ಸೋಮವಾರ, ಜನವರಿ 17, 2022
18 °C
ಆನ್‌ಲೈನ್‌ನಲ್ಲಿ ವೀಕ್ಷಣೆಗೆ ಒಂದು ತಿಂಗಳ ಅವಕಾಶ

ಜ.3ರ ಚಿತ್ರಸಂತೆಗೆ ಸಿದ್ಧತೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರಕಲಾ ಪರಿಷತ್ತಿನ ವತಿಯಿಂದ ಪ್ರತಿವರ್ಷ ನಡೆಸುವ ಚಿತ್ರಸಂತೆಯನ್ನು ಈ ಬಾರಿ ಕೋವಿಡ್‌ ಕಾರಣದಿಂದ ಆನ್‌ಲೈನ್‌ ಮೂಲಕವೂ ನಡೆಸಲು ತೀರ್ಮಾನಿಸಿದ್ದು, ಸಿದ್ಧತೆ ಪೂರ್ಣಗೊಂಡಿದೆ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

ಜನವರಿ 3ರಂದು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆರಂಭವಾಗಲಿರುವ 18ನೇ ಚಿತ್ರಸಂತೆಯಲ್ಲಿ ಪ್ರಸಿದ್ಧ 250 ಕಲಾವಿದರ 400 ಕಲಾಕೃತಿಗಳನ್ನು ಪರಿಷತ್ತಿನ 12 ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುವುದು. ಅದೇ ಕಲಾಕೃತಿಗಳನ್ನು ಆನ್‌ಲೈನ್‌ಗೂ ಅಪ್‌ಲೋಡ್ ಮಾಡಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಆನ್‌ಲೈನ್‌ನಲ್ಲಿ ಒಂದು ತಿಂಗಳ ಕಾಲ ಸಾರ್ವಜನಿಕರು ಕಲಾಕೃತಿಗಳನ್ನು ವೀಕ್ಷಿಸಬಹುದು. ವಿಮರ್ಶೆ ಮತ್ತು ಕಲಾತ್ಮಕ ಚರ್ಚೆಗಳೂ ಆನ್‌ಲೈನ್‌ನಲ್ಲಿ ನಡೆಯಲಿವೆ. ಚಿತ್ರಸಂತೆಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಪರಿಷತ್ತು ವಜ್ರಮಹೋತ್ಸವ ಕಾರ್ಯಕ್ರಮವನ್ನು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅದೇ ದಿನ ಉದ್ಘಾಟನೆ ಮಾಡಲಿದ್ದಾರೆ. ಆಹ್ವಾನಿತ ಪ್ರಸಿದ್ಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.

ಚಿತ್ರಸಂತೆ ಮತ್ತು ಇತರೆಲ್ಲಾ ಕಾರ್ಯಕ್ರಮಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯುಟ್ಯೂಬ್‌ ಮತ್ತು chitrasanthe.org ನಲ್ಲಿ ಪ್ರಸಾರವಾಗಲಿವೆ. ಪ್ರಪಂಚದ ಯಾವುದೇ ಭಾಗದಿಂದಲೂ ಚಿತ್ರಸಂತೆಯಲ್ಲಿ ಭಾಗವಹಿಸುವ ಅವಕಾಶ ಈ ಬಾರಿ ದೊರೆತಿದೆ ಎಂದರು.

‘ಕೋವಿಡ್ ಕಾರಣದಿಂದ ವರ್ಷವಿಡೀ ಯಾವುದೇ ಕಾರ್ಯಕ್ರಮ ಇಲ್ಲದೆ ಪರಿಷತ್ತು ಆರ್ಥಿಕ ನಷ್ಟದಲ್ಲಿದೆ. ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ವಜ್ರ ಮಹೋತ್ಸವದ ಈ ಸಂದರ್ಭದಲ್ಲಿ ಕಲಾವಿದರು, ಕಲಾಪ್ರೇಮಿಗಳಿಗೆ ನಿರಾಸೆ ಮಾಡಬಾರದು ಎಂಬ ಕಾರಣಕ್ಕೆ ಉಳಿತಾಯದ ಹಣದಲ್ಲಿ ಚಿತ್ರಸಂತೆ ಆಯೋಜಿಸಲಾಗಿದೆ. ದೇಶ– ವಿದೇಶದ ಕಲಾವಿದರು ಭಾಗವಹಿಸುತ್ತಿರುವುದರಿಂದ ಈ ಚಿತ್ರಸಂತೆ ಸಾರ್ವಕಾಲಿಕ ದಾಖಲೆಯಾಗಲಿದೆ‘ ಎಂದು ಹೇಳಿದರು.

22 ದೇಶಗಳ ಕಲಾವಿದರು
‘ಪ್ರಥಮ ಬಾರಿಗೆ 22 ದೇಶಗಳ ಕಲಾವಿದರು ಆನ್‍ಲೈನ್ ಮೂಲಕ ಭಾಗವಹಿಸುತ್ತಿದ್ದಾರೆ. ಈವರೆಗೆ 1,223 ಮಂದಿ ನೋಂದಾಯಿಸಿಕೊಂಡಿದ್ದಾರೆ. 20 ರಾಜ್ಯಗಳ ಕಲಾವಿದರು ಭಾಗವಹಿಸುತ್ತಿದ್ದಾರೆ’ ಎಂದು ಬಿ.ಎಲ್. ಶಂಕರ್ ಹೇಳಿದರು.

ಜರ್ಮನಿ, ಪೋಲೆಂಡ್, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ಫ್ರಾನ್ಸ್, ಅಮೆರಿಕ, ಅಫ್ಘಾನಿಸ್ತಾನ, ಮಲೇಷ್ಯಾ, ಇರಾನ್, ನೆದರ್ ಲೆಂಡ್, ಭೂತಾನ್, ನೇಪಾಳ, ಆಸ್ಟ್ರೇಲಿಯಾ, ಮೆಕ್ಸಿಕೊ, ಈಜಿಪ್ಟ್, ಇಂಡೋನೇಷ್ಯಾ ಮತ್ತು ರಷ್ಯಾದ ಕಲಾವಿದರು ಭಾಗವಹಿಸಲಿದ್ದಾರೆ.

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ದೆಹಲಿ, ಗೋವಾ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಐವರಿಗೆ ಪ್ರಶಸ್ತಿ ಪ್ರದಾನ
ಚಿತ್ರಸಂತೆ ಅಂಗವಾಗಿ ಐವರು ಕಲಾವಿದರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ‘ಪ್ರೊ.ಎಂ.ಎಸ್.ನಂಜುಡರಾವ್ ರಾಷ್ಟ್ರೀಯ ಪ್ರಶಸ್ತಿ’ಗೆ ಬರೋಡಾ ಕಲಾವಿದೆ ನೀಲಿಮಾ ಶೇಖ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ₹1 ಲಕ್ಷ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

‘ಡಿ.ದೇವರಾಜ ಅರಸು ಪ್ರಶಸ್ತಿ’ಗೆ ಕಲಾವಿದ ಪಿ.ಎಸ್.ಕುಮಾರ್, ‘ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿ’ಗೆ ವಿಜಯ್ ಬಾಗೋಡಿ, ‘ಎಂ.ಆರ್ಯಮೂರ್ತಿ ಪ್ರಶಸ್ತಿ’ಗೆ ಆರ್.ರಾಜು ಮತ್ತು ‘ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿ’ಗೆ ಡಾ.ಚೂಡಾಮಣಿ ನಂದಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕೂ ಪ್ರಶಸ್ತಿಗಳು ತಲಾ ₹50 ಸಾವಿರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿವೆ. ಚಿತ್ರಸಂತೆಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಬಿ.ಎಲ್.ಶಂಕರ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು