ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬಲೂರು ಕೆರೆ ಪುನರುಜ್ಜೀವನ; ಹೂವಿನ ಲೋಕ ಅನಾವರಣ

ಸ್ವಯಂಸೇವಕರ ಪರಿಶ್ರಮದಿಂದ ಒಂದೇ ವರ್ಷದಲ್ಲಿ ಗಮನಾರ್ಹ ಬದಲಾವಣೆ
Last Updated 27 ಜೂನ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು:ಇಬ್ಬಲೂರು ಕೆರೆಯ ಅಂಗಳದಲ್ಲೀಗ ಹೊಸಲೋಕವೊಂದು ತೆರೆದುಕೊಂಡಿದೆ. ವರ್ಷದ ನಂತರ ಈ ಕೆರೆಗೆ ಭೇಟಿ ನೀಡಿದವರಿಗೆ ಹೊಸ ಅನುಭವ ಸಿಗಲಿದೆ. ಕೆರೆಯ ಸುತ್ತಲಿನ ಕಾಲುದಾರಿ, ದಂಡೆಯ ಉದ್ದಕ್ಕೂ ಹೂವುಗಳು ನಿಮ್ಮನ್ನು ಸ್ವಾಗತಿಸುತ್ತವೆ. ವರ್ಷದ ಹಿಂದೆ ಸ್ವಯಂಸೇವಕರು, ಪರಿಸರಪ್ರೇಮಿಗಳು ನೆಟ್ಟಿದ್ದ ಸಸಿಗಳು ದೊಡ್ಡದಾಗಿ ಹಸಿರು ಹೊದ್ದು ನಿಂತಿವೆ.

ಲಾಕ್‌ಡೌನ್‌ ಕಾರಣದಿಂದ ವಾಯುಮಾಲಿನ್ಯ ಕಡಿಮೆಯಾಗಿದ್ದು, ಜನ ಸಂಚಾರವೂ ಕಡಿಮೆ ಇದ್ದುದರಿಂದ ಪ್ರಶಾಂತ, ಸ್ವಚ್ಛ ಪರಿಸರದಲ್ಲಿ ಸಸಿಗಳು ಸಮೃದ್ಧವಾಗಿ ಬೆಳೆದಿವೆ. ಉದ್ದನೆಯ ತೇಗದ ಮರಗಳು, ಬಗೆ ಬಗೆಯ ಹೂವುಗಳು ಕೆರೆಯ ಸುತ್ತಲಿನ ಉದ್ಯಾನದ ಸೌಂದರ್ಯವನ್ನು ಹೆಚ್ಚಿಸಿವೆ. ಉದ್ಯಾನದ ಮಾಲಿಗಳಿಗೆ ಪಕ್ಕದಲ್ಲಿಯೇ ಶೆಡ್‌ ನಿರ್ಮಿಸಿಕೊಟ್ಟಿದ್ದು, ಹಗಲಿರುಳು ದುಡಿಯುವ ಮೂಲಕ ಉದ್ಯಾನವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ.

ಉದ್ಯಾನದ ಸುರಕ್ಷತೆಗಾಗಿ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉದ್ಯಾನಕ್ಕೆ ಭೇಟಿ ನೀಡುವವರು ಕೋವಿಡ್‌–19 ಮಾರ್ಗಸೂಚಿಗಳನ್ನು ಪಾಲಿಸಲು ಅಂದರೆ, ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಸುವ ಕೆಲಸವನ್ನೂ ಈ ಗೃಹರಕ್ಷಕ ಸಿಬ್ಬಂದಿ ನಿರ್ವಹಿಸುತ್ತಾರೆ.

ಜೂನ್‌ ಪ್ರಾರಂಭದಲ್ಲಿ ಕೆರೆಯ ಸುತ್ತಲಿನ ಕಳೆ ಮತ್ತು ಹೂಳನ್ನು ತೆಗೆಯಲಾಗಿದ್ದು, ಈಗ ಕೆರೆಯ ನೀರು ಪರಿಶುದ್ಧವಾಗಿ ಕಾಣುತ್ತಿದೆ. ಬೇಸಿಗೆ ಸಂದರ್ಭದಲ್ಲಿಯೂ ಅಂದರೆ, ಮಾರ್ಚ್‌, ಏಪ್ರಿಲ್‌ನಲ್ಲಿ ಕೂಡ ಕೆರೆ ಬತ್ತಿ ಹೋಗಿರಲಿಲ್ಲ. ಈ ವೇಳೆ ಸುರಿದ ಮಳೆಯೂ ಕೆರೆಯ ಸೌಂದರ್ಯ ಹೆಚ್ಚಿಸಲು ಕೊಡುಗೆ ನೀಡಿದೆ. ಈ ಎಲ್ಲ ಕಾರಣದಿಂದ ಜೀವವೈವಿಧ್ಯದ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ.

ಸುಮಾರು ಏಳು ತಿಂಗಳ ಹಿಂದೆ, ಬಾತುಕೋಳಿ, ನೀರುಹಕ್ಕಿಗಳ ಜೋಡಿ ಈ ಕೆರೆಯನ್ನೇ ಮನೆಯನ್ನಾಗಿಸಿಕೊಂಡಿದ್ದವು. ಈಗ ಅವುಗಳ ಸಂಖ್ಯೆ 30ಕ್ಕೆ ಏರಿದೆ. ಕೊಕ್ಕರೆ, ಉದ್ದಕಾಲಿನ ನೀರ ಹಕ್ಕಿ, ನೀರು ಕಾಗೆಗಳು ಕೂಡ ಕೆರೆಯನ್ನು ತವರನ್ನಾಗಿಸಿಕೊಂಡಿವೆ.

ಎಸ್‌ಟಿಪಿಗೆ ಶಿಫಾರಸು

ಕೆರೆಯ ಬಳಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಸ್ವಯಂಸೇವಕರು ಹೇಳುತ್ತಾರೆ. ಇದಕ್ಕೆ, ಬಿಬಿಎಂಪಿ ಮತ್ತು ಜಲಮಂಡಳಿ ಒಪ್ಪಿದ್ದು, ಆಗಸ್ಟ್‌ನಲ್ಲಿ ಎಸ್‌ಟಿಪಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಎಸ್‌ಟಿಪಿಯಿಂದ ಕೆರೆಗೆ ಮತ್ತೊಂದು ನೀರಿನ ಮೂಲ ಒದಗಿದಂತಾಗುತ್ತದೆ. ಅಲ್ಲದೆ, ಹೊಸದಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಅವು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ.

ಕಾಡು ಅಭಿವೃದ್ಧಿ ಉದ್ದೇಶ

‘ಶೀಘ್ರದಲ್ಲಿಯೇ ಮಿಯಾವಾಕಿ ಮಾದರಿ ಕಾಡು ಅಥವಾ ಕಿರುಅರಣ್ಯವನ್ನು ಇಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಡಿಎನ್‌ಆರ್‌ ಸನ್‌ಸಿಟಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬಳಿಯ ಜಾಗದಲ್ಲಿ ಈ ಅರಣ್ಯ ಅಭಿವೃದ್ಧಿ ಮಾಡುವ ಆಶಯವಿದೆ. ಇಬ್ಬಲೂರು ಕೆರೆಯ ಭಾಗದಿಂದ, ಬೆಳ್ಳಂದೂರಿನವರೆಗೆ ದಟ್ಟ ಕಾಡು ಬೆಳೆಸುವ ಉದ್ದೇಶವಿದೆ’ ಎಂದು ಸ್ವಯಂಸೇವಕರು ಹೇಳುತ್ತಾರೆ.

ಆಸಕ್ತ ನಾಗರಿಕರು ಈ ಕಾರ್ಯಕ್ಕೆ ಕೈಜೋಡಿಸಬಹುದು. ಈ ಕಾರ್ಯಕ್ಕೆ ನೀವು ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ibblur.lake@gmail.com ಗೆ ಜೂನ್‌ 28ರೊಳಗೆ ಮೇಲ್‌ ಮಾಡಿ ತಿಳಿಸಬಹುದು.

(ಸಾರ್ವಜನಿಕ ಧನಸಹಾಯದಿಂದ ನಡೆಯುವ ಆನ್‌ಲೈನ್‌ ಸುದ್ದಿಮಾಧ್ಯಮ ಊರ್ವಾಣಿ ಪ್ರತಿಷ್ಠಾನದ ‘ಸಿಟಿಜನ್‌ ಮ್ಯಾಟರ್ಸ್’‌ ವೆಬ್‌ಸೈಟ್‌ನ ವರದಿಗಾರರು ಈ ವರದಿ ಸಿದ್ಧಪಡಿಸಿದ್ದಾರೆ. ಇಂಗ್ಲಿಷ್‌ನಲ್ಲಿರುವ ಮೂಲ ಲೇಖನವನ್ನು ಓದಲು ಈ ಲಿಂಕ್‌ ಬಳಸಬಹುದುhttps://bengaluru.citizenmatters.in/iblur-lake-revival-flowers-trees-volunteer-plantation-47056)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT