ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಕ್ಷಿಣ’ದಲ್ಲಿ ಸಂಚಾರ ದಟ್ಟಣೆ

ಒಳಚರಂಡಿ ಪೈಪ್‌ಲೈನ್‌ ಕಾಮಗಾರಿ; ರಸ್ತೆಯಲ್ಲಿ ಮಣ್ಣು
Last Updated 25 ಜೂನ್ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ವಿ.ವಿ.ಪುರದಿಂದ ಜೆ.ಸಿ.ರಸ್ತೆಯವರೆಗೆ ಒಳಚರಂಡಿ ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಅದರಿಂದಾಗಿ ನಗರದ ದಕ್ಷಿಣ ಹಾಗೂ ಕೇಂದ್ರ ಭಾಗದಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ಆರಂಭವಾಗಿ ಹಲವು ದಿನಗಳಾಗಿದ್ದು, ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಜೆ.ಸಿ.ರಸ್ತೆಯಲ್ಲಿ ನೆಲವನ್ನು ಅಗೆದು ಗುಂಡಿ ತೋಡಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಗುಂಡಿಯನ್ನು ಮುಚ್ಚಲಾಗಿದ್ದು, ಅದರ ಮಣ್ಣು ರಸ್ತೆಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಜ್ಜನ್‌ರಾವ್ ವೃತ್ತದಿಂದ ಲಾಲ್‌ಬಾಗ್‌ ಪಶ್ಚಿಮ ಗೇಟ್‌ವರೆಗಿನ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ.

‘ಕಾಮಗಾರಿ ಆರಂಭವಾದಾಗಿನಿಂದ ಸಜ್ಜನ್‌ರಾವ್ ವೃತ್ತದಿಂದ ಪುರಭವನ ವೃತ್ತದವರೆಗೆ ಹೋಗಲು ಕಷ್ಟಪಡುತ್ತಿದ್ದೇವೆ. ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಇದೇ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಎಲ್‌ಐಸಿ ಏಜೆಂಟ್ ಕೈಲಾಶ್ ರಾಜಶೇಖರ್ ಹೇಳಿದರು.

ಒತ್ತುವರಿಯೂ ಕಾರಣ: ‘ಕಾಮಗಾರಿ ನಡೆಯುತ್ತಿರುವ ರಸ್ತೆಗೆ ಹೊಂದಿಕೊಂಡಿರುವ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದು ಸಹ ವಾಹನಗಳ ದಟ್ಟಣೆಗೆ ಕಾರಣವಾಗುತ್ತಿದೆ’ ಎಂದು ಗಿರಿನಗರದ ನಿವಾಸಿ ರಂಜನಿ ಹೇಳಿದರು.

‘ಒತ್ತುವರಿ ಸಂಬಂಧ ಹಲವು ಬಾರಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅದರ ತೆರವು ಬಗ್ಗೆ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇಡೀ ರಸ್ತೆಯೇ ಒತ್ತುವರಿ ಆಗಲಿದೆ’ ಎಂದರು.

‘20 ದಿನಗಳಲ್ಲಿ ಕಾಮಗಾರಿ ಪೂರ್ಣ’

‘ಒಳಚರಂಡಿ ಪೈಪ್‌ ಅಳವಡಿಕೆ ಕಾಮಗಾರಿ 20 ದಿನದಲ್ಲಿ ಪೂರ್ಣಗೊಳ್ಳಲಿದೆ. ಶೀಘ್ರವೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿ ಮುಂದುವರಿಸುವಂತೆ ಸಹಾಯಕ ಎಂಜಿನಿಯರ್ ಅವರಿಗೆ ಸೂಚಿಸುತ್ತೇನೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ನಿತ್ಯಾನಂದಕುಮಾರ್ ಹೇಳಿದರು.

ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್, ‘ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸ್ಥಳೀಯ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ನೆರವು ಪಡೆದು ಜಾಗ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT