ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಗೆ ಹೋದರೂ ಕಳ್ಳತನ ಬಿಡದ ‘ಚೌಲ್ಟ್ರಿ’

ವೃದ್ಧೆಯರ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿ ಬಂಧನ
Last Updated 21 ಆಗಸ್ಟ್ 2020, 20:41 IST
ಅಕ್ಷರ ಗಾತ್ರ

ಬೆಂಗಳೂರು: ಪಿಂಚಣಿ ಸೇರಿ ಸರ್ಕಾರದ ವಿವಿಧ ಸೌಲಭ್ಯ ಕೊಡಿಸುವ ನೆಪದಲ್ಲಿ ವೃದ್ಧೆಯರನ್ನು ಬೈಕ್‌ನಲ್ಲಿ ಕರೆದೊಯ್ದು ಚಿನ್ನಾಭರಣ ಕದ್ದುಕೊಂಡು ಪರಾರಿ ಯಾಗುತ್ತಿದ್ದ ಆರೋಪಿ ಮಂಜೇಶ್ ಅಲಿಯಾಸ್ ಚೌಲ್ಟ್ರಿ ಮಂಜ (34) ಎಂಬಾತನನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್‌ನನ್ನು ಈ ಹಿಂದೆಯೂ ಕೆಂಗೇರಿ ಹಾಗೂ ಬಾಗಲಗುಂಟೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿ ಸಿದ್ದರು. ಜಾಮೀನು ಮೇಲೆ ಹೊರ ಬಂದಿದ್ದ ಆತ, ತನ್ನ ವಂಚನೆ ಮುಂದು ವರಿಸಿದ್ದ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು. ‘ಆರೋಪಿಯಿಂದ ₹ 16.55 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆತ ಇದುವರೆಗೂ 8 ಕಡೆ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ಒಂಟಿ ವೃದ್ಧೆಯರೇ ಗುರಿ: ‘ಒಂಟಿಯಾಗಿ ಸಂಚರಿಸುವ ಹಾಗೂ ಉದ್ಯಾನದಲ್ಲಿ ವಾಯುವಿಹಾರಕ್ಕೆ ಬರುವ ವೃದ್ಧೆಯರನ್ನು ಆರೋಪಿ ಪರಿಚಯ ಮಾಡಿಕೊಳ್ಳುತ್ತಿದ್ದ. ‘ಸರ್ಕಾರವು ವೃದ್ಧೆಯರಿಗಾಗಿ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಪರಿಚಯಸ್ಥರು ಇದ್ದಾರೆ. ಅವರ ಮೂಲಕ ನಿಮಗೂ ಪಿಂಚಣಿ ಕೊಡಿಸುತ್ತೇನೆ’ ಎಂಬುದಾಗಿ ಮಂಜೇಶ್ ಹೇಳುತ್ತಿದ್ದ. ಅದನ್ನು ವೃದ್ಧೆಯರು ನಂಬುತ್ತಿದ್ದರು’ ಎಂದರು. ‘ವೃದ್ಧೆಯರನ್ನು ಆರೋಪಿಯೇ ತನ್ನ ಬೈಕ್‌ನಲ್ಲಿ ಅಂಚೆ ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳಿಗೆ ಕರೆದೊಯ್ಯುತ್ತಿದ್ದ. ‘ಮೈ ಮೇಲೆ ಆಭರಣಗಳಿದ್ದರೆ, ಪಿಂಚಣಿ ಅರ್ಜಿ ಸ್ವೀಕರಿಸುವುದಿಲ್ಲ.

ಆಭರಣ ಬಿಚ್ಚಿ ನನ್ನ ಕೈಗೆ ಕೊಡಿ’ ಎನ್ನುತ್ತಿದ್ದ. ಅದನ್ನು ನಂಬಿ ವೃದ್ಧೆಯರು, ಆಭರಣ ಬಿಚ್ಚಿ ಕೊಡು ತ್ತಿದ್ದರು. ಅಧಿಕಾರಿಗಳ ಜೊತೆ ಮಾತನಾಡಿ ಬರು ವುದಾಗಿ ಹೇಳಿ ಪರಾರಿ ಯಾಗುತ್ತಿದ್ದ’ ಎಂದೂ ತಿಳಿಸಿದರು. ‘ಜೂನ್ 27ರಂದು ವಿಜಯನಗರದ ಮಾರೇನಹಳ್ಳಿಯ ವಿಜಯಾಂಬಿಕಾ ಎಂಬುವರು 58 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಆರೋಪಿ ಪರಾರಿ ಯಾಗಿದ್ದ. ಈ ಬಗ್ಗೆ ದಾಖಲಾದ ದೂರು ಆಧರಿಸಿ ಆರೋಪಿಯನ್ನು ಬಂಧಿ ಸಲಾಗಿದೆ. ಸಿದ್ದಾಪುರ, ಬೊಮ್ಮನಹಳ್ಳಿ, ಹೆಬ್ಬಗೋಡಿ, ರಾಜಾನುಕುಂಟೆ ಹಾಗೂ ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆಗಳ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದಾಗಿ ಗೊತ್ತಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT