ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ಕರುಣೆಯ ಕಪಾಟು’

ದಾನಿಗಳು ಹಾಗೂ ಬಡವರ ನಡುವೆ ಸೇತುವೆಯಾದ ‘ವಾಲ್‌ ಆಫ್‌ ಕೈಂಡ್‌ನೆಸ್‌’
Last Updated 1 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಏನು ಮಾಡುವುದು?

ಅನಾಥರಿಗೆ, ಬಡವರಿಗೆ ಸಹಾಯ ಮಾಡಬೇಕು. ಆದರೆ, ಮಾಡೋಕೆ ಆಗ್ತಿಲ್ವಲ್ಲಾ..?

ಇಂಥ ಗೊಂದಲಗಳಿಗೆ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿರುವ ‘ವಾಲ್ ಆಫ್‌ ಕೈಂಡ್‌ನೆಸ್‌’ (ಉದಾರದ ಗೋಡೆ) ಒಂದು ಪರಿಹಾರ.

ನೀವು ಬಳಸಿದ ಬಟ್ಟೆ, ಚಪ್ಪಲಿ ಮುಂತಾದ ವಸ್ತುಗಳು ಸ್ವಲ್ಪ ಹಳೆಯದಾದರೂ, ಅದನ್ನು ಮೂಲೆಗೆ ಬಿಸಾಡಿ ಹೊಸದನ್ನು ಖರೀದಿ ಮಾಡುವುದು ವಾಡಿಕೆ. ಹೊಸದೇನೋ ಮನೆಗೆ ಬಂತು. ಆದರೆ, ಹಳೆಯ ವಸ್ತುಗಳು ಹಾಗೇ ಇದೆಯಲ್ಲಾ ಎಂದು ಕಸದ ತೊಟ್ಟಿಗೋ ಅಥವಾ ರಸ್ತೆ ಪಕ್ಕದಲ್ಲೋ ಬಿಸಾಡುತ್ತೀರಿ. ಕ್ರಮೇಣ ಇದು ಯಾರಿಗೂ ಉಪಯೋಗಕ್ಕೆ ಬಾರದೆ ಹೋಗುತ್ತದೆ.

ಇದನ್ನು ಮನಗಂಡ ಬಸವೇಶ್ವರ ನಗರದ ರೋಟರಿ ಕ್ಲಬ್ ಹಳೆಯ ವಸ್ತುಗಳನ್ನು ಬಡವರಿಗೆ ತಲುಪಿಸಲು ‘ವಾಲ್‌ ಆಫ್‌ ಕೈಂಡ್‌ನೆಸ್‌’ ಎಂಬ ಕ‍ಪಾಟನ್ನು ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ನಿರ್ಮಿಸಿದೆ. ಇಲ್ಲಿ ನೀವು ಬಳಸಿದ ಹಳೆಯ ಬಟ್ಟೆ, ಪುಸ್ತಕ‌, ಚಪ್ಪಲಿ, ಶೂ, ಶಾಲು, ಕಂಬಳಿ ಮುಂತಾದ ವಸ್ತುಗಳನ್ನು ಇಟ್ಟು ಹೋಗಬಹುದು. ಅಗತ್ಯವಿದ್ದವರು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ನಿಮಗೂ ಉಪಯುಕ್ತ ಆಗುವ ವಸ್ತುಗಳು ಬೇಕಿದ್ದರೆ ಅಲ್ಲಿಂದ ತೆಗೆದುಕೊಂಡು ಹೋಗಬಹುದು.

‘ಒಮ್ಮೆ ಕುಶಾಲನಗರಕ್ಕೆ ಭೇಟಿ ನೀಡಿದಾಗ ಅಲ್ಲಿ ಈ ರೀತಿ ಹಳೆಯ ವಸ್ತುಗಳನ್ನು ಸಾರ್ವಜನಿಕವಾಗಿ ಇಡಲಾಗಿತ್ತು. ಈ ರೀತಿ ಬೆಂಗಳೂರಿನಲ್ಲೂ ವ್ಯವಸ್ಥೆ ಮಾಡಿದರೆ ಅನೇಕ ಬಡವರಿಗೆ, ನಿರ್ಗತಿಕರಿಗೆ ತಕ್ಕಮಟ್ಟಿನ ಸಹಾಯ ಆಗಬಹುದು ಎಂಬ ಉದ್ದೇಶದಿಂದ ರಾಜಾಜಿನಗರದಲ್ಲಿ ಪ್ರಯೋಗಾತ್ಮಕವಾಗಿ ಸಾರ್ವಜನಿಕ ಕಪಾಟು ನಿರ್ಮಿಸಿದೆವು. ಆದರೆ, ಊಹೆಗೂ ಮೀರಿ ಹೆಚ್ಚು ಉಪಕಾರಿಯಾಗಿದೆ’ ಎನ್ನುತ್ತಾರೆ ಬಸವೇಶ್ವರ ನಗರ ರೋಟರಿ ಅಧ್ಯಕ್ಷ ರಾಘವ ರೆಡ್ಡಿ.

ಈ ಉಪಾಯಕ್ಕೆ ಸ್ಪಂದಿಸಿದ ‘ಎಆರ್‌ಕೆ ಎರ್ಗೋ ಸ್ಪೇಸ್‌ ಡಿಸೈನ್ ಪ್ರೈವೇಟ್‌ ಲಿಮಿಟೆಡ್‌’ ಸಂಸ್ಥೆ ಉಚಿತವಾಗಿ ಕಪಾಟು ವಿನ್ಯಾಸ ಮಾಡಿ ಕೊಡುಗೆಯಾಗಿ ನೀಡಿದೆ.ಇದನ್ನು ಥೇಟ್ ಮನೆಯ ಕಪಾಟಿನ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಭದ್ರತೆಗಾಗಿ ಇಲ್ಲೊಂದು ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

ರಾತ್ರಿ 12 ಗಂಟೆಯಾದರೂ ಕೆಲವರು ಬಂದು ಕಪಾಟಿನಲ್ಲಿ ವಸ್ತುಗಳನ್ನಿಟ್ಟು ಹೋಗುತ್ತಿದ್ದಾರೆ. ಈ ಕಾರ್ಯಕ್ಕೆ ಹಲವರು ಕರೆ ಮಾಡಿ ಸಲಹೆ ಕೇಳುತ್ತಾರಂತೆ. ಪಕ್ಕದ ತಮಿಳುನಾಡಿನಿಂದಲೂ ಕರೆ ಮಾಡಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ರೋಟರಿ ಹೆಮ್ಮೆ.

ನೀವೂ ಸಹ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಇಲ್ಲಿಟ್ಟು ಬನ್ನಿ. ನೀವು ಬಳಸಿದ ಹಳೆಯ ಬಟ್ಟೆಗಳು ಬಡವರಿಗೆ ಹೊಸ ಬಟ್ಟೆ ಧರಿಸಿದ ಸಂತಸ ನೀಡಬಲ್ಲದು.

ನಗರದೆಲ್ಲೆಡೆ ಸ್ಥಾಪಿಸಲು ಸಾರ್ವಜನಿಕರ ಮನವಿ

ರೋಟರಿ ಕ್ಲಬ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಲ್ ಆಫ್‌ ಕೈಂಡ್‌ನೆಸ್‌ ಕಪಾಟಿನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಇದನ್ನು ವೀಕ್ಷಿಸಿದ ಸಾರ್ವಜನಿಕರು ನಮ್ಮಲ್ಲೂ ಹಳೆಯ ವಸ್ತುಗಳಿವೆ. ಅದನ್ನು ಬಡವರಿಗೆ ದಾನ ಮಾಡಲು ತಮ್ಮ ಸಮೀಪದಲ್ಲೂ ಈ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಾನವೀಯತೆ ಜೀವಂತ

ಪ್ರತಿಯೊಬ್ಬರಲ್ಲೂ ಮಾನವೀಯತೆ ಗುಣ ಇದ್ದೇ ಇರುತ್ತದೆ. ಬಡವರನ್ನು ಕಂಡಾಗ ಮನಸ್ಸಿಗೆ ನೋವಾಗಿ ಅವರಿಗೆ ಕೈಲಾಗುವ ಸಹಾಯ ಮಾಡಬೇಕೆಂಬ ಮನಸ್ಥಿತಿ ಎಲ್ಲರಲ್ಲೂ ಇದೆ. ಆದರೆ, ಬಿಡುವು ಮಾಡಿಕೊಂಡು ಅವರ ಬಳಿ ತರೆಳಿ ದಾನ ಮಾಡುವಲ್ಲಿ ಸಂಕೋಚ ಭಾವನೆಯನ್ನು ಹೊಂದಿರುತ್ತಾರೆ. ಆರ್ಥಿಕವಾಗಿ ನೆರವು ನೀಡದೇ ಹೋದರೂ ಈ ರೀತಿ ಬಳಕೆಯಾದ ವಸ್ತುಗಳನ್ನಾದರೂ ನೀಡಿ ಬಡವರ ಮುಖದಲ್ಲಿ ನಗು ಮೂಡಿಸಬಹುದು. ಒಟ್ಟಾರೆ ಮಾನವೀಯತೆ ಇನ್ನೂ ಜೀವಂತವಾಗಿದೆ.

ಏನೇನು ದಾನ ಮಾಡಬಹುದು?

ಹಳೆಯ ಪುಸ್ತಕಗಳು

ಬಟ್ಟೆಗಳು (ಸೀರೆ, ಪ್ಯಾಂಟ್‌, ಟಿಶರ್ಟ್‌, ಸ್ವೆಟರ್..)

ಶಾಲಾ ಬ್ಯಾಗ್‌

ಚಪ್ಪಲಿ, ಶೂ

ಪಾತ್ರೆಗಳು

ಬೆಡ್‌ಶೀಟ್‌

ಟವಲ್‌

ಶಾಲು

ಛತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT