ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಂಕಷ್ಟ ಮೆಟ್ಟಿ ನಿಲ್ಲುತ್ತವೆಯೇ ಕಿರಾಣಿ ಅಂಗಡಿಗಳು?

ನಷ್ಟದ ನಡುವೆಯೂ ಗ್ರಾಹಕರಿಗೆ ಸೇವೆ * ಭವಿಷ್ಯದಲ್ಲಿ ವ್ಯಾಪಾರ ವೃದ್ಧಿಸುವ ಆಶಾವಾದ
Last Updated 10 ಮೇ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು:ಅನುಪಮಾ ಪ್ರಾವಿಷನ್‌ ಸ್ಟೋರ್, ಅಕ್ಬರ್‌ ಫ್ರೂಟ್ಸ್‌ ಆ್ಯಂಡ್‌ ವೆಜಿಟೆಬಲ್ಸ್‌, ಕುಮಾರ್ ಮಟನ್‌– ನಮ್ಮ ಮನೆಯ ಸುತ್ತ–ಮುತ್ತಲೇ ಇರುವ ಇಂತಹ ಸಣ್ಣ ಅಂಗಡಿಗಳ ಹೆಸರುಗಳು ನಮ್ಮಲ್ಲಿ ಅನೇಕರಿಗೆ ನೆನಪಿರುವುದೇ ಇಲ್ಲ. ಕೇವಲ 200 ಚದರ ಅಡಿ ವಿಸ್ತೀರ್ಣದ ಜಾಗದಲ್ಲೇ ವ್ಯಾಪರ ನಡೆಸುವ ಕಿರಾಣಿ ಅಂಗಡಿಗಳು, ತರಕಾರಿ, ಹಣ್ಣು ಮಾರಾಟ ಮಾಡುವ ಮಳಿಗೆಗಳು ಮನೆಯ ಸನಿಹದ ‘ಮಿನಿ ಮಾರ್ಕೆಟ್‌’ ಎನಿಸಿವೆ.

ಲಾಕ್‌ಡೌನ್‌ ವೇಳೆ, ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ಮುಚ್ಚಿದ್ದ ಸಂದರ್ಭದಲ್ಲಿ, ಅಗತ್ಯ ಸಾಮಗ್ರಿಗಳನ್ನು ಮಾರಾಟ ಮಾಡುವ ಈ ಅಂಗಡಿಗಳು ಕಾರ್ಯಾಚರಿಸುವುದಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ಇವುಗಳ ಗ್ರಾಹಕರ ಪ್ರಮಾಣವೂ ಗಣನೀಯವಾಗಿ ಕುಸಿತ ಕಂಡಿತ್ತಲ್ಲದೇ ಅವುಗಳ ಪೂರೈಕೆ ಸರಪಣಿಯೂ ಏರುಪೇರಾಯಿತು.

ಲಾಕ್‌ಡೌನ್‌ ವೇಳೆ ಸಂಚಾರಕ್ಕೆ ಪಾಸ್ ಸಿಗದ ಕಾರಣ ಅನೇಕ ವರ್ತಕರು ತೀವ್ರ ನಷ್ಟ ಅನುಭವಿಸಿದರು. ಈ ಸಣ್ಣ ವರ್ತಕರರು ಲಾಕ್‌ಡೌನ್‌ಗಿಂತ ಮೊದಲು ಆಗುತ್ತಿದ್ದಷ್ಟು ವಹಿವಾಟನ್ನು ಮರಳಿ ಗಳಿಸುವುದು ಅಷ್ಟು ಸುಲಭವೇ? ಅಥವಾ ಅವರು ಕೂಡಾ ದೀರ್ಘ ಕಾಲ ನಷ್ಟ ಅನುಭವಿಸಬೇಕಾಗುತ್ತದೆಯೇ?

ನಾವು ಮಾತನಾಡಿಸಿದ ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ಅವರು ನಿತ್ಯ ಮಾರಾಟದಲ್ಲಿ ಸರಾಸರಿ ಶೇ8ರಿಂದ ಶೇ 10ರಷ್ಟು ಲಾಭ ಗಳಿಸುತ್ತಿದ್ದರು. ಲಾಕ್‌ಡೌನ್‌ ವೇಳೆ ಈ ಪ್ರಮಾಣ ಶೇ 1ಕ್ಕೆ ಇಳಿದಿದೆ.

ಪೂರೈಕೆ ಸರಪಳಿ ಏರು–ಪೇರು: ಗಗನಕ್ಕೇರಿದ ಬೆಲೆ ಬಾಣಸವಾಡಿಯಲ್ಲಿನ ಶ್ರೀ ವಿನಾಯಕ ಚಿಲ್ಲರೆ ಮತ್ತು ಸಗಟು ಮಾರಾಟ ಮಳಿಗೆಯ ಮಾಲೀಕ ಸತೀಶ್, ‘ಮೊದಲು, ಕೆ.ಆರ್. ಪುರ ಮಾರುಕಟ್ಟೆಯಿಂದಲೇ ಎಲ್ಲ ಕೃಷಿ ಉತ್ಪನ್ನಗಳನ್ನು ಸಗಟು ದರದಲ್ಲಿ ಖರೀದಿಸಿ ತರುತ್ತಿದ್ದೆ. ಪೊಲೀಸರು ಅಲ್ಲಿನ ಚಟುವಟಿಕೆ ನಿರ್ಬಂಧಿಸಿದ ಮೇಲೆ, ಎಲೆಕ್ಟ್ರಾನಿಕ್‌ ಸಿಟಿಯಿಂದ ತರುತ್ತಿದ್ದೇನೆ’ ಎನ್ನುತ್ತಾರೆ.

‘ಮಾರುಕಟ್ಟೆಗೆ ಈರುಳ್ಳಿ ಮತ್ತು ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ಸುಲಭವಾಗಿ ದೊರೆಯುತ್ತಿದ್ದು, ಬೆಲೆಯೂ ಕಡಿಮೆ ಇದೆ. ಆದರೆ, ಒಂದು ಚೀಲ ಬೀನ್ಸ್‌ಗೆ ₹950 ತೆಗೆದುಕೊಳ್ಳುತ್ತಿದ್ದಾರೆ. ಈ ಮೊದಲು ಕೇವಲ ₹350ಕ್ಕೆ ಬೀನ್ಸ್‌ ಸಿಗುತ್ತಿತ್ತು. ಅಲ್ಲದೆ, ಬದನೆಕಾಯಿ ದರವೂ ಕೂಡ ದುಪ್ಪಟ್ಟಾಗಿದ್ದು, ಒಂದು ಚೀಲಕ್ಕೆ ₹300ನಷ್ಟು ಹೆಚ್ಚಳವಾಗಿದೆ’ ಎಂದು ಹೇಳಿದರು.

‘ಅಂತರ್‌ ಜಿಲ್ಲಾ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಕೋಲಾರ ಮತ್ತು ಇತರೆ ಜಿಲ್ಲೆಗಳಿಂದ ಶೇ 20ರಷ್ಟು ರೈತರಿಗೆ ಮಾತ್ರ ನಗರ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ಬೇಡಿಕೆ ಹಿಂದಿನಷ್ಟೇ ಇದ್ದರೂ, ತರಕಾರಿಗಳ ಪೂರೈಕೆ ಕಡಿಮೆ ಇರುವುದರಿಂದ ದರ ಹೆಚ್ಚಾಗುತ್ತಿದೆ’ ಎಂದು ಮತ್ತೊಬ್ಬ ಚಿಲ್ಲರೆ ಮಾರುಕಟ್ಟೆ ವರ್ತಕ ಮಧು ಅಭಿಪ್ರಾಯಪಟ್ಟರು.

ಮಾಂಸ ಮಾರಾಟದ ಮೇಲೂ ಪರಿಣಾಮ: ಲಾಕ್‌ಡೌನ್‌ ಪ್ರಾರಂಭವಾದ ಸಮಯದಲ್ಲಿ ಕೋಳಿ ಮತ್ತು ಕುರಿ ಮಾಂಸದ ದರ ಗಗನಕ್ಕೇರಿತ್ತು. ಬಿಬಿಎಂಪಿ ಇವುಗಳ ದರ ನಿಗದಿಗೊಳಿಸಿದ ನಂತರ ದರ ಕಡಿಮೆಯಾಯಿತು.

‘ಫ್ರೆಷ್‌ ಮೀಟ್‌ ಜೋನ್‌’ ಮಾಲೀಕ ವಿಜಯ್‌ ಕುಮಾರ್, ‘ಲಾಕ್‌ಡೌನ್‌ ಪ್ರಾರಂಭವಾದ ನಂತರ, ಬಿಬಿಎಂಪಿ ದರ ಇಳಿಸಲು ಹೇಳಿದೆ. ಆದರೆ, ಸಾರಿಗೆ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಲಾಭದ ಪ್ರಮಾಣ ಕಡಿಮೆಯಾಗಿದೆ’ ಎನ್ನುತ್ತಾರೆ. ‘ಜನ ಬಿಸ್ಕತ್ತು, ಕೇಕ್‌, ಮ್ಯಾಗಿ, ಸೋಪ್‌ ಮತ್ತಿತರ ಸಂಸ್ಕರಿತ ಆಹಾರ ಪದಾರ್ಥಗಳನ್ನು ಕೇಳುತ್ತಾರೆ. ಆದರೆ, ಅದನ್ನು ಪೂರೈಸಲು ನಮ್ಮಿಂದ ಆಗುತ್ತಿಲ್ಲ. ದೊಡ್ಡ ಕಂಪನಿಗಳು ನೇರವಾಗಿ ಫ್ಯಾಕ್ಟರಿಗೇ ಬಂದು ತೆಗೆದುಕೊಳ್ಳಿ ಎಂದು ಹೇಳುತ್ತಿವೆ. ಅಷ್ಟೊಂದು ಮಾನವ ಸಂಪನ್ಮೂಲ ನಮ್ಮ ಬಳಿ ಇಲ್ಲ’ ಎಂದು ವರ್ತಕರೊಬ್ಬರು ಹೇಳಿದರು.

‘ಬ್ರ್ಯಾಂಡೆಡ್‌ ಉತ್ಪನ್ನಗಳ ದರದಲ್ಲಿ ಹೆಚ್ಚಿನ ವ್ಯತ್ಯಾವಾಗಿಲ್ಲ. ಆದರೆ, ಸ್ಥಳೀಯವಾಗಿ ಲಭ್ಯವಾಗುವ ಅಕ್ಕಿ, ಬೇಳೆ ಮತ್ತು ಗೋಧಿ ಹಿಟ್ಟಿನಂತಹ ಪದಾರ್ಥಗಳ ದರದಲ್ಲಿ ಶೇ 5ರಿಂದ ಶೇ 10ರಷ್ಟು ಏರಿಕೆಯಾಗಿದೆ’ ಎನ್ನುತ್ತಾರೆ ಸಿಂಗಸಂದ್ರದ ಫ್ಯಾಬ್‌ ಸೂಪರ್‌ಮಾರ್ಕೆಟ್‌ನ ಮಾಲೀಕ ನಾಸಿರ್.

ಗ್ರಾಹಕರ ಸಂಖ್ಯೆ ಇಳಿಕೆ

‘ಗ್ರಾಹಕರು ಮೂರರಿಂದ ಐದು ದಿನಗಳಿಗಾಗುವಷ್ಟು ಹಣ್ಣು ಮತ್ತು ತರಕಾರಿಗಳನ್ನು ಒಮ್ಮೆಗೇ ಖರೀದಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡುವ ಭೀತಿಯಿಂದ ನಿತ್ಯ ಮನೆಯಿಂದ ಹೊರಗೆ ಬರಲೂ ಯಾರೂ ಮುಂದಾಗುತ್ತಿಲ್ಲ. ಹೀಗಾಗಿ, ಗ್ರಾಹಕರ ಸಂಖ್ಯೆ ಶೇ 25ರಷ್ಟು ಕಡಿಮೆಯಾಗಿದೆ’ ಎನ್ನುತ್ತಾರೆ ಮಳಿಗೆಯೊಂದರ ಮುಖ್ಯಸ್ಥರಾದ ಲೋಕೇಶ್ವರಿ.

‘ಯಶವಂತಪುರ ಎಪಿಎಂಸಿಯಿಂದ ಅಕ್ಕಿ, ಬೇಳೆ ಮತ್ತಿತರ ದಿನಸಿ ಪದಾರ್ಥ ತಂದು ಮಾರಾಟ ಮಾಡುತ್ತಿದ್ದೆ. ಆಂಧ್ರಪ್ರದೇಶ, ತಮಿಳುನಾಡಿನಿಂದ ಬಂದ ವಲಸೆ ಕಾರ್ಮಿಕರೇ ಹೆಚ್ಚಾಗಿ ಖರೀದಿಸುತ್ತಿದ್ದರು. ಇವರಲ್ಲಿ ಬಹುತೇಕರು ಈಗ ತವರು ರಾಜ್ಯಕ್ಕೆ ಮರಳಿರುವುದರಿಂದ ಶೇ 90ರಷ್ಟು ವಹಿವಾಟು ಕುಸಿದಿದೆ’ ಎನ್ನುತ್ತಾರೆ ಇಂದಿರಾನಗರದಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ಭೂಪಾಲ್.

(ಸಾರ್ವಜನಿಕ ಧನಸಹಾಯದಿಂದ ನಡೆಯುವ ಆನ್‌ಲೈನ್‌ ಸುದ್ದಿಮಾಧ್ಯಮ ಊರ್ವಾಣಿ ಪ್ರತಿಷ್ಠಾನದ ‘ಸಿಟಿಜನ್‌ ಮ್ಯಾಟರ್ಸ್’‌ ವೆಬ್‌ಸೈಟ್‌ನ ವರದಿಗಾರರು ಈ ವರದಿ ಸಿದ್ಧಪಡಿಸಿದ್ದಾರೆ. ಇಂಗ್ಲಿಷ್‌ನಲ್ಲಿರುವ ಮೂಲ ಲೇಖನವನ್ನು ಓದಲು ಈ ಲಿಂಕ್‌ ಬಳಸಬಹುದು https://bengaluru.citizenmatters.in/neighbourhood-retail-store-economic-recovery-lockdown-supply-chain-footfall-home-delivery-45108)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT