ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ: ಪ್ರತಿಭಟನೆಗೆ ‘ಟಿಂಡರ್‌’ ಆ್ಯಪ್‌

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ತಡೆಹಿಡಿಯುವುದಕ್ಕೆ ಸಡ್ಡು
Last Updated 26 ಡಿಸೆಂಬರ್ 2019, 7:28 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ವಿರುದ್ಧ ವಿದ್ಯಾರ್ಥಿ ಸಮುದಾಯದ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿರುವಂತೆಯೇ, ಪ್ರೀತಿಯ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಟಿಂಡರ್‌ ಆ್ಯಪ್‌ ಅನ್ನೇ ಇದಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ.

‘ಸಿಎಎ ವಿರುದ್ಧ ಪ್ರತಿಭಟನೆಯ ನನ್ನ ಸಂದೇಶವನ್ನುಇನ್‌ಸ್ಟಾಗ್ರಾಂನಲ್ಲಿ ಸ್ಥಗಿತಗೊಳಿಸಲಾಯಿತು. ಹೀಗಾಗಿ ನಾನು ನನ್ನ ಸಂದೇಶವನ್ನು ಇತರರಿಗೆ ಮನವರಿಕೆ ಮಾಡಲು ‘ಟಿಂಡರ್‌’ ಆ್ಯಪ್‌ ಬಳಸುವ ಹಾದಿ ತುಳಿದೆ’ ಎಂದು ನಗರದ 19 ವರ್ಷದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಎಂಬುವವರು ಹೇಳಿಕೊಂಡರು.

ಇದೇ 19ರಂದು ಪುರಭವನದ ಬಳಿ ಬೃಹತ್‌ ಪ್ರತಿಭಟನೆ ನಡೆದಿತ್ತು. ಮರುದಿನ ಅವರು ‘ಬೆಂಗಳೂರು_ಪ್ರೊಟೆಸ್ಟ್‌’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದ ತಕ್ಷಣ ಅದನ್ನು ತಡೆಹಿಡಿಯಲಾಗಿತ್ತು. ಆದರೆ ಅವರು ಆದಾಗಲೇ ಟಿಂಡರ್ ಆ್ಯಪ್‌ನಲ್ಲಿ ತಮ್ಮ ಸಂದೇಶ ರವಾನಿಸುವ ಹಾದಿಯನ್ನೂ ಕಂಡುಕೊಂಡಿದ್ದರು.

‘ನಿಮ್ಮಲ್ಲಿ ಟಿಂಡರ್‌ ಅಕೌಂಟ್‌ಗೆ ಸಂಪರ್ಕ ಹೊಂದಿರುವ ಇನ್‌ಸ್ಟಾಗ್ರಾಂ ಇದ್ದರೆ, ಹಲವರು ನಿಮ್ಮ ಇನ್‌ಸ್ಟಾಗ್ರಾಂ ನೋಡಿ ಸಂದೇಶಗಳನ್ನು ಹಾಕಿಯೇ ಹಾಕುತ್ತಾರೆ. ಸಿಎಎ ವಿರುದ್ಧದ ಪ್ರತಿಭಟನೆಗೆ ಇದೇ ವೇದಿಕೆಯನ್ನು ಏಕೆ ಬಳಸಬಾರದು ಎಂದು ಯೋಚಿಸಿ ನಾನು ಈ ಹಾದಿ ಕಂಡುಕೊಂಡೆ’ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ಅಮೂಲ್ಯ ಅವರು ಇದೇ 15ರಿಂದೀಚೆಗೆ ಪ್ರತಿಭಟನಾ ಬ್ಯಾನರ್‌ಗಳನ್ನು ತಮ್ಮ ಟಿಂಡರ್ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುತ್ತಲೇ ಇದ್ದು, 19ರಿಂದೀಚೆಗೆ ಆದನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ‘ಈ ಪ್ರತಿಭಟನೆಗಳನ್ನು ಗಮನಿಸುವ ಜನರ ಸಂಖ್ಯೆ ಹೆಚ್ಚಿರುವುದನ್ನು ನಾವು ಗಮನಿಸಿದ್ದೇವೆ’ ಎಂದು ಅವರು ಹೇಳಿದರು.

ಆದರೆ ಬುಧವಾರ ಬೆಳಿಗ್ಗೆ ಅವರ ಟಿಂಡರ್ ಖಾತೆಯನ್ನೂ ಸಹ ತಡೆಹಿಡಿಯಲಾಗಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಇತರ ಹಲವು ಪ್ರತಿಭಟನಾಕಾರರು ಸಹ ತಮಗೂ ಇದೇ ರೀತಿಯ ಅನುಭವ ಆಗಿದ್ದನ್ನು ತಿಳಿಸಿ, ‘ಪ್ರತಿಭಟನೆ’ ಎಂಬ ಪದವನ್ನು ಇನ್‌ಸ್ಟಾಗ್ರಾಂ ದಾಖಲಿಸುತ್ತಲೇ ಇಲ್ಲ ಎಂದು ಹೇಳಿದ್ದಾರೆ.

ಹಿಂಸೆ ತಡೆಗಟ್ಟಲು ಇದು ಅಗತ್ಯ: ‘ಜನರು ಹಾಕುವ ಪೋಸ್ಟ್‌ಗಳಿಂದ ಹಿಂಸಾಚಾರ ಭುಗಿಲೇಳುತ್ತದೆ ಎಂದಾದರೆ ಅದನ್ನು ನಾವು ತಡೆಗಟ್ಟಲೇಬೇಕಾಗುತ್ತದೆ. ಭಾರತದಲ್ಲಿ ಇದಕ್ಕಾಗಿಯೇ ಎಂಟು ಮಂದಿ ಕೆಲಸ ಮಾಡುತ್ತಿದ್ದಾರೆ’ ಎಂದು ಇನ್‌ಸ್ಟಾಗ್ರಾಂ ಮಾಲೀಕತ್ವವನ್ನೂ ಹೊಂದಿರುವ ಫೇಸ್‌ಬುಕ್‌ನ ವಕ್ತಾರರೊಬ್ಬರು ತಿಳಿಸಿದರು.

‘ಹಾನಿಕಾರಕ ಸಂದೇಶಗಳು’ ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ ಎಂಬುದಕ್ಕೆ ಪೊಲೀಸರಿಂದ ನಿಖರ ಉತ್ತರ ಸಿಗಲಿಲ್ಲ. ನಕಲಿ ಬಳಕೆದಾರರು ಮತ್ತೆ ಮತ್ತೆ ಹೇಳುವಂತಹ ‘ಹಾನಿಕಾರಕ ಮಾಹಿತಿ’ಯನ್ನೇ ನಿಷೇಧಿಸುವ ಸಾಧ್ಯತೆ ಇರುತ್ತದೆ. ಸೈಬರ್‌ ಅ‍ಪರಾಧ ಪರಿಣಿತ ಸುಹೈಲ್‌ (ಹೆಸರು ಬದಲಿಸಲಾಗಿದೆ) ಎಂಬುವವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT