ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಕೋಟಿ ವಂಚನೆ

ಚೀಟಿ ವ್ಯವಹಾರ: ಸಿಐಡಿ ತನಿಖೆಗೆ ಗ್ರಾಹಕರ ಒತ್ತಾಯ
Last Updated 21 ಜನವರಿ 2021, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಚೀಟಿ ವ್ಯವಹಾರದ ಹೆಸರಿನಲ್ಲಿ 900ಕ್ಕೂ ಹೆಚ್ಚು ಜನರಿಂದ ಸುಮಾರು ₹ 20 ಕೋಟಿ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು’ ಎಂದು ಒತ್ತಾಯಿಸಿ ನೊಂದ ಗ್ರಾಹಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಕಾರರು, ‘ವಂಚನೆ ಪ್ರಕರಣದ ಆರೋಪಿಗಳಾದ ಜ್ಞಾನೇಶ್– ಲೀಲಾವತಿ ದಂಪತಿ, ಅವರ ಮಗ ಮನೋಜ್ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಮಗಳು ಮೇಘನಾ ಹಾಗೂ ಅವರ ಪತಿಯೂ ಆಗಿರುವ ಪೊಲೀಸ್ ಕಾನ್‌ಸ್ಟೆಬಲ್ ರವಿಕುಮಾರ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಚೀಟಿ ವ್ಯವಹಾರದಲ್ಲಿ ಹಣ ಕಟ್ಟಿದರೆ, ಅದನ್ನು ಷೇರು ಮಾರುಕಟ್ಟೆ ಹಾಗೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಲಾಗುವುದು. ಅದರಿಂದ ಹೆಚ್ಚಿನ ಲಾಭ ಪಡೆದು, ಗ್ರಾಹಕರಿಗೆ ನೀಡುವುದಾಗಿ ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ಗಿರಿನಗರ, ಹೊಸಕೆರೆಹಳ್ಳಿ, ಹನುಮಂತನಗರ ಹಾಗೂ ಸುತ್ತಮುತ್ತಲ 900ಕ್ಕೂ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿದ್ದರು’ ಎಂದೂ ಪ್ರತಿಭಟನಕಾರರು ಹೇಳಿದರು.

‘ಮನೆ ನಿರ್ಮಾಣ, ಮಕ್ಕಳ ಮದುವೆ ಸೇರಿದಂತೆ ವಿವಿಧ ಕಾರಣಕ್ಕಾಗಿ ಉಳಿಕೆ ಮಾಡಿದ್ದ ಹಣವನ್ನೇ ಗ್ರಾಹಕರು ಚೀಟಿ ವ್ಯವಹಾರದಲ್ಲಿ ತೊಡಗಿಸಿದ್ದರು. ಅವಧಿ ಮುಗಿದರೂ ಆರೋಪಿಗಳು ಗ್ರಾಹಕರಿಗೆ ಹಣ ವಾಪಸು ನೀಡಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕರಿಗೇ ಜೀವ ಬೆದರಿಕೆ ಹಾಕಲಾಗಿತ್ತು. ನೊಂದ ಗ್ರಾಹಕರು ಗಿರಿನಗರ ಹಾಗೂ ಹನುಮಂತನಗರ ಠಾಣೆಗೆ ದೂರು ನೀಡಿದ್ದಾರೆ.’

‘ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜ್ಞಾನೇಶ್-ಲೀಲಾವತಿ ದಂಪತಿ ಹಾಗೂ ಮಗ ಮನೋಜ್ ಅವರನ್ನು ಮಾತ್ರ ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ್ದ ಪುತ್ರಿ ಮೇಘನಾ ಹಾಗೂ ಅಳಿಯ ರವಿಕುಮಾರ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯಲ್ಲಿರುವ ರವಿಕುಮಾರ್, ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ’ ಎಂದೂ ಪ್ರತಿಭಟನಕಾರರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT