ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್: ಬೆಂಗಳೂರಿನ ಎಲ್ಲೆಡೆ ಸಂಭ್ರಮದ ಆಚರಣೆ

Last Updated 25 ಡಿಸೆಂಬರ್ 2021, 20:08 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಗಾರಗೊಂಡಿದ್ದ ಚರ್ಚ್‌ಗಳು, ಬೆಳಗಿದ ವಿದ್ಯುತ್ ದೀಪಗಳು, ನಡು ನಡುವೆ ಸಾಂಟಾ ಕ್ಲಾಸ್‌ ವೇಷಧಾರಿಗಳು, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ...

ಇದು ನಗರದಲ್ಲಿ ಶನಿವಾರ ಕಂಡು ಬಂದ ದೃಶ್ಯ. ಕ್ರಿಸ್‌ಮಸ್ ಅಂಗವಾಗಿ ನಗರದ ಹಲವೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಚರ್ಚ್‌ಗಳ ಆವರಣ ಮತ್ತು ಹೊರಗಿನ ರಸ್ತೆಗಳು ಕಳೆಗಟ್ಟಿದ್ದವು. ಚರ್ಚ್‌ಗಳ ಒಳಗೆ ಸಾಮೂಹಿಕ ಪ್ರಾರ್ಥನೆ ನಡೆದರೆ, ಸುತ್ತಮುತ್ತಲ ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿ ಭರಾಟೆಯಿಂದ ನಡೆದಿತ್ತು.

ಶುಕ್ರವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನೆಗಳು ಆರಂಭವಾಗಿದ್ದವು. ಶನಿವಾರ ಮಧ್ಯಾಹ್ನದ ತನಕವೂ ಪ್ರಾರ್ಥನೆಗಳು ನಡೆದವು. ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ನಲ್ಲಿ ಜನ ಜಾತ್ರೆಯೇ ನೆರೆದಿತ್ತು. ಎರಡು ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನ ಜನರನ್ನು ಆಕರ್ಷಿಸಿತ್ತು.

ಯೇಸುವಿನ ಪ್ರತಿಮೆ ಮುಂದೆ ಭಕ್ತರು ಮೊಂಬತ್ತಿ ಹಿಡಿದು ನಮನ ಸಲ್ಲಿಸಿದರು. ಆಕರ್ಷಣೆಯ ಕೇಂದ್ರವಾಗಿದ್ದ ಸಾಂಟಾಕ್ಲಾಸ್ ಬೊಂಬೆಗಳ ಮುಂದೆ ಮಕ್ಕಳನ್ನು ನಿಲ್ಲಿಸಿ ಪೋಷಕರು ಪೋಟೊ ತೆಗೆಯುತ್ತಿದ್ದುದು ಕಂಡುಬಂತು.

ಕಳೆದ ವರ್ಷ ಕ್ರಿಸ್‌ಮಸ್‌ ಆಚರಣೆಗೆ ಕೋವಿಡ್‌ ನಿರ್ಬಂಧಗಳಿದ್ದವು. ಈ ಬಾರಿ ಕಟ್ಟುನಿಟ್ಟಿನ ನಿರ್ಬಂಧ ಇಲ್ಲದಿದ್ದರಿಂದ ಎಲ್ಲೆಡೆ ಸಂಭ್ರಮ ಹೆಚ್ಚಾಗಿತ್ತು. ಫ್ರೇಜರ್‌ ಟೌನ್‌ನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆ ಬಳಿಯ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ಸ್‌ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ಅನೇಕ ಚರ್ಚ್‌ಗಳಲ್ಲೂ ಸಂಭ್ರಮ ಜೋರಾಗಿತ್ತು. ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್‌ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಗಂಟೆಗಳು ಹಾಗೂ ಸಾಂಟಾ ಕ್ಲಾಸ್‌ನ ಪ್ರತಿರೂಪಗಳು ಹಬ್ಬದ ಮೆರುಗು ಹೆಚ್ಚಿಸಿದ್ದವು.

ಚರ್ಚ್‌ ರಸ್ತೆಯಲ್ಲಿ ಜನ ಜಂಗುಳಿ
ಕ್ರಿಸ್‌ಮಸ್ ಆಚರಣೆಯ ಸಂಭ್ರಮದಲ್ಲಿ ಜನ ಮುಳುಗಿದ್ದ ಜನ, ಎಂ.ಜಿ.ರಸ್ತೆ ಮತ್ತು ಚರ್ಚ್ ರಸ್ತೆಯಲ್ಲಿ ಶನಿವಾರ ಜಮಾಯಿಸಿದ್ದರು.

ಸ್ನೇಹಿತರು, ಸಂಬಂಧಿಕರೊಂದಿಗೆ ಚರ್ಚ್‌ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯ ಹೋಟೆಲ್‌, ಪಬ್‌ಗಳಲ್ಲಿ ತುಂಬಿಕೊಂಡಿದ್ದರು. ಎಂ.ಜಿ. ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT