗಿತ್ತು. ಚಿಕಿತ್ಸೆ ನೀಡಿದರೂ‌ ಸುಧಾರಣೆ ಕಂಡುಬಂದಿರಲಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ದಂಪತಿ ಜೊತೆ ಒಡನಾಟ ಹೊಂದಿದ್ದ ರಶ್ಮಿ, ‘ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡು ಬಾಡಿಗೆ ತಾಯಿ ಹೊಟ್ಟೆಯಲ್ಲಿ ನಿಮ್ಮದೇ ಮಗು ಬೆಳೆಸಬಹುದು. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಮಗು ಜನಿಸಿದ ಬಳಿಕ ನಿಮಗೆ ತಂದುಕೊಡುತ್ತೇನೆ’ ಎಂದು ಹೇಳಿದ್ದರು. ಅದನ್ನು ನಂಬಿದ್ದ ದಂಪತಿ, ಆರೋಪಿ ಮಾತಿಗೆ ಒಪ್ಪಿದ್ದರು.’

‘ದಿನಗಳು ಕಳೆದಂತೆ ಬಾಡಿಗೆ ತಾಯಿ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದಾಗಿ ದಂಪತಿಗೆ ಆರೋಪಿ ಹೇಳುತ್ತಿದ್ದರು. ಹೀಗಾಗಿ, ದಂಪತಿ ಮಗುವಿಗಾಗಿ ಕಾಯುತ್ತಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಹುಬ್ಬಳ್ಳಿ ಆಸ್ಪತ್ರೆ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಇಲ್ಲಿಯೇ ಆಸ್ಪತ್ರೆಯಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಅದೇ ಸಮಯದಲ್ಲೇ ಚಾಮರಾಜಪೇಟೆ ಬಿಬಿಎಂಪಿ ಆಸ್ಪತ್ರೆಗೆ ಬಂದು ಶಿಶು ಅಪಹರಿಸಿ ಕೊಪ್ಪಳ ದಂಪತಿಗೆ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ₹ 16.50 ಲಕ್ಷ ಪಡೆದಿದ್ದರು’ ಎಂದೂ ಮೂಲಗಳು ಹೇಳಿವೆ.

ಕಾನೂನು ಬದ್ಧವೆಂದಿದ್ದ ಆರೋಪಿ: ‘ಶಿಶು ಅಪಹರಿಸಿದ್ದು ರಶ್ಮಿ ಎಂಬುದು ತಿಳಿಯುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ‘ಕಾನೂನುಬದ್ಧವಾಗಿಯೇ ಬಾಡಿಗೆ ತಾಯಿ ಹೊಟ್ಟೆಯಲ್ಲಿ ಶಿಶು ಜನನವಾಗಿದೆ. ಕೊಪ್ಪಳ ದಂಪತಿ ಬಳಿ ಇರುವ ಶಿಶು ಅವರದ್ದೇ’ ಎಂಬುದಾಗಿ ಅವರು ಹೇಳಿಕೆ ನೀಡಿದ್ದರು. ಆದರೆ, ಪುರಾವೆಗಳು ಹಾಗೂ ಶಿಶು ಖರೀದಿಸಿದ್ದ ದಂಪತಿ ಸಮೇತ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

’ತಮ್ಮ ಬಳಿ ಇರುವುದು ಅಪಹರಣವಾಗಿರುವ ಶಿಶು ಎಂಬುದು ಕೊಪ್ಪಳ ದಂಪತಿಗೆ ಗೊತ್ತೇ ಇರಲಿಲ್ಲ. ಪೊಲೀಸರು ಅವರ ಮನೆಗೆ ಹೋದಾಗಲೇ ಅವರಿಗೆ ವಿಷಯ ಗೊತ್ತಾಯಿತು.’

‘ಶಿಶುವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಿದೆ. ವರದಿ ಬಂದ ನಂತರ ಶಿಶುವನ್ನು ಪೋಷಕರ ಸುಪರ್ದಿಗೆ ನೀಡಲಾಗುವುದು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT