7

‘ಅಮ್ಮ’ ನಿರ್ಧಾರ ಪ್ರಶ್ನಿಸಿ ‘ಮಿರ್ಚ್‌ ಮಸಾಲಾ’ ಪ್ರದರ್ಶನ

Published:
Updated:

ಬೆಂಗಳೂರು: ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ‘ಮಲಯಾಳಂ ಸಿನಿಮಾ ಕಲಾವಿದರ ಸಂಘ’ (ಅಮ್ಮ) ಮತ್ತೆ ಸದಸ್ಯತ್ವ ನೀಡಿದ್ದನ್ನು ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಲೈಂಗಿಕ ದೌರ್ಜನ್ಯದ ಭೀಕರತೆಯನ್ನು ಬಿಂಬಿಸುವ ‘ಮಿರ್ಚ್‌ ಮಸಾಲಾ’ ಚಿತ್ರವನ್ನು ಪ್ರದರ್ಶಿಸುವ ಮೂಲಕ ‘ಅಮ್ಮ’ ನಿರ್ಧಾರವನ್ನು ಪ್ರತಿಭಟಿಸುವ ವಿಶಿಷ್ಟ ಕಾರ್ಯಕ್ರಮವನ್ನು ರಂಗಕರ್ಮಿ ಪ್ರಕಾಶ್‌ ಬಾರೆ ಆಯೋಜಿಸಿದ್ದಾರೆ.

#WithHer (#ಅವಳೊಡನೆನಾವು) ಹ್ಯಾಷ್‌ಟ್ಯಾಗ್ ಅಭಿಯಾನವನ್ನು ಆರಂಭಿಸಿರುವ ಕೆಲ ಸಿನಿಮಾ ಮತ್ತು ರಂಗಭೂಮಿ ಕಲಾವಿದರು ಈ ಕಾರ್ಯಕ್ರಮಕ್ಕೆ ಸಾತ್ ನೀಡಿದ್ದಾರೆ. ಕಾರ್ಯಕ್ರಮದ ಕುರಿತು ಪ್ರಕಾಶ್‌ ಬಾರೆ ವಿವರಿಸುವುದು ಹೀಗೆ...

ಕೇತನ್ ಮೆಹ್ತಾ ನಿರ್ದೇಶನದ ‘ಮಿರ್ಚ್ ಮಸಾಲಾ’ 1987ರಲ್ಲಿ ತೆರೆ ಕಂಡಿತ್ತು. ವಸಾಹತುಶಾಹಿ ಆಡಳಿತದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಯೊಬ್ಬ ಹಳ್ಳಿಗೆ ನುಗ್ಗಿ ಅಲ್ಲಿನ ಮಹಿಳೆಯರನ್ನು ಭೋಗವಸ್ತುವಿನಂತೆ ಕಾಣುವುದು, ಬಲಾತ್ಕಾರ ಎಸಗಲು ಯತ್ನಿಸುವುದು, ವಿರೋಧಿಸಿದವರಿಗೆ ಚಿತ್ರಹಿಂಸೆ ಕೊಡುವುದು, ಕೊನೆಗೆ ಮಹಿಳೆಯರು ಆ ದುಷ್ಟನಿಗೆ ತಕ್ಕ ಶಾಸ್ತಿ ಮಾಡುವುದು ಚಿತ್ರದ ಕಥಾವಸ್ತು.

‘ಈ ಚಿತ್ರ ಬಿಡುಗಡೆಯಾಗಿ ಸುಮಾರು ವರ್ಷಗಳಾಗಿವೆ. ಅಂದಿಗೂ–ಇಂದಿಗೂ ಏನಾದರೂ ವ್ಯತ್ಯಾಸವಾಗಿದೆಯೇ ಎಂದು ಒಮ್ಮೆ ಪ್ರಶ್ನಿಸಿಕೊಳ್ಳಿ. ಮಲಯಾಳಂ ಚಿತ್ರರಂಗದ ಈಚಿನ ಬೆಳವಣಿಗೆಗಳು ಈ ಚಿತ್ರದಲ್ಲಿ ನಡೆಯುವಂತೆಯೇ ಇವೆ. ಕನ್ನಡದಲ್ಲಿಯೂ ನಟಿಸಿದ್ದ ನಟಿಯೊಬ್ಬರ ಮೇಲೆ ಅಲ್ಲಿನ ನಟ ದಿಲೀಪ್ ಲೈಂಗಿಕ ದೌರ್ಜನ್ಯ ಎಸಗಿದ್ದ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯಗೊಳ್ಳುವ ಮೊದಲೇ ಅವರಿಗೆ ‘ಅಮ್ಮ’ ಮತ್ತೆ ಸದಸ್ಯತ್ವ ನೀಡಿದೆ.

‘ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸರ ಮೇಲೆ ಪ್ರಭಾವ ಬೀರುವ ಯತ್ನ ಸಾಗಿದೆ. ಕೆಲವೇ ಸೂಪರ್‌ಸ್ಟಾರ್‌ಗಳ ಹಿಡಿತದಲ್ಲಿರುವ ಮಲಯಾಳಂ ಚಿತ್ರರಂಗದಲ್ಲಿ ಪ್ರತಿಭಟನೆ ಗಂಭೀರ ಸ್ವರೂಪದಲ್ಲಿ ದಾಖಲಾಗುತ್ತಿಲ್ಲ. ಆದರೆ ಬಾಲಿವುಡ್ ಸೇರಿದಂತೆ ದೇಶದ ಇತರೆಡೆ ಚಿತ್ರಕಲಾವಿದರು ಪ್ರತಿಭಟನೆ ದಾಖಲಿಸಿದ್ದಾರೆ. ನೊಂದ ಮಹಿಳೆಗೆ ಬೆಂಬಲ ನೀಡುತ್ತಿದ್ದಾರೆ.

‘ಇದೇ ಉದ್ದೇಶದಿಂದ ಬೆಂಗಳೂರಿನಲ್ಲಿ ಚಿತ್ರಪ್ರದರ್ಶನ ಮತ್ತು ಸಂವಾದ ಆಯೋಜಿಸಿದ್ದೇವೆ. ಕವಿತಾ ಲಂಕೇಶ್, ಪ್ರಕಾಶ್‌ರಾಜ್, ಪವನ್‌ ಒಡೆಯರ್ ಸೇರಿದಂತೆ ಹಲವು ಕಲಾವಿದರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ’.

#WithHer
‘ಮಿರ್ಚ್‌ ಮಸಾಲಾ’ ಚಿತ್ರ ಪ್ರದರ್ಶನ ಮತ್ತು ಸಂವಾದ: ಸಮನ್ವಯ– ಹಿರಿಯ ಪತ್ರಕರ್ತೆ ಗೀತಾ ಅರವಮುದನ್ ಮತ್ತು ನ್ಯೂಸ್‌ಮಿನಿಟ್ ಜಾಲತಾಣದ ವ್ಯವಸ್ಥಾಪಕ ಸಂಪಾದಕರಾದ ಧನ್ಯ ರಾಜೇಂದ್ರನ್. ಸ್ಥಳ– ಈಸ್ಟ್ ಕಲ್ಚರಲ್ ಅಸೋಸಿಯೇಶನ್, 100 ಅಡಿ ರಸ್ತೆ, ಇಂದಿರಾನಗರ. ಸಂಜೆ 5.30. ಮೊ– 98801 15618

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !